ಪತನಗೊಂಡಿದ್ದ ಲಯನ್ ಏರ್ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್‌ನಲ್ಲಿ 2 ಗಂಟೆ ಸಂಭಾಷಣೆ

Update: 2019-01-18 14:20 GMT

ಜಕಾರ್ತ, ಜ. 18: ಅಕ್ಟೋಬರ್‌ನಲ್ಲಿ ಜಾವಾ ಸಮುದ್ರದಲ್ಲಿ ಪತನಗೊಂಡ ಲಯನ್ ಏರ್ ವಿಮಾನಯಾನ ಸಂಸ್ಥೆಯ ವಿಮಾನದ ಕಾಕ್‌ಪಿಟ್ ವಾಯ್ಸೆ ರೆಕಾರ್ಡರ್‌ನಲ್ಲಿ ಎರಡು ಗಂಟೆಗಳಿಗೂ ಹೆಚ್ಚಿನ ಅವಧಿಯ ಸಂಭಾಷಣೆ ದಾಖಲಾಗಿದೆ.

ವಿಮಾನ ಅಪಘಾತದ ಕಾರಣದ ಬಗೆ ತನಿಖೆ ನಡೆಸುತ್ತಿರುವ ತನಿಖಾ ತಂಡವು ಮುಂದಿನ ವಾರ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್‌ನ ವಿಶ್ಲೇಷಣೆ ನಡೆಸಲಿದೆ.

124 ನಿಮಿಷಗಳ ಧ್ವನಿಮುದ್ರಣವನ್ನು ಇನ್ನೊಂದು ಉಪಕರಣಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಯನ್ನು ಮಂಗಳವಾರದ ವೇಳೆಗೆ ಪೂರ್ಣಗೊಳಿಸಲಿದ್ದಾರೆ ಎಂದು ಸಮಿತಿಯ ಮುಖ್ಯ ತನಿಖಾಧಿಕಾರಿ ನುರ್ಕಹ್ಯೊ ಉಟೊಮೊ ಶುಕ್ರವಾರ ತಿಳಿಸಿದರು.

ವಿಮಾನದ ಕೊನೆಯ ಹಾರಾಟದ ದತ್ತಾಂಶದ ಗುಣಮಟ್ಟ ಉತ್ತಮವಾಗಿದೆ ಎಂದು ಅವರು ಹೇಳಿದರು.

ವಿಮಾನವು ತನ್ನ ಕೊನೆಯ ಹಾರಾಟದಲ್ಲಿ ಹಾರಾಟ ಆರಂಭಿಸಿದ 15 ನಿಮಿಷಗಳಿಗೂ ಕಡಿಮೆ ಅವಧಿಯಲ್ಲಿ ಸಮುದ್ರಕ್ಕೆ ಪತನಗೊಂಡಿತ್ತು.

ಕಾಕ್‌ಪಿಟ್ ವಾಯ್ಸ ರೆಕಾರ್ಡರ್‌ನ ಧ್ವನಿಮುದ್ರಣವನ್ನು ನವೆಂಬರ್‌ನಲ್ಲಿ ಪತ್ತೆಯಾದ ಫ್ಲೈಟ್ ಡಾಟಾ ರೆಕಾರ್ಡರ್‌ನ ಮಾಹಿತಿಯೊಂದಿಗೆ ತುಲನಾತ್ಮಕ ವಿಶ್ಲೇಷಣೆ ನಡೆಸುವ ಕಾರ್ಯಕ್ಕೆ ಎರಡು-ಮೂರು ತಿಂಗಳು ಬೇಕಾಗಬಹುದು ಎಂದು ಸಮಿತಿಯ ಉಪಾಧ್ಯಕ್ಷ ಹರ್ಯೊ ಸಟ್ಮಿಕೊ ಹೇಳಿದರು.

ಅಕ್ಟೋಬರ್ 29ರಂದು ಜಕಾರ್ತದಿಂದ ಪಂಗ್‌ಕಲ್ ಪಿನಂಗ್ ದ್ವೀಪಕ್ಕೆ ಹಾರುತ್ತಿದ್ದ ಲಯನ್ ಏರ್‌ನ ಜೆಟಿ610 ವಿಮಾನ ಹಾರಾಟ ಆರಂಭಿಸಿದ ಸ್ವಲ್ಪವೇ ಹೊತ್ತಿನಲ್ಲಿ ಸಮುದ್ರಕ್ಕೆ ಪತನಗೊಂಡಿತ್ತು. ಅದರಲ್ಲಿದ್ದ 189 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News