ಸರಕಾರಿ ಶಾಲೆ-ಇಂದಿರಾ ಕ್ಯಾಂಟೀನ್‌ಗಳಲ್ಲಿ ಬಿಸಿಯೂಟದಲ್ಲಿ ಸಿರಿಧಾನ್ಯ ಆಹಾರ ವಿತರಣೆಗೆ ಚಿಂತನೆ: ಕುಮಾರಸ್ವಾಮಿ

Update: 2019-01-18 14:56 GMT

ಬೆಂಗಳೂರು, ಜ.18: ರಾಜ್ಯಾದ್ಯಂತ ಸರಕಾರಿ ಶಾಲೆಗಳ ಮಧ್ಯಾಹ್ನ ಬಿಸಿಯೂಟದಲ್ಲಿ ಹಾಗೂ ಇಂದಿರಾ ಕ್ಯಾಂಟೀನ್‌ಗಳಲ್ಲಿ ಸಿರಿಧಾನ್ಯಗಳ ಆಹಾರ ವಿತರಣೆ ಸಂಬಂಧ ಸರಕಾರದ ಮಟ್ಟದಲ್ಲಿ ಚಿಂತನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಕೃಷಿ ಇಲಾಖೆ ಹಾಗೂ ರಾಜ್ಯ ಸರಕಾರದ ಸಹಯೋಗದಲ್ಲಿ ಆಯೋಜಿಸಿದ್ದ ‘ಸಾವಯವ ಮತ್ತು ಸಿರಿಧಾನ್ಯಗಳು 2019 ಅಂತರ್‌ರಾಷ್ಟ್ರೀಯ ವಾಣಿಜ್ಯ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರು ಕೃಷಿ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಉದ್ದೇಶದಿಂದ ಹಾಗೂ ಸಿರಿಧಾನ್ಯಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಬಿಸಿಯೂಟದಲ್ಲಿ ಇವುಗಳನ್ನು ಬಳಸಿಕೊಳ್ಳಲು ಮುಂದಾಗಿದ್ದೇವೆ ಎಂದರು.

ಕಳೆದ 20 ವರ್ಷಗಳ ಮಳೆ ಪ್ರಮಾಣ ಆಧರಿಸಿ ಯಾವ ಪ್ರದೇಶಕ್ಕೆ ಯಾವ ಬೆಳೆ ಶಿಫಾರಸ್ಸು ಮಾಡಬೇಕು ಎಂಬುದರ ಕುರಿತು ಅಗತ್ಯವಿರುವ ಯೋಜನೆಗಳನ್ನು ಸರಕಾರ ರೂಪಿಸಲಿದೆ. ಕೃಷಿಯನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ಅವಶ್ಯಕವಿರುವ ಎಲ್ಲ ಯೋಜನೆಗಳನ್ನು ಜಾರಿ ಮಾಡಲಾಗುತ್ತದೆ. ಕೃಷಿಯಲ್ಲಿ ಬದಲಾವಣೆ ಕಂಡರೆ ಕೃಷಿ ಲಾಭದಾಯವಾಗಲಿದೆ ಎನ್ನುವುದನ್ನು ಸಾಬೀತುಪಡಿಸುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಕೃಷಿ ಮಾಡಿದರೆ ಕುಟುಂಬ ನಿರ್ವಹಣೆ ಮಾಡುವುದು ಕಷ್ಟವಾಗುತ್ತದೆ ಎಂಬ ಅಭಿಪ್ರಾಯ ಹಲವರಲ್ಲಿದ್ದು, ಕೃಷಿ ಮಾಡಲು ನಿರಾಸಕ್ತಿ ತೋರುತ್ತಿದ್ದಾರೆ. ಹೀಗಾಗಿ, ರಾಸಾಯನಿಕಗಳಿಂದ ಮುಕ್ತರಾಗಿ ಸಾವಯವ ಕೃಷಿಯ ಕಡೆಗೆ ಕೃಷಿಕರನ್ನು ಆಕರ್ಷಿಸುವ ಉದ್ದೇಶದಿಂದ ಮೂರು ದಿನಗಳ ಮೇಳ ಯಶಸ್ವಿಯಾಗಲಿದೆ ಎಂದು ಮುಖ್ಯಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಸರಕಾರ ಈಗಾಗಲೇ ಕೃಷಿ ಪದ್ಧತಿಯಲ್ಲಿ ಬದಲಾವಣೆಗೆ ಮುಂದಾಗಿದ್ದು, ಇಸ್ರೇಲ್ ಮಾದರಿ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಸರಕಾರ ರೈತರನ್ನು ಪ್ರೋತ್ಸಾಸುತ್ತಿದೆ. ಅಲ್ಲದೆ, ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಹಾಗೂ ಮಾರುಕಟ್ಟೆ ಸೌಲಭ್ಯ ಸಿಗುತ್ತಿಲ್ಲ ಎಂಬ ಆತಂಕದಲ್ಲಿದ್ದಾರೆ. ಇದನ್ನು ನಿವಾರಿಸುವ ಸಲುವಾಗಿ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ದೊರಕಿಸಿಕೊಡಲು ಸರಕಾರ ಕಾರ್ಯಕ್ರಮ ರೂಪಿಸುತ್ತಿದೆ ಎಂದು ನುಡಿದರು.

ಸಾಲ ಮನ್ನಾದಿಂದ ಪರಿಹಾರ ಅಸಾಧ್ಯ: ರೈತರ ಸಾಲ ಮನ್ನಾ ಮಾಡುವುದರಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಬದಲಿಗೆ, ಒಂದು ಬಾರಿ ಸಾಲ ಮನ್ನಾ ಮಾಡಿ, ಮುಂದೆ ರೈತರು ಆರ್ಥಿಕವಾಗಿ ಸಬಲರನ್ನಾಗಿ ಶಕ್ತಿ ತುಂಬಲು ಅವಕಾಶಗಳನ್ನು ಕಲ್ಪಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಸಮ್ಮಿಶ್ರ ಸರಕಾರ ಬದ್ಧವಾಗಿದೆ ಎಂದರು.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೃಷ್ಣಭೈರೇಗೌಡ ಮಾತನಾಡಿ, 21ನೇ ಶತಮಾನದ ಪ್ರಜ್ಞಾವಂತ ಆಹಾರ ನಮ್ಮ ರಾಜ್ಯದ ಮೂಲದ್ದು. ಇಡೀ ವಿಶ್ವದಲ್ಲೇ ರಾಜ್ಯದ ಸಿರಿಧಾನ್ಯ ಗುರುತಿಸಿಕೊಂಡಿದೆ. 2023 ಅನ್ನು ವಿಶ್ವ ಸಿರಿಧಾನ್ಯ ವರ್ಷವನ್ನಾಗಿ ಆಚರಿಸಲು ವಿಶ್ವಸಂಸ್ಥೆ ನಿರ್ಧರಿಸಿದೆ. ಇದು ವಿಶ್ವಕ್ಕೆ ಕರ್ನಾಟಕದ ಕೊಡುಗೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಇದೇ ವೇಳೆ ಕೃಷಿ ಇಲಾಖೆಯಿಂದ ಕೃಷಿಕರಿಗೆ ನೀಡುವ ಗುರುತಿನ ಚೀಟಿಯನ್ನು ವಿತರಣೆ ಮಾಡಿದರು. ಜತೆಗೆ, ಸಿರಿಧಾನ್ಯಗಳಿಂದ ತಯಾರಿಸಬಹುದಾದ ಆಹಾರ ಪದಾರ್ಥಗಳ ಮಾಹಿತಿಯುಳ್ಳ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ತೋಟಗಾರಿಕೆ ಸಚಿವರಾದ ಎಂ.ಸಿ.ಮನಗೂಳಿ, ಎನ್.ಎಚ್. ಶಿವಶಂಕರರೆಡ್ಡಿ, ವೆಂಕಟರಾವ್ ನಾಡಗೌಡ, ಕೇರಳ ಸರಕಾರದ ಕೃಷಿ ಸಚಿವ ಬಿ.ಎಸ್.ಸುನೀಲ್ ಕುಮಾರ್, ಮೇಯರ್ ಗಂಗಾಂಬಿಕೆ, ಎಂಎಲ್‌ಸಿ ದೇವೇಗೌಡ, ರಮೇಶ್ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಅತಿಯಾದ ಕ್ರಿಮಿನಾಶಕಗಳನ್ನು ಕೃಷಿಯಲ್ಲಿ ಬಳಕೆ ಮಾಡುವುದರಿಂದ ಹೆಚ್ಚಿನ ರೋಗಗಳು ಬರುತ್ತಿವೆ. ಹೀಗಾಗಿ, ಸಾವಯವ ಕೃಷಿಯನ್ನು ಹಾಗೂ ಸಿರಿಧಾನ್ಯಗಳನ್ನು ಪ್ರೋತ್ಸಾಹಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಮೂರು ದಿನಗಳ ಸಾವಯವ ಮತ್ತು ಸಿರಿಧಾನ್ಯಗಳ ಅಂತರ್‌ರಾಷ್ಟ್ರೀಯ ಮೇಳ ಯಶಸ್ವಿಯಾಗಲಿದೆ.

-ಎನ್.ಎಚ್.ಶಿವಶಂಕರರೆಡ್ಡಿ, ಕೃಷಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News