ಹೈಕಮಾಂಡ್ ಸೂಚಿಸಿದರೆ ಸಚಿವ ಸ್ಥಾನ ತ್ಯಾಗಕ್ಕೂ ಸಿದ್ಧ: ಡಿ.ಕೆ.ಶಿವಕುಮಾರ್

Update: 2019-01-19 13:27 GMT

ಬೆಂಗಳೂರು, ಜ. 19: ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ನಾನು. ಪಕ್ಷದ ಹೈಕಮಾಂಡ್ ನನಗೆ ಸುಪ್ರೀಂ. ಸಚಿವ ಸ್ಥಾನ ತ್ಯಾಗ ಮಾಡಲು ಹೈಕಮಾಂಡ್ ನನಗೆ ಸೂಚಿಸಿದರೆ ಅದಕ್ಕೂ ನಾನು ಸಿದ್ಧ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಏಳು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಧರ್ಮಸಿಂಗ್ ಮತ್ತು ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ನನಗೆ ಸಚಿವ ಸ್ಥಾನ ನೀಡಿರಲಿಲ್ಲ. ಆದರೂ, ಆಗ ನಾನು ಬಾಯಿ ಮುಚ್ಚಿಕೊಂಡು ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ ಎಂದರು.

ಈಗಲೂ ಪಕ್ಷ ಸಚಿವ ಸ್ಥಾನ ಬಿಟ್ಟು ಕೊಡಲು ಕೇಳಿದರೆ ನಾನು ಸಿದ್ಧನಿದ್ದೇನೆ. ನಾನು ಮಾತ್ರವಲ್ಲ, ನಮ್ಮ ಪಕ್ಷದ ಎಲ್ಲ ಹಿರಿಯ ಶಾಸಕರು ಇದಕ್ಕೆ ಬದ್ಧರಾಗಿದ್ದಾರೆ ಎಂದ ಅವರು, ಈಗಲ್ಟನ್ ರೆಸಾರ್ಟ್ ಸರಕಾರಕ್ಕೆ ತೆರಿಗೆ ಬಾಕಿ ಉಳಿಸಿಕೊಂಡಿದೆ ಎಂಬ ಬಗ್ಗೆ ನಾನು ಉತ್ತರ ನೀಡುವುದಿಲ್ಲ ಎಂದು ನಿರಾಕರಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಇ.ತುಕಾರಾಂ, ಪಿ.ಟಿ.ಪರಮೇಶ್ವರ್ ನಾಯ್ಕ, ಬಳ್ಳಾರಿ ಜಿಲ್ಲೆ ಶಾಸಕರಾದ ಆನಂದ್ ಸಿಂಗ್, ಭೀಮಾ ನಾಯ್ಕಾ, ಗಣೇಶ್, ಸಂಸದ ವಿ.ಎಸ್.ಉಗ್ರಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News