ಜಾತಿ, ಧರ್ಮ, ಭಾಷೆ ಕುರಿತ ಚಿಂತನೆಗಳ ವಿಸ್ತರಣೆಗೆ ಪ್ರತಿ ವರ್ಷ ಸೀಮಾತೀತ ಸಾಹಿತ್ಯ ಪರ್ಬ: ಡಾ.ಅರವಿಂದ ಮಾಲಗತ್ತಿ

Update: 2019-01-19 14:33 GMT

ಬೆಂಗಳೂರು, ಜ.19: ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರಿಗೆ ಜಾತಿ, ಧರ್ಮ, ವರ್ಗ, ಭಾಷೆ, ಗಡಿ, ಪ್ರಾದೇಶಿಕತೆಯ ಕುರಿತು ಒಳ ನೋಟಗಳನ್ನು ವಿಸ್ತರಿಸಿಕೊಳ್ಳಲು ಸೂಕ್ತ ವೇದಿಕೆ ಕಲ್ಪಿಸಲು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರತಿ ವರ್ಷ ಸೀಮಾತೀತ ಸಾಹಿತ್ಯ ಪರ್ಬ ಎಂಬ ವಿನೂತನ ಕಾರ್ಯ್ರಮವನ್ನು ಆಯೋಜಿಸಲು ನಿರ್ಧರಿಸಿದೆ.

ರಾಜ್ಯವನ್ನು ಸೌಹಾರ್ದತೆಯ ನಾಡನ್ನಾಗಿ ರೂಪಿಸುವುದು ನಾಡಿನ ಪ್ರತಿಯೊಬ್ಬರ ಜವಾಬ್ದಾರಿ. ಹೀಗಾಗಿ ರಾಜ್ಯದಲ್ಲಿರುವ ಜಾತಿ, ಧರ್ಮ, ಲಿಂಗ, ಭಾಷೆ, ಪ್ರಾದೇಶಿಕತೆಯಲ್ಲಿರುವ ವೈರುಧ್ಯಗಳನ್ನು ಸರಿಯಾಗಿ ಗ್ರಹಿಸುವುದು. ಹಾಗೂ ಅದಕ್ಕೆ ಸೂಕ್ತ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ನಾಡಿನ ಸಂಶೋಧನಾ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ತಜ್ಞರ ವಿಚಾರ ವಿನಿಮಯಕ್ಕೆ ವೇದಿಕೆ ಕಲ್ಪಿಸಲಾಗುತ್ತಿದೆ ಎಂದು ಅಕಾಡೆಮಿಯ ಅಧ್ಯಕ್ಷ ಅರವಿಂದ ಮಾಲಗತ್ತಿ ತಿಳಿಸಿದರು.

ನಗರದ ಕನ್ನಡಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ಸೀಮಾತೀತ ಸಾಹಿತ್ಯ ಪರ್ಬವನ್ನು ಪ್ರತಿ ವರ್ಷ ನಡೆಸಲು ಅನುಕೂಲವಾಗುವಂತೆ 20ಲಕ್ಷ ರೂ. ಮೀಸಲಿಟ್ಟಿದ್ದೇವೆ. ಕನ್ನಡ ನಾಡು, ನುಡಿ, ಸಂಸ್ಕೃತಿ, ಆಚಾರ, ವಿಚಾರಗಳ ಕುರಿತ ಚರ್ಚೆ, ಸಂವಾದ, ಕೊಡುಕೊಳ್ಳುವಿಕೆ, ಹಿರಿಯ ತಜ್ಞರ ಅನುಭವಗಳಿಂದ ಕಲಿಯುವ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಈ ಪ್ರಕ್ರಿಯೆಯನ್ನು ಕೇವಲ ಒಂದು ಕಾರ್ಯಕ್ರಮವಾಗಿ ನೋಡದೆ, ಹಬ್ಬವಾಗಿ ರೂಪಾಂತರಿಸುವುದು ಸಾಹಿತ್ಯ ಅಕಾಡೆಮಿಯ ಉದ್ದೇಶವಾಗಿದೆ ಎಂದು ತಿಳಿಸಿದರು.

500ಕ್ಕೂ ಹೆಚ್ಚು ವಿದ್ವಾಂಸರು ಭಾಗಿ: ಮಾರ್ಚ್ 28, 2019ರಿಂದ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸೀಮಾತೀತ ಸಾಹಿತ್ಯ ಪರ್ಬ 3ದಿನಗಳ ರಾಷ್ಟ್ರೀಯ ಸಮಾವೇಶದಲ್ಲಿ ಕರ್ನಾಟಕವು ಒಳಗೊಂಡಂತೆ ದೇಶದ ವಿವಿಧ ರಾಜ್ಯಗಳಿಂದ 500ಕ್ಕೂ ಹೆಚ್ಚು ವಿದ್ವಾಂಸರು, ಸಂಶೋಧಕರು, ವಿಮರ್ಶಕರು, ಚಿಂತಕರು ಹಾಗೂ ಯುವಕರು ಒಂದು ವೇದಿಕೆಯಲ್ಲಿ ಭಾಗವಹಿಸಲಿದ್ದು, ಚರ್ಚೆ, ಸಂವಾದ, ಸಮಾಲೋಚನೆಗಳನ್ನು ನಡೆಸಲಿದ್ದಾರೆ ಎಂದು ಅವರು ಹೇಳಿದರು.

ಮಾರ್ಚ್ 28ರಿಂದ ಸೀಮಾತೀತ ಸಾಹಿತ್ಯ ಪರ್ಬ

ಮಾಚ್-28ರಿಂದ ಮೂರು ದಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸೀಮಾತೀತ ಸಾಹಿತ್ಯ ಪರ್ಬ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸುವಂತೆ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರಿಗೆ ಆಹ್ವಾನಿಸಲಾಗುತ್ತದೆ. ಹಾಗೂ ಅವರಿಗೆ ವಿವಿಧ ವಿಷಯಗಳ ಕುರಿತು ಪ್ರಬಂಧ ಮಂಡಿಸಲು ಮುಕ್ತ ಅವಕಾಶವನ್ನು ಕಲ್ಪಿಸಲಾಗುತ್ತದೆ.

ಪ್ರಬಂಧದ ವಿಷಯಗಳು: ಸೀಮಾತೀತ ಪರಿಕಲ್ಪನೆಯಡಿಯಲ್ಲಿ ಸೀಮಾತೀತ ಸಾಹಿತ್ಯದ ತಾತ್ವಿಕತೆ ಅಥವಾ ನೆಲೆ-ಬೆಲೆ, ಸೀಮಾತೀತ ಸಾಹಿತ್ಯ ನಡೆದು ಬಂದ ದಾರಿ, ದಲಿತ, ಬಂಡಾಯ: ಸೀಮಾತೀತ ವಿಮರ್ಶೆಯ ಅಂತರ್ ಸಂಬಂಧ, ಸೀಮಾತೀತ ಸಾಹಿತ್ಯ: ಹಳಗನ್ನಡ, ನಡುಗನ್ನಡ, ಹೊಸಗನ್ನಡ ಪ್ರಕಾರಗಳು.

ಸಾಹಿತ್ಯದ ಹೊಸ ತಿರುವು ಹೊಸ ಅಲೆಗಳು ವಿಭಾಗದಲ್ಲಿ ದಲಿತ ಸಾಹಿತ್ಯ, ಬಂಡಾಯ ಸಾಹಿತ್ಯ, ಮಹಿಳಾ ಸಾಹಿತ್ಯ, ಮುಸ್ಲಿಮ್ ಸಾಹಿತ್ಯ, ಕ್ರೈಸ್ತ ಸಾಹಿತ್ಯ ಹಾಗೂ ನವ ಪೀಳಿಗೆಯ ಸಾಹಿತ್ಯದ ಒಲವುಗಳು, ವೈಚಾರಿಕೆಯ ವಿಭಾಗದಲ್ಲಿ ಕೋಮುವಾದ ಮತ್ತು ಯುವಜನತೆ, ಧರ್ಮಕಾರಣ ಮತ್ತು ಸಮಾಜ, ಧರ್ಮ ನಿರಪೇಕ್ಷತೆ ಮತ್ತು ಸಮಾಜ ಹಾಗೂ ವರ್ತಮಾನದ ಸಂಘರ್ಷಗಳು, ವೌಢ್ಯದ ವೃತ್ತಾವೃತ್ತದ ಎಳೆಗಳ, ಸಾಹಿತ್ಯ ಮತ್ತು ಸಂವಹನ ಮಾಧ್ಯಮಗಳು ಕುರಿತ ವಿಷಯಗಳನ್ನು ಪ್ರಬಂಧ ರೂಪವಾಗಿ ಮಂಡಿಸಬಹುದಾಗಿದೆ.

ಸಾಹಿತ್ಯ ಪರ್ಬದಲ್ಲಿ ಪ್ರಬಂಧ ಮಂಡಿಸುವ ನೋಂದಾಯಿತ ಸದಸ್ಯರು ತಮ್ಮ ಪ್ರಬಂಧದ ಒಂದು ಪುಟದ ಮುಖ್ಯಾಂಶವನ್ನು ಫೆ.12, 2019ರ ಒಳಗೆ seemaateetaaparba@gmail.com ಗೆ ಕಳುಹಿಸಬೇಕು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ದೂ.080-22211730, 22106460ಗೆ ಸಂಪರ್ಕಿಸಲು ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News