‘ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಕ್ಕೆ ಜಾಫರ್ ಶರೀಫ್ ಹೆಸರು’

Update: 2019-01-19 12:55 GMT

ಬೆಂಗಳೂರು, ಜ.19: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಶರೀಫ್, ರೈಲ್ವೆ ಇಲಾಖೆ ಹಾಗೂ ದೇಶಕ್ಕೆ ಸಲ್ಲಿಸಿರುವ ಸೇವೆಯ ಸ್ಮರಣಾರ್ಥ ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಕ್ಕೆ ‘ಜಾಫರ್ ಶರೀಫ್’ ಹೆಸರನ್ನು ಇಡುವ ಸಂಬಂಧ ಕೇಂದ್ರ ರೈಲ್ವೆ ಮಂತ್ರಾಲಯಕ್ಕೆ ಶಿಫಾರಸ್ಸು ಮಾಡಿಸುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಶುಕ್ರವಾರ ಸಂಜೆ ನಗರದ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಶರೀಫ್‌ರವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.

ಸಚಿವ ಝಮೀರ್‌ಅಹ್ಮದ್‌ಖಾನ್ ಮನವಿಯಂತೆ, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಕ್ಕೆ ಜಾಫರ್ ಶರೀಫ್ ಹೆಸರು ನಾಮಕರಣಗೊಳಿಸಲು ಶಿಫಾರಸ್ಸು ಮಾಡುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೊತೆ ಚರ್ಚಿಸುತ್ತೇನೆ. ಅಲ್ಲದೆ, ಸ್ವತಃ ನಾನು ರೈಲ್ವೆ ಸಚಿವರನ್ನು ಭೇಟಿ ಮಾಡಿ ಮನವಿ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಜಾಫರ್ ಶರೀಫ್ ಹೋರಾಟದ ಫಲವಾಗಿ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನ ಪುನಃ ನಮ್ಮ ಪಕ್ಷಕ್ಕೆ ಸಿಕ್ಕಿದೆ. ಕ್ವೀನ್ಸ್‌ರಸ್ತೆಗೆ ಜಾಫರ್ ಶರೀಫ್ ಹೆಸರು ನಾಮಕರಣಗೊಳಿಸುವ ಸಂಬಂಧ ಬಿಬಿಎಂಪಿಯವರ ಜೊತೆ ಚರ್ಚಿಸಿ, ಒತ್ತಾಯಿಸುತ್ತೇನೆ. ಬೆಂಗಳೂರಿನಲ್ಲಿ ಜಾಫರ್ ಶರೀಫ್ ಹೆಸರು ಶಾಶ್ವತವಾಗಿ ಉಳಿಯಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಹಿರಿಯ ಮುತ್ಸದ್ದಿ ರಾಜಕಾರಣಿಯಾಗಿದ್ದ ಜಾಫರ್ ಶರೀಫ್ ಅವರ ಬದುಕು, ಹೋರಾಟ, ಸಾಧನೆ ಬೇರೆಯವರಿಗೆ ಮಾರ್ಗದರ್ಶನ. ಕೇಂದ್ರದ ಸಚಿವರಾಗಿ, ಅದರಲ್ಲೂ ವಿಶೇಷವಾಗಿ ರೈಲ್ವೆ ಸಚಿವರಾಗಿ ಇಡೀ ದೇಶದಲ್ಲೆ ತಮ್ಮ ಹೆಜ್ಜೆ ಗುರುತುಗಳನ್ನು ಅವರು ಬಿಟ್ಟು ಹೋಗಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

ರಾಜ್ಯದಿಂದ ಅನೇಕ ಜನ ರೈಲ್ವೆ ಸಚಿವರಾಗಿದ್ದರು. ಆದರೆ, ಜಾಫರ್ ಶರೀಫ್ ಮಾಡಿದಂತಹ ಕೆಲಸವನ್ನು ಬೇರೆ ಯಾರೂ ಮಾಡಿಲ್ಲ. ಬ್ರಾಡ್‌ಗೇಜ್ ವ್ಯವಸ್ಥೆ ತರುವ ಮೂಲಕ ರಾಜ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಸಾಧನೆಯೇ ಅವರನ್ನು ಸ್ಮರಣೀಯವನ್ನಾಗಿಸಿದೆ ಎಂದು ಅವರು ಹೇಳಿದರು. ಜಾಫರ್ ಶರೀಫ್ ಕೇವಲ ಮುಸ್ಲಿಮರ ನಾಯಕರಾಗಿರಲಿಲ್ಲ, ಅವರು ರಾಷ್ಟ್ರ ನಾಯಕರಾಗಿ ಬೆಳೆದಿದ್ದರು. ನಮ್ಮ ಜೊತೆ ಭೇಟಿಯಾದಾಗಲೆಲ್ಲ, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಸಾಮಾಜಿಕ ನ್ಯಾಯದಿಂದ ವಂಚಿತರಾಗಿರುವವರ ಬಗ್ಗೆ ಚರ್ಚೆ ಮಾಡುತ್ತಿದ್ದರು. ಅವರಿಗೆ ಸಾಮಾಜಿಕ ನ್ಯಾಯದಲ್ಲಿ ಅಪಾರವಾದ ಕಾಳಜಿ ಹಾಗೂ ಬದ್ಧತೆಯಿತ್ತು ಎಂದು ಸಿದ್ದರಾಮಯ್ಯ ತಿಳಿಸಿದರು. ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಜಾಫರ್ ಶರೀಫ್ ಎಲ್ಲ ಜಾತಿ, ಧರ್ಮ, ಸಮುದಾಯಗಳನ್ನು ಸಮಾನವಾಗಿ ಗೌರವಿಸುತ್ತಿದ್ದರು. ಅವರ ಚಿಂತನೆಗಳು, ಸಂವಿಧಾನದ ರಕ್ಷಣೆಯ ನೆಲೆಯಲ್ಲೆ ಇರುತ್ತಿದ್ದವು. ಸಂವಿಧಾನದ ಆಶಯಕ್ಕೆ ಅವರು ಎಂದು ವಿರುದ್ಧವಾಗಿ ನಡೆದುಕೊಂಡವರಲ್ಲ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಝಾದ್, ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್, ಕೇಂದ್ರದ ಮಾಜಿ ಸಚಿವ ಡಾ.ಕೆ.ರಹ್ಮಾನ್‌ಖಾನ್, ಸಂಸದರಾದ ಕೆ.ಎಚ್.ಮುನಿಯಪ್ಪ, ಬಿ.ಕೆ.ಹರಿಪ್ರಸಾದ್, ವಿ.ಎಸ್.ಉಗ್ರಪ್ಪ, ಡಾ.ಸೈಯ್ಯದ್ ನಾಸೀರ್ ಹುಸೇನ್, ಡಿಸಿಎಂ ಡಾ.ಜಿ.ಪರಮೇಶ್ವರ್, ಸಚಿವರಾದ ಝಮೀರ್‌ಅಹ್ಮದ್ ಖಾನ್, ಯು.ಟಿ.ಖಾದರ್, ಶಾಸಕರಾದ ರೋಷನ್‌ಬೇಗ್, ಎನ್.ಎ.ಹಾರೀಸ್, ವಿಧಾನಪರಿಷತ್ ಸದಸ್ಯರಾದ ನಸೀರ್‌ಅಹ್ಮದ್, ಸಿ.ಎಂ.ಇಬ್ರಾಹೀಂ, ರಿಝ್ವಾನ್ ಅರ್ಶದ್, ಅಬ್ದುಲ್ ಜಬ್ಬಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಜಾತ್ಯತೀತ-ಆದರ್ಶ ರಾಜಕಾರಣಿ: ಪೇಜಾವರ ಶ್ರೀ

ರಾಷ್ಟ್ರೀಯ ನಾಯಕರಾಗಿ ದೇಶ ಹಾಗೂ ರಾಜ್ಯದ ಅಭಿವೃದ್ಧಿಗೆ ಜಾಫರ್ ಶರೀಫ್ ನೀಡಿರುವ ಕೊಡುಗೆ ಅಪಾರ. ಎಲ್ಲ ಜಾತಿ, ಧರ್ಮ, ಸಮುದಾಯದವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ಅವರೊಬ್ಬ ಸಜ್ಜನ, ಆದರ್ಶ ರಾಜಕಾರಣಿ. ದೇಶಭಕ್ತಿ, ಜಾತ್ಯತೀತ ವ್ಯಕ್ತಿತ್ವದಿಂದ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮಿ ಹೇಳಿದರು.

ಮಠಗಳೊಂದಿಗೂ ಜಾಫರ್ ಶರೀಫ್ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಹಿಂದೂ ಸಮಾಜದ ಸ್ವಾಮೀಜಿಗಳು, ಸಂತರು ಮತ್ತು ಮುಸ್ಲಿಂ ಸಮುದಾಯದ ಧರ್ಮಗುರುಗಳು ಪರಸ್ಪರ ಮುಕ್ತವಾಗಿ ಚರ್ಚೆ ನಡೆಸಿ ರಾಮಜನ್ಮಭೂಮಿ ವಿವಾದದ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ರಾಜಕೀಯ ನಾಯಕರಿಂದ ಈ ವಿವಾದ ಬಗೆಹರಿಯುವುದಿಲ್ಲ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News