ತೇಲ್ತುಂಬ್ಡೆ ವಿರುದ್ಧದ ಪ್ರಕರಣ ಹಿಂಪಡೆಯಲು ಅಂಬೇಡ್ಕರ್ ವಾದಿ ಸಂಘಟನೆಗಳ ಆಗ್ರಹ

Update: 2019-01-18 15:01 GMT

ಹೊಸದಿಲ್ಲಿ, ಜ.18: ಭೀಮಾ ಕೊರೆಗಾಂವ್ ಹಿಂಸಾಚಾರ ಘಟನೆಗೆ ಸಂಬಂಧಿಸಿ ಸಾಮಾಜಿಕ ಹೋರಾಟಗಾರ ಆನಂದ್ ತೇಲ್ತುಂಬ್ಡೆ ವಿರುದ್ಧ ದಾಖಲಿಸಿರುವ ಕಲ್ಪಿತ, ಸುಳ್ಳು ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಅಂಬೇಡ್ಕರ್ ವಾದಿ ಸಂಘಟನೆಗಳ ಗುಂಪು ಆಗ್ರಹಿಸಿದೆ. ಪುಣೆ ಪೊಲೀಸರು ತನ್ನ ವಿರುದ್ಧ ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸಬೇಕು ಎಂದು ಕೋರಿ ತೇಲ್ತುಂಬ್ಡೆ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ತೇಲ್ತುಂಬ್ಡೆಗೆ ನಾಲ್ಕು ವಾರ ಬಂಧನದಿಂದ ವಿನಾಯಿತಿಯನ್ನು ನ್ಯಾಯಾಲಯ ನೀಡಿದ್ದು ಈ ಅವಧಿಯಲ್ಲಿ ಅವರು ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸಿ ಜಾಮೀನು ಪಡೆಯಲು ಪ್ರಯತ್ನಿಸಬಹುದು ಎಂದು ನ್ಯಾಯಾಲಯ ತಿಳಿಸಿತ್ತು. ಬಳಿಕ , ಜನತೆಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದ ತೇಲ್ತುಂಬ್ಡೆ ತನ್ನನ್ನು ಬೆಂಬಲಿಸುವಂತೆ ಕರೆ ನೀಡಿದ್ದರು.

ಇದಕ್ಕೆ ಶುಕ್ರವಾರ ಪ್ರತಿಕ್ರಿಯಿಸಿರುವ ಅಂಬೇಡ್ಕರ್‌ವಾದಿ ಸಂಘಟನೆಗಳ ಗುಂಪು, ತೇಲ್ತುಂಬ್ಡೆ ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಗಾಗಿ ನಿರಂತರ ಹೋರಾಟ ನಡೆಸಿದವರು. ಬೋಧನೆ, ಬರಹ ಹಾಗೂ ಜನತಾ ಚಳವಳಿಗಳ ಮೂಲಕ ತನ್ನ ಮೇಧಾವಿತನ ಹಾಗೂ ಅನುಭವವನ್ನು ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಪುಣೆ ಪೊಲೀಸರು ಬಿಡುಗಡೆಗೊಳಿಸಿರುವ , ಕಾಮ್ರೇಡ್ ಆನಂದ್‌ಗೆ ತೇಲ್ತುಂಬ್ಡೆ ಬರೆದಿದ್ದಾರೆ ಎನ್ನಲಾಗಿರುವ ಪತ್ರವನ್ನು ಪೊಲೀಸರೇ ಸೃಷ್ಟಿಸಿದ್ದಾರೆ. ವಾಸ್ತವವಾಗಿ, ಭೀಮಾ ಕೊರೆಗಾಂವ್ ಹಿಂಸಾಚಾರದ ಹಿಂದಿನ ದಿನ ನಡೆದಿದ್ದ ಸಭೆಯಲ್ಲಿ ತೇಲ್ತುಂಬ್ಡೆ ಭಾಗವಹಿಸಿರಲಿಲ್ಲ . ತನ್ನ ವಿರುದ್ಧದ ಎಲ್ಲಾ ಆರೋಪಗಳನ್ನು ತೇಲ್ತುಂಬ್ಡೆ ನಿರಾಕರಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಒಮಾನ್, ಯುಎಇ, ಖತರ್, ಜಪಾನ್, ಸಿಂಗಾಪುರ, ಮಲೇಶ್ಯ, ಬ್ರೂನೈ ಮತ್ತು ಭಾರತದಲ್ಲಿರುವ ‘ಅಂಬೇಡ್ಕರ್ ಇಂಟರ್‌ನ್ಯಾಷನಲ್ ಮಿಷನ್’ ಸಂಸ್ಥೆಗಳು, ಇಂಡಿಯಾ ಸಿವಿಲ್ ವಾಚ್, ಅಂಬೇಡ್ಕರ್ ಪೆರಿಯಾರ್ ಕಿಂಗ್ ಸ್ಟಡಿ ಸರ್ಕಲ್ ಹಾಗೂ ಇತರ ಕೆಲವು ಸಂಸ್ಥೆಗಳು ಹೇಳಿಕೆಗೆ ಸಹಿ ಹಾಕಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News