ಎಲ್ಲರನ್ನು ಒಳಗೊಂಡರೆ ಸಾಹಿತ್ಯ ಶ್ರೀಮಂತವಾಗುತ್ತದೆ: ಬೊಳುವಾರು ಮಹಮ್ಮದ್

Update: 2019-01-19 14:01 GMT

ಬೆಂಗಳೂರು, ಜ.19: ಎಲ್ಲ ಧರ್ಮದ ಸಾಹಿತಿಗಳು, ಲೇಖಕರು ಒಗ್ಗೂಡಿದರೆ ಸಾಹಿತ್ಯ ಕ್ಷೇತ್ರ ಮತ್ತಷ್ಟು ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದು ಸಾಹಿತಿ ಬೊಳುವಾರು ಮುಹಮ್ಮದ್ ಕುಂಞಿ ಅಭಿಪ್ರಾಯಿಸಿದ್ದಾರೆ.

ಶನಿವಾರ ನಗರದ ಕಸಾಪದಲ್ಲಿ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಆಯೋಜಿಸಿದ್ದ ಎಚ್.ವಿ.ಸಾವಿತ್ರಮ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯದಲ್ಲಿ ಎಲ್ಲ ಧರ್ಮದ ಸಾಹಿತಿಗಳು ಅಪರಿಚಿತರಂತೆ ತಮ್ಮವರನ್ನಷ್ಟೇ ಒಳಗೊಳ್ಳುವ ಮೂಲಕ ಸಾಹಿತ್ಯ ಕ್ಷೇತ್ರವನ್ನು ವಿಸ್ತರಿಸಲು ಮುಂದಾಗುವುದಿಲ್ಲ ಎಂದರು.

ಎಲ್ಲ ಧರ್ಮಗಳಲ್ಲಿರುವ ಲೇಖಕರು, ಸಾಹಿತಿಗಳು ತಮ್ಮ ಧರ್ಮಕ್ಕೆ ಸೀಮಿತಗೊಳ್ಳದೆ ಎಲ್ಲ ಧರ್ಮಗಳ ಗ್ರಂಥಗಳ ಸಾರವನ್ನು ತಿಳಿದುಕೊಂಡು ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಬೇಕು. ಈ ನಿಟ್ಟಿನಲ್ಲಿ ಎಲ್ಲರನ್ನೂ ಒಳಗೊಳ್ಳುವ ಪ್ರಕ್ರಿಯೆ ಆರಂಭವಾಗಬೇಕು ಎಂದು ಕರೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಧರ್ಮಗ್ರಂಥಗಳನ್ನು ಓದಿಕೊಳ್ಳದೆ ರಾಮ, ರಾವಣನ ಬಗ್ಗೆ ಮಾತನಾಡುತ್ತಿದ್ದಾರೆ. ಅದೇ ರೀತಿ ಕುರಾನ್ ಅನ್ನೂ ಸಂಪೂರ್ಣವಾಗಿ ಓದಿಕೊಳ್ಳದೆ ಸಮರ್ಥನೆ ಮಾಡಿಕೊಳ್ಳುವುದನ್ನು ನೋಡುತ್ತಿದ್ದೇವೆ. ಕುರಾನ್‌ನಲ್ಲಿ ಒಂದು ಅಕ್ಷರವನ್ನೂ ತಿದ್ದಲು ಅವಕಾಶವಿಲ್ಲ ಎಂದ ಅವರು, ಕುರಾನ್‌ನಲ್ಲಿ ತ್ರಿವಳಿ ತಲಾಕ್‌ಗೆ ಮಾನ್ಯತೆಯಿಲ್ಲ. ಆದರೂ, ಕೇಂದ್ರ ಸರಕಾರ ತ್ರಿವಳಿ ತಲಾಕ್ ಕಾನೂನು ತಂದಿರುವುದು ಆಶ್ಚರ್ಯಕರ ಸಂಗತಿ ಎಂದು ಹೇಳಿದರು.

ಯುವಸಮುದಾಯವನ್ನು ಪ್ರೋತ್ಸಾಹಿಸಿ: ಸಂಘ-ಸಂಸ್ಥೆಗಳು ಹಾಗೂ ಸರಕಾರಗಳು ಪ್ರಶಸ್ತಿಗಳನ್ನು ನೀಡುವ ಸಂದರ್ಭದಲ್ಲಿ 50 ವರ್ಷ ಮೇಲ್ಪಟ್ಟವರನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತದೆ. ಆದರೆ, ಯುವ ಸಮುದಾಯವನ್ನು ಕಡೆಗಣಿಸಲಾಗುತ್ತದೆ. ಹೀಗಾಗಿ, 30 ವರ್ಷದೊಳಗಿನ ಉದಯೋನ್ಮುಖ ಲೇಖಕರು, ಸಾಹಿತಿಗಳಿಗೂ ಪ್ರಶಸ್ತಿ ನೀಡಿ, ಅವರನ್ನು ಉತ್ತೇಜಿಸಬೇಕು ಎಂದು ಅವರು ಸಲಹೆ ನೀಡಿದರು.

ಅಭಿನಂದನಾ ನುಡಿಗಳನ್ನಾಡಿದ ನಾಟಕಕಾರ ಡಾ.ನಟರಾಜ ತಲಘಟ್ಟಪುರ, ಹಿಂದಿನ ದಿನಗಳಲ್ಲಿ ಮಹಿಳೆಯರಿಗೆ ಸಂಪೂರ್ಣ ಸ್ವಾತಂತ್ರವಿಲ್ಲದ ಸಂದರ್ಭದಲ್ಲಿ ಶೋಷಣೆ, ದಬ್ಬಾಳಿಕೆ, ದೌರ್ಜನ್ಯಗಳ ವಿರುದ್ಧ ಬರಹ ಬಹಳ ಪ್ರಾಮುಖ್ಯತೆ ಪಡೆದುಕೊಂಡಿತ್ತು. ಆದರೆ, ಕಾಲಘಟ್ಟ ಬದಲಾದ ನಂತರದ ದಿನಗಳಲ್ಲಿ ಹಲವು ರಚನಾತ್ಮಕ ಕೃತಿಗಳು ಹೊರಬಂದಿರುವುದು ಅಭಿನಂದನಾರ್ಹ ಎಂದರು.

ಪ್ರಶಸ್ತಿ ಪುರಸ್ಕೃತೆ ದೀಪ್ತಿ ಭದ್ರಾವತಿ ಅವರು, ಸ್ತ್ರೀವಾದಿ ಚಿಂತನೆಗಳನ್ನು ಒಳಗೊಂಡಂತೆ ಆಧುನಿಕ ಕಾಲಘಟ್ಟದಲ್ಲಿ ಮಹಿಳೆಯರ ಮನೋಭಾವಕ್ಕೆ ತಕ್ಕಂತೆ ಕಥೆ, ಕಾದಂಬರಿ ರಚಿಸಿದ್ದಾರೆ. ಹೆಣ್ಣಿನ ಇಂದಿನ ಸಂವೇದನೆಯನ್ನು ಕಟ್ಟಿಕೊಟ್ಟಿದ್ದಾರೆ ಎಂದ ಅವರು, ಕೃತಿಕಾರರು ಮಹಿಳಾ ಸಂವೇದನೆಯಿಂದ ಹೊರಬಂದು ಕೃತಿ ರಚಿಸಬೇಕಾದ ಅಗತ್ಯವಿದೆ. ಅದನ್ನು ದೀಪ್ತಿ ಅವರ ಬರಹಗಳಲ್ಲಿ ಕಾಣಬಹುದು ಎಂದು ನುಡಿದರು.

ದೀಪ್ತಿ ಅವರ ಬರಹಗಳಲ್ಲಿ ಸಾಮಾನ್ಯ ಜನರ ದಾರುಣತೆ, ಅಂತಃಕರಣದ ತುಡಿತವಿದೆ. ಮಾನವೀಯ ವೌಲ್ಯಗಳ ಪ್ರತಿಪಾದನೆ, ಮನುಷ್ಯ ಸಂಬಂಧಗಳ ಹುಡುಕಾಟವನ್ನು ಕಾಣಬಹುದಾಗಿದೆ. ಇಂದಿನ ಜಾಗತೀರಣ ಸಂದರ್ಭದಲ್ಲಿ ನಿರ್ಮಾಣವಾಗುತ್ತಿರುವ ಅಡ್ಡಗೋಡೆಗಳಿಗೆ ಎದುರಾಗಿ ಮಾನವೀಯ ವೌಲ್ಯಗಳನ್ನು ಪ್ರತಿಪಾದಿಸಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಲೇಖಕಿಯರ ಸಂಘದ ಅಧ್ಯಕ್ಷ ವನಮಾಲ ಸಂಪನ್ನಕುಮಾರ್, ಎಚ್.ವಿ.ಸಾವಿತ್ರಮ್ಮನವರ ಪುತ್ರಿ ಕುಸುಮಾ ನರಸಿಂಹನ್ ಹಾಗೂ ಲೇಖಕಿ ದೀಪ್ತಿ ಭದ್ರಾವತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News