ನಿಮ್ಹಾನ್ಸ್ ವಿಶ್ವದ ಅತ್ಯುತ್ತಮ ಆರೋಗ್ಯ ಸಂಸ್ಥೆ: ಬೆಂಗಳೂರಿನಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್

Update: 2019-01-19 14:03 GMT

ಬೆಂಗಳೂರು, ಜ.19: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಗಳ ಸಂಸ್ಥೆ(ನಿಮ್ಹಾನ್ಸ್)ಯು ವಿಶ್ವದಲ್ಲೇ ಅತ್ಯುತ್ತಮ ಹಾಗೂ ವಿಶೇಷವಾದ ಸಂಸ್ಥೆ. ಮಾನಸಿಕ ರೋಗಗಳನ್ನು ಗುಣಪಡಿಸುವ ಇಲ್ಲಿನ ವೈದ್ಯರು, ಸಿಬ್ಬಂದಿಗಳ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದರು.

ಶುಕ್ರವಾರ ನಗರದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಗಳ ಸಂಸ್ಥೆ(ನಿಮ್ಹಾನ್ಸ್)ಯ 23ನೇ ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.

ಕೇಂದ್ರ ಸರಕಾರವು ದೇಶದ ಬಡವರಿಗೆ ಉಚಿತ ಆರೋಗ್ಯ ಸೇವೆಯನ್ನು ಒದಗಿಸಲು ಜಾರಿಗೆ ತಂದಿರುವ ‘ಆಯುಷ್ಮಾನ್ ಭಾರತ’ ಯೋಜನೆಯು ಒಂದು ಮಹತ್ವದ ಹೆಜ್ಜೆ ಗುರುತಾಗಿದೆ ಎಂದು ಅವರು ತಿಳಿಸಿದರು.

ಪ್ರತಿ ವರ್ಷ ವಿದೇಶಿಯರು ಸೇರಿದಂತೆ ಸರಾಸರಿ ಏಳು ಲಕ್ಷ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ನಿಮ್ಹಾನ್ಸ್ ದೇಶದ ಆಸ್ತಿ. ಮನೋ ರೋಗ ಸಮಸ್ಯೆ ಇರುವ ಪ್ರತಿ ಮೂವರು ರೋಗಿಗಳಲ್ಲಿ ಇಬ್ಬರು ಬಡಕುಟುಂಬದವರು ಎಂಬ ಅಂಕಿ ಅಂಶಗಳು ನಮ್ಮ ಮುಂದಿದೆ ಎಂದು ರಾಜನಾಥ್‌ಸಿಂಗ್ ಹೇಳಿದರು.

2020ರ ವೇಳೆಗೆ ನಮ್ಮ ದೇಶವು 75ನೇ ಸ್ವಾತಂತ್ರೋತ್ಸವವನ್ನು ಆಚರಿಸುತ್ತದೆ. ಈ ಸಂದರ್ಭದಲ್ಲಿ ಭಾರತದಲ್ಲಿ ವಿವಿಧ ಮಾನಸಿಕ ಸಮಸ್ಯೆಯಿಂದ ನರಳುತ್ತಿರುವವರಿಗೆ ಸೂಕ್ತ ಚಿಕಿತ್ಸೆ ಕಲ್ಪಿಸಲು ರಾಷ್ಟ್ರೀಯ ಆಂದೋಲನವನ್ನು ರೂಪಿಸುವ ಅಗತ್ಯವಿದೆ ಎಂದು ಅವರು ಕರೆ ನೀಡಿದರು.

ಜನರಿಗೆ ಹುದ್ದೆ, ಅಧಿಕಾರ, ಹಣ ಮುಖ್ಯವಾಗಬಾರದು. ತಮ್ಮ ಗುಣ, ನಡತೆಗಳು ಮುಖ್ಯವಾಗಬೇಕು. ಜ್ಞಾನ ಭಯೋತ್ಪಾದಕರ ಬಳಿಯೂ ಇರುತ್ತದೆ. ಅದರಿಂದ ಸಮಾಜಕ್ಕೆ ಯಾವ ಪ್ರಯೋಜನವು ಆಗುವುದಿಲ್ಲ. ರಾವಣನ ಬಳಿ ಶ್ರೀರಾಮನಿಗಿಂತಲೂ ಹೆಚ್ಚಿನ ಸಂಪತ್ತು, ಶಕ್ತಿ ಇತ್ತು. ಆದರೆ, ಗುಣ, ನಡತೆಯಲ್ಲಿ ರಾವಣನಿಗಿಂತಲೂ ಶ್ರೇಷ್ಠವಾಗಿದ್ದ ಶ್ರೀರಾಮ ಇಂದು ಪೂಜೆಗೆ ಅರ್ಹನಾಗಿದ್ದಾನೆ ಎಂದು ರಾಜನಾಥ್‌ಸಿಂಗ್ ಹೇಳಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವವರು ಇದನ್ನು ಸೇವೆ ಎಂದು ಪರಿಗಣಿಸಬೇಕು. ಇಂದು ಪದವಿ ಪಡೆಯುತ್ತಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ರೋಗಿಗಳ ಸಮಸ್ಯೆಗಳಿಗೆ ಸ್ಪಂದಿಸಿ, ಅವರಿಗೆ ಅಗತ್ಯವಾಗಿರುವ ಚಿಕಿತ್ಸೆ ನೀಡಬೇಕು. ಒತ್ತಡದ ಪರಿಸ್ಥಿತಿಯನ್ನು ಯುವ ವೈದ್ಯರು ನಿಭಾಯಿಸಬೇಕು ಎಂದು ರಾಜನಾಥ್‌ಸಿಂಗ್ ಸಲಹೆ ನೀಡಿದರು.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ.ನಡ್ಡಾ ಮಾತನಾಡಿ, ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರವು ಕಳೆದ ಐದು ವರ್ಷಗಳಲ್ಲಿ ಜನಸಾಮಾನ್ಯರ ಕಲ್ಯಾಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.

ಮಾನಸಿಕ ಆರೋಗ್ಯ ಕಾಯ್ದೆಯನ್ನು 2017ರಲ್ಲಿ ಜಾರಿಗೆ ತರಲಾಗಿದೆ. ವೈದ್ಯಕೀಯ ಕಾಲೇಜುಗಳು ಹಾಗೂ ವೈದ್ಯಕೀಯ ಸೀಟುಗಳನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆ ಮೂಲಕ 8.7 ಲಕ್ಷ ರೋಗಿಗಳಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಾನಸಿಕ ಆರೋಗ್ಯವನ್ನು ಸುಧಾರಣೆ ಮಾಡುವುದು ಮುಖ್ಯವಾಗಿದೆ. ಯೋಗಾಭ್ಯಾಸವೂ ಮಾನಸಿಕ ಆರೋಗ್ಯವನ್ನು ಉತ್ತಮಪಡಿಸುತ್ತದೆ. ನಿಮ್ಹಾನ್ಸ್ ಸಂಸ್ಥೆಗೆ ಅಗತ್ಯವಿರುವ ಎಲ್ಲ ಸಹಕಾರವನ್ನು ನೀಡಲು ಕೇಂದ್ರ ಸರಕಾರ ಸಿದ್ಧವಾಗಿದೆ ಎಂದು ನಡ್ಡಾ ಹೇಳಿದರು.

ಆತ್ಮಹತ್ಯೆ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಕುಗ್ಗಿದ ಮನಸ್ಸಿನ ವ್ಯಕ್ತಿಗಳಿಗೆ ಸೂಕ್ತ ಮಾರ್ಗದರ್ಶನ, ಚಿಕಿತ್ಸೆ ಸಿಗಬೇಕು. ಸದಾ ಒತ್ತಡದ ಜೀವನ ನಡೆಸುವ ಪೊಲೀಸರಿಗೆ ಒತ್ತಡವನ್ನು ಯಾವ ರೀತಿಯಲ್ಲಿ ನಿಭಾಯಿಸಬೇಕು, ಆರೋಗ್ಯವನ್ನು ಹೇಗೆ ಸುಧಾರಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಅವರು ತಿಳಿಸಿದರು.

2018-19ನೇ ಶೈಕ್ಷಣಿಕ ಸಾಲಿನಲ್ಲಿ ಉತ್ತಿರ್ಣರಾದ 39 ಪಿಎಚ್‌ಡಿ(ಡಾಕ್ಟರೇಟ್) ಹಾಗೂ 13 ಮಂದಿಗೆ ವಿಶೇಷ ಸ್ನಾತಕೋತ್ತರ ಪದವಿ ಸೇರಿದಂತೆ ಒಟ್ಟು 192 ವಿದ್ಯಾರ್ಥಿಗಳಿಗೆ ಘಟಿಕೋತ್ಸವದಲ್ಲಿ ಪದವಿ ಪ್ರದಾನಿಸಿ, ಗೌರವಿಸಲಾಯಿತು.

 ಕಾರ್ಯಕ್ರಮದಲ್ಲಿ ನಿಮ್ಹಾನ್ಸ್ ನಿರ್ದೇಶಕ ಡಾ.ಬಿ.ಎನ್.ಗಂಗಾಧರ್, ಕುಲಸಚಿವ ಡಾ.ಶೇಖರ್, ಸಂಸದರಾದ ಪಿ.ಸಿ.ಮೋಹನ್, ಪ್ರೊ.ರಾಜೀವ್‌ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News