ಫೆಬ್ರವರಿಯಿಂದ ‘ದೇಶಕ್ಕಾಗಿ ನಾವು- ಐ ಕ್ಯಾನ್’ ಆಂದೋಲನ: ಎ.ಕೆ.ಸುಬ್ಬಯ್ಯ

Update: 2019-01-19 14:18 GMT

ಬೆಂಗಳೂರು, ಜ.19: ದೇಶವನ್ನು ಅಪಾಯಕ್ಕೆ ದೂಡಿರುವ ಬಿಜೆಪಿಯ ಆಡಳಿತವನ್ನು ಕೊನೆಗೊಳಿಸಿ, 2019ರ ಲೋಕಸಭಾ ಚುನಾವಣೆಯಲ್ಲಿ ಜನರ ಅಸಲಿ ಸಮಸ್ಯೆಗಳನ್ನು ಮುನ್ನೆಲೆಗೆ ತರಲು ‘ದೇಶಕ್ಕಾಗಿ ನಾವು- ಐ ಕ್ಯಾನ್’ ಆಂದೋಲನವನ್ನು ಫೆಬ್ರವರಿಯ ಮೊದಲ ವಾರದಲ್ಲಿ ಆರಂಭ ಮಾಡಲಿದ್ದೇವೆ ಎಂದು ಆಂದೋಲನದ ಕಾರ್ಯಕರ್ತ ಎ.ಕೆ.ಸುಬ್ಬಯ್ಯ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ವ್ಯಕ್ತಿಗಳಿಗೆ ಅವರದೇ ಆದ ಹಿತಾಸಕ್ತಿಗಳಿವೆ. ಅವರು ಯಾರು ದೇಶದ ಹಿತಾಸಕ್ತಿಯ ಬಗ್ಗೆ ಯೋಚಿಸುವುದಿಲ್ಲ. ಅಲ್ಲದೆ, ಕೋಮು ಶಕ್ತಿಗಳನ್ನು ತೀವ್ರವಾಗಿ ವಿರೋಧಿಸಬೇಕಾಗಿದೆ. ಈ ಚುನಾವಣೆ ಜನ ಹಾಗೂ ಮನುವಾದಿ, ಕೋಮುವಾದಿ ಶಕ್ತಿಗಳ ಚುನಾವಣೆಯಾಗಿದೆ. ಇದಕ್ಕಾಗಿ ಆಂದೋಲನ ಮಾಡಲಾಗುತ್ತಿದೆ ಎಂದು ಹೇಳಿದರು.

ಜ.10 ರಂದು ಫೇಸ್‌ಬುಕ್ ಲೈವ್ ಮೂಲಕ ಕರೆ ನೀಡಿದ ನಂತರ ಇದುವರೆಗೆ 500 ಜನರು ಈಆಂದೋಲನಕ್ಕೆ ಸ್ವಯಂ ಸೇವಕರು ನೋಂದಾಯಿಸಿಕೊಂಡಿದ್ದಾರೆ. ಫೆಬ್ರವರಿ ಮೊದಲ ವಾರದಲ್ಲಿ 1ಸಾವಿರ ಜನ ಕಾರ್ಯಕರ್ತರು ಹಾಗೂ ಇದರ ಮುಂಚೂಣಿ ವ್ಯಕ್ತಿಗಳು ಸೇರಿ ಮುಂದಿನ ಕಾರ್ಯಯೋಜನೆ ರೂಪಿಸಲಿದ್ದೇವೆ ಎಂದು ನುಡಿದರು.

ಅಲ್ಲದೆ, 5 ಸಾವಿರ ಜನ ಕಾರ್ಯಕರ್ತರು ಜೊತೆಯಾಗಿ ಮುಂದಿನ ನಾಲ್ಕು ತಿಂಗಳ ಕಾಲ ಜನರ ಸಮಸ್ಯೆಗಳನ್ನು ಮುನ್ನೆಲೆಗೆ ತರುವ ಕೆಲಸ ಯೋಜಿಸಲಿದ್ದೇವೆ. ಹೀಗಾಗಿ, ಜನರ ದನಿಯಾಗಿ ಸಂಸತ್ತಿನಲ್ಲಿ ಕೆಲಸ ಮಾಡುವ ಜನಪರ ಅಭ್ಯರ್ಥಿಗಳನ್ನು ಬೆಂಬಲಿಸಬೇಕೆಂಬ ಪ್ರಸ್ತಾಪವೂ ಇದೆ ಎಂದರು.

ಪ್ರಧಾನವಾಗಿ ‘ಕಿಸಾನ್ ನೌಜವಾನ್ ಸಂವಿಧಾನ್’ ’ರೈತರು-ಗ್ರಾಮೀಣ ಜನ, ಅಭದ್ರ ಉದ್ಯೋಗಸ್ಥರು- ವಿದ್ಯಾರ್ಥಿ- ಯುವಜನ, ಸಂವಿಧಾನ’ ಈ ಮೂರು ನಮ್ಮ ಆಂದೋಲನದ ಕೇಂದ್ರದಲ್ಲಿರುತ್ತದೆ. ಅಖಿಲ ಭಾರತ ಮಟ್ಟದಲ್ಲೂ ಇದು ನಡೆಯುತ್ತಿದ್ದ ಜನವರಿ 16 ರಂದು ದೇಶದ ಹಲವು ರಾಜ್ಯಗಳ ಚಿಂತಕರು, ಹೋರಾಟಗಾರರು ಸೇರಿ ಸಭೆ ನಡೆಸಿದ್ದು, ರಾಜ್ಯದ ಎಲ್ಲ ಪ್ರಜ್ಞಾವಂತರು, ಕ್ರಿಯಾಶೀಲರು ಆಂದೋಲನದ ಜೊತೆ ಕೈ ಜೋಡಿಸಬೇಕೆಂದು ಅವರು ಮನವಿ ಮಾಡಿದರು.

ದೇಶವು ಹಿಂದೆಂದೂ ಕಾಣದ ಪ್ರಮಾಣದಲ್ಲಿ ಉದ್ಯೋಗ ಅಭದ್ರತೆಯನ್ನು ಎದುರಿಸುತ್ತಿದೆ. ಜಾತಿ-ಧರ್ಮಗಳ ನಡುವೆ ಅವಿಶ್ವಾಸ ಹಾಗೂ ಹಿಂಸೆಗಳು ಹೆಚ್ಚಾಗುತ್ತಿದ್ದು, ಈ ಎಲ್ಲಾ ಕಾರಣಗಳನ್ನು ಮನಗಂಡು ಆಂದೋಲನವನ್ನು ಏರ್ಪಡಿಸಿದ್ದೇವೆ.

ಎ.ಕೆ.ಸುಬ್ಬಯ್ಯ, ಆಂದೋಲನದ ಕಾರ್ಯಕರ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News