ಸಿರಿಧಾನ್ಯ ಪ್ರಿಯರನ್ನು ಸೆಳೆದ ವಾಣಿಜ್ಯ ಮೇಳ: 400 ಮಳಿಗೆಗಳಲ್ಲಿ ಪ್ರದರ್ಶನ, ಮಾರಾಟಕ್ಕೆ ಅವಕಾಶ

Update: 2019-01-18 16:20 GMT

ಬೆಂಗಳೂರು, ಜ.18: ನಗರದ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಸಾವಯವ ಮತ್ತು ಸಿರಿಧಾನ್ಯ ಅಂತರ್‌ರಾಷ್ಟ್ರೀಯ ವಾಣಿಜ್ಯ ಮೇಳ ಸಿರಿಧಾನ್ಯ ಪ್ರಿಯರನ್ನು ಆಕರ್ಷಿಸುತ್ತಿದೆ.

ಮೇಳದಾದ್ಯಂತ ಸುಮಾರು 400 ಮಳಿಗೆಗಳನ್ನು ತೆರೆಯಲಾಗಿದ್ದು, ಪ್ರತಿ ಮಳಿಗೆಯಲ್ಲೂ ವಿವಿಧ ಬಗೆಯ ಸಿರಿಧಾನ್ಯದಿಂದ ತಯಾರಿಸಿದ ವಿವಿಧ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ ಏರ್ಪಡಿಸಲಾಗಿದೆ. 23 ಆಹಾರ ಮಳಿಗೆಗಳನ್ನು ತೆರೆಯಲಾಗಿದ್ದು, ಸಿರಿಧಾನ್ಯ ಪ್ರಿಯರು ವಿವಿಧ ಬಗೆಯ ಖಾದ್ಯಗಳನ್ನು ಆಸ್ವಾದಿಸುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂತು. 16 ನವೋದ್ಯಮ ಸಂಸ್ಥೆಗಳು ಭಾಗವಹಿಸಿದ್ದವು. ಅಲ್ಲದೆ, ಮೇಳದಲ್ಲಿ ಐದು ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಹಾಗೂ 23 ಸಾವಯವ ಮತ್ತು ಸಿರಿಧಾನ್ಯ ಖಾದ್ಯಗಳ ಮಳಿಗೆಗಳನ್ನು ತೆರೆಯಲಾಗಿತ್ತು.

ದೇಶ-ವಿದೇಶಗಳಿಂದ ಬಂದಿರುವ ಆಹಾರ ಕಂಪನಿಗಳು, ವಿಜ್ಞಾನಿಗಳು, ರೈತರು ಸಿರಿಧಾನ್ಯಗಳ ಸಂತೆಗೆ ಸಾಕ್ಷಿಯಾಗಿದ್ದರು. ಮೂರು ದಿನಗಳಲ್ಲಿ ಒಟ್ಟು 63 ಉಪನ್ಯಾಸ, ಸಂವಾದಗಳು ನಡೆಯಲಿವೆ. ತಮಿಳುನಾಡು, ಆಂಧ್ರಪ್ರದೇಶ, ಹಿಮಾಚಲ ಪ್ರದೇಶ, ಪಂಜಾಬ್, ಮಣಿಪುರ, ಕೇರಳ ಮತ್ತು ತೆಲಂಗಾಣ ಸೇರಿದಂತೆ ಚಿಲಿ, ಪೋಲಂಡ್, ಶ್ರೀಲಂಕಾ, ಯುಎಇ, ಜರ್ಮನಿ, ಸ್ವಿಡ್ಜರ್‌ಲ್ಯಾಂಡ್ ಮತ್ತಿತರ ದೇಶಗಳ ಪ್ರತಿನಿಧಿಗಳು ಹಾಗೂ ಸುಮಾರು 16 ಸ್ಟಾರ್ಟ್‌ಅಪ್ ಸಂಸ್ಥೆಗಳು ಭಾಗವಹಿಸಿದ್ದವು.

ರಾಗಿ ದೋಸೆ ಮಿಕ್ಸ್, ಸಿರಿಧಾನ್ಯದ ಬಿಸ್ಕೆಟ್, ನಿಪ್ಪಟ್ಟು, ಖೀರು ಮಿಶ್ರಣ, ರಾಸಾಯನಿಕ ಬಳಸದೆ ಬೆಳೆದ ತರಕಾರಿಗಳು ಸೇರಿದಂತೆ ಬಾಯಲ್ಲಿ ನೀರೂರಿಸುವ ಆಹಾರ ಮತ್ತು ಉತ್ಪನ್ನಗಳು ಸಾವಯವ ಮತ್ತು ಸಿರಿಧಾನ್ಯ ಮೇಳದಲ್ಲಿ ಲಭ್ಯವಿದ್ದು, ಮೇಳದಲ್ಲಿ ಮೊದಲ ದಿನವೇ ಹಳ್ಳಿ ಸೊಗಡಿನ ವಾತಾವರಣ ಕಂಡುಬಂತು. ಗ್ರಾಮೀಣ ಪ್ರದೇಶಗಳ ಮಳಿಗೆಗಳಿಂದ ಆರಂಭವಾಗಿ ಹೊರರಾಜ್ಯಗಳಲ್ಲೂ ಮಾರುಕಟ್ಟೆ ಹೊಂದಿರುವ ಸಂಸ್ಥೆಗಳು ತಮ್ಮ ಸಿರಿಧಾನ್ಯ ಹಾಗೂ ಸಾವಯವ ಉತ್ಪನ್ನಗಳನ್ನು ಪ್ರದರ್ಶನಕ್ಕಿಟ್ಟಿದ್ದವು.

ಗ್ರಾಮೀಣ ಕುಟುಂಬ ಮಳಿಗೆಯಲ್ಲಿ ಸಿರಿಧಾನ್ಯಗಳನ್ನು ಮಾರಾಟಕ್ಕಿಡಲಾಗಿತ್ತು. ಕೇವ್‌ಮ್ಯಾನ್ ಸಂಸ್ಥೆ ಸಿರಿಧಾನ್ಯದಿಂದ ತಯಾರಿಸಿದ ಬಿಸ್ಕೆಟ್ ಪ್ರದರ್ಶಿಸಿತು. ಜೇನು, ಗೋಡಂಬಿ, ದ್ರಾಕ್ಷಿ, ತೆಂಗಿನಕಾಯಿ ಮೊದಲಾದ ಫ್ಲೇವರ್‌ಗಳಲ್ಲಿ ಬಿಸ್ಕೆಟ್‌ಗಳು, ಪಾಕ ಸಂಸ್ಥೆಯು ಸಿರಿಧಾನ್ಯದ ದೋಸೆ ಮತ್ತು ಇಡ್ಲಿ ಮಿಶ್ರಣ, ಲಾವ್ ಮಿಶ್ರಣವನ್ನು ಮಾರಾಟ ಮಾಡುತ್ತಿತ್ತು. ಪ್ರಿಸ್ಟೀನ್ ಕಂಪನಿಯಿಂದ ಸಿರಿಧಾನ್ಯದ ಫ್ಲೇಕ್ಸ್, ಬ್ರೆಡ್ ಮೊದಲಾದ ಉತ್ಪನ್ನಗಳನ್ನು ಮಾರಾಟಕ್ಕಿಟ್ಟಿದ್ದವು.

ಸಾವಯವ ಉತ್ಪನ್ನಗಳ ಮಳಿಗೆ: ದಿ ಆರ್ಗಾನಿಕ್ ವರ್ಲ್ಡ್ ಮಳಿಗೆಯಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆದ ತರಕಾರಿ ಮಾರಾಟಕ್ಕಿತ್ತು. ಸ್ೇ ಹಾರ್ವೆಸ್ಟ್ ಸಂಸ್ಥೆಯು ಹಲವು ಗ್ರಾಮಗಳಲ್ಲಿ ರೈತರ ಜತೆ ಸಂಪರ್ಕ ಹೊಂದಿದ್ದು, ಸಾವಯವ ವಿಧಾನದಲ್ಲಿ ಕೃಷಿ ಮಾಡಲು ಉತ್ತೇಜನ ನೀಡುತ್ತಿದೆ. ದ್ವಿದಳ ಧಾನ್ಯ, ಸಿರಿಧಾನ್ಯ, ಮಸಾಲೆ ಪದಾರ್ಥಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆದರೆ ಅದಕ್ಕೆ ಮಾರುಕಟ್ಟೆ ಒದಗಿಸುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ ಎಂದು ಸಂಸ್ಥೆಯ ಸದಸ್ಯರು ಮಾಹಿತಿ ನೀಡಿದರು.

ಸಂಸ್ಕರಣೆ ಯಂತ್ರಗಳು: ಸಿರಿಧಾನ್ಯವನ್ನು ಸಂಸ್ಕರಿಸಿ ಕಸ ತೆಗೆಯುವ ಹಾಗೂ ಹಿಟ್ಟು ಮಾಡುವ ಗಿರಣಿ ಯಂತ್ರಗಳನ್ನು ಹಲವು ಕಂಪನಿಗಳು ಪ್ರದರ್ಶಿಸಿದವು. ಮಾರ್ಕ್ ಕಂಪನಿಯಿಂದ 7 ಲಕ್ಷ ರೂ. ಮೌಲ್ಯದ ಸಂಸ್ಕರಣೆ ಯಂತ್ರವನ್ನು ಪ್ರದರ್ಶನಕ್ಕಿಡಲಾಗಿದೆ. ಇದು ಒಂದು ಗಂಟೆಯಲ್ಲಿ 500 ಕೆಜಿ ನವಣೆ ಸಂಸ್ಕರಿಸುತ್ತದೆ. 45 ಲಕ್ಷ ರೂ. ಮೌಲ್ಯದ ಮತ್ತೊಂದು ಯಂತ್ರ 1 ಗಂಟೆಯಲ್ಲಿ 1 ಟನ್ ಅಕ್ಕಿ ಸಂಸ್ಕರಿಸುತ್ತದೆ. ಬಾರ್ನ್ ಕಂಪನಿಯು 8 ಲಕ್ಷ ರೂ. ಮೌಲ್ಯದ ದೊಡ್ಡ ಯಂತ್ರವನ್ನು ಪ್ರದರ್ಶನಕ್ಕಿಟ್ಟಿತ್ತು. ಇದು 1 ಗಂಟೆಯಲ್ಲಿ 2 ಟನ್ ಧಾನ್ಯವನ್ನು ಸಂಸ್ಕರಿಸುತ್ತದೆ.

ಮೇಳದಲ್ಲಿ ಯಶವಂತಪುರದ ತಾಜ್ ಹೊಟೇಲ್‌ನಲ್ಲಿ ಬಾಣಸಿಗರಾಗಿರುವ ಮಂಜಣ್ಣ ಎಂಬುವವರು ಸಿರಿಧಾನ್ಯಗಳಿಂದ ಪಡ್ಡು, ಬಿಸಿಬೇಳೆಬಾತ್ ಮತ್ತಿತರೆ ತಯಾರಿಕೆ ಕುರಿತು ಪ್ರಾತ್ಯಕ್ಷಿತೆ ತೋರಿಸಿಕೊಟ್ಟರು. ರಾಮಯ್ಯ ವಿವಿಯಿಂದ ಖಾನಾವಳಿ ಅಡುಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಚಿತ್ರಕಲಾ ಸ್ಪರ್ಧೆ

ಮೇಳದ ಖಾನಾವಳಿ ಮಳಿಗೆಯಲ್ಲಿ ಸಿರಿಧಾನ್ಯ ಹಾಗೂ ಸಾವಯವ ಧಾನ್ಯಗಳ ಮಹತ್ವ ಮತ್ತು ಉಪಯೋಗಗಳ ವಿಷಯ ಕುರಿತು ಕೃಷಿ ಇಲಾಖೆ ವತಿಯಿಂದ 5 ರಿಂದ 16 ವರ್ಷ ವಯಸ್ಸಿನ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿದ್ದು, ಇಂದು ಇಲ್ಲಿ ಸ್ಪರ್ಧೆ ನಡೆಯಲಿದೆ.

ಮೂರು ದಿನಗಳ ಮೇಳದಲ್ಲಿ ಅದಮ್ಯ ಚೇತನ ಸಂಸ್ಥೆ ವತಿಯಿಂದ ಶೂನ್ಯ ತ್ಯಾಜ್ಯ ಎಂಬ ಘೋಷಣೆಯೊಂದಿಗೆ ಭೋಜನ ವ್ಯವಸ್ಥೆ ಮಾಡಲಾಗಿದೆ. ಪ್ಲಾಸ್ಟಿಕ್, ಅಡಕೆ ತಟ್ಟೆ, ಪೇಪರ್ ತಟ್ಟೆ, ಪೇಪರ್ ಚಮಚ ಹಾಗೂ ಲೋಟಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಬದಲಿಗೆ, ಸ್ಟೀಲ್ ತಟ್ಟೆ ಹಾಗೂ ಲೋಟಗಳನ್ನು ನೀಡಲಾಗುತ್ತಿದೆ. ಅದಕ್ಕಾಗಿ 20 ಸಾವಿರ ತಟ್ಟೆಗಳು, ಬಟ್ಟಲುಗಳು, ಚಮಚಗಳು ಮತ್ತಿತರೆ ವಸ್ತುಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ.

-ತೇಜಸ್ವಿನಿ ಅನಂತ್‌ಕುಮಾರ್, ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News