ಕೆಟ್ಟ ವ್ಯವಸ್ಥೆಯಲ್ಲೂ ಜೀವನದ ಸಾರ್ಥಕತೆಗೆ ಅವಕಾಶಗಳಿರುತ್ತವೆ: ಲಕ್ಷ್ಮೀಶ ತೋಳ್ಪಾಡಿ

Update: 2019-01-19 17:25 GMT

ಬೆಂಗಳೂರು, ಜ.19: ವ್ಯವಸ್ಥೆ ಕೆಟ್ಟದಾಗಿದ್ದರೂ ಮನುಷ್ಯನ ಜೀವನದ ಸಾರ್ಥಕತೆಗೆ ಅವಕಾಶಗಳು ಇದ್ದೇ ಇರುತ್ತವೆ ಎಂದು ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅಭಿಪ್ರಾಯಿಸಿದರು.

ಶನಿವಾರ ಪ್ರಕೃತಿ ಪ್ರಕಾಶನ ಪ್ರಕಟಿಸಿರುವ ‘ನೆನಪೇ ಸಂಗೀತ: ವಿದ್ಯಾಭೂಷಣರ ಜೀವನ ಕಥನ’ ಕೃತಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಳಗಿನವರು ಸೇರಿದಂತೆ ಮೇಲಿನವರು ಸಹ ಬಿಡುಗಡೆಯಾದರೆ ಮಾತ್ರ ಸಮಾಜವು ಎಲ್ಲ ತಾರತಮ್ಯಗಳಿಂದ ಬಿಡುಗಡೆಗೊಳ್ಳುತ್ತದೆ ಎಂದರು.

ಸಂಗೀತ ಮತ್ತು ವಿರಹಕ್ಕೆ ಹತ್ತಿರದ ಸಂಬಂಧವಿದೆ. ಹಾಡುಗಾರ ವಿರಹಿಯಾದಷ್ಟು, ಆತ ಶೋತೃಗಳಿಗೆ ವಿಲಕ್ಷಣವಾಗಿ ಕಾಣುತ್ತಾನೆ. ಸುಬ್ರಹ್ಮಣ್ಯ ಮಠದಲ್ಲಿ ವಿದ್ಯಾಭೂಷಣ ಇದ್ದಾಗ, ಉಪ್ಪರಿಗೆಯ ಕೋಣೆಯ ಕಿಟಕಿ ಹತ್ತಿರ ಕುಳಿತು ಹಾಡುತ್ತಿದ್ದ. ಆತನ ಹಾಡು ಎಂದೆಂದಿಗೂ ಸಿಗಲಾರದ ಪ್ರಿಯೆಯನ್ನು ಕರೆಯುತ್ತಿದ್ದಾನೆ ಎನಿಸುತ್ತಿತ್ತು. ಆತನ ಸ್ವರ, ಸುತ್ತಲಿನ ಕಾಡುಪರಿಸರ ಮತ್ತು ಸನ್ಯಾಸ ಆತನಲ್ಲಿ ಬೇಕಾದಷ್ಟು ವಿರಹವನ್ನು ತುಂಬಿತ್ತು ಎಂದು ಅವರು ಹೇಳಿದರು.

 ಲೇಖಕ ಜಯಂತ ಕಾಯ್ಕಿಣಿ ಮಾತನಾಡಿ, ‘ನೆನಪೇ ಸಂಗೀತ: ವಿದ್ಯಾಭೂಷಣರ ಜೀವನ ಕಥನ’ ಪುಸ್ತಕದಲ್ಲಿ ಮೊದಲ ಮತ್ತು ಕೊನೆಯ ಅಧ್ಯಾಯಗಳು ಸೊಗಸಾಗಿವೆ. ಪೂರ್ವಾಶ್ರಮ ಸಂಬಂಧಗಳು ಇದ್ದರೂ ಇಲ್ಲದಂತಹ ಯಾತನೆಗಳನ್ನು ಸಹಿಸುವ ಪ್ರಸಂಗವಿದೆ. ಪತಿಯಾಗುವ ಮುನ್ನ ವಿದ್ಯಾಭೂಷಣರು ಪತ್ನಿ ರಮಾರೊಂದಿಗೆ ಟ್ರಂಕ್ ಕಾಲ್‌ನಲ್ಲಿ ತಾಸುಗಟ್ಟಲೆ ಮಾತನಾಡುತ್ತಿದ್ದರಂತೆ. ಎದುರಿಗೆ ಸಿಕ್ಕಾಗ ಮಂದಸ್ಮಿತವೆ ಅವರ ಸಂಭಾಷಣೆಯಾಗುತ್ತಿತ್ತಂತೆ ಎಂಬ ವಿವರಗಳು ಪುಸ್ತಕದಲ್ಲಿದೆ ಎಂದು ಕೃತಿಯ ಕುರಿತು ಮಾತನಾಡಿದರು.

ಸಂಗೀತಗಾರ ವಿದ್ಯಾಭೂಷಣ ಮಾತನಾಡಿ, ನನಗೆ ಅಪ್ಪನೆಂದರೆ ಭಯ ಇತ್ತು. ಸನ್ಯಾಸ ಕೊಡಿಸಿದರು ಎಂದು ಅವರ ಮೇಲೆ ಸಿಟ್ಟಿತ್ತು. ಅವರ ಜೀವನದ ಪಾಡನ್ನು ಕಂಡಾಗ ವಿಷಾದವಾಗುತ್ತಿತ್ತು. ಅವರು ತೀರಿಕೊಂಡಾಗ ಪಶ್ಚಾತ್ತಾಪವಾಗಿತ್ತು ಎಂದು ಹೇಳಿದರು.

ಚಾತುರ್ಮಾಸದಲ್ಲಿ ಪೇಜಾವರ ಶ್ರೀಗಳೊಂದಿಗೆ ವಾಚನ ಪ್ರವಚನಗಳನ್ನು ಮಾಡುತ್ತಿದ್ದೆ. ಮಾಸಾಂತ್ಯದಲ್ಲಿ ಪ್ರತಿ ಸಂಜೆ ಸಂಗೀತ ಕಚೇರಿ ನಡೆಸಿಕೊಡುತ್ತಿದ್ದೆ. ಹಾಗೆ ಒಂದೂವರೆ ತಿಂಗಳು ಹಾಡುತ್ತ ಭಾಗವತ ಮುಗಿಸಿದ್ದೆ. ಒಮ್ಮೆ ಹೈದರಾಬಾದ್ ಆಕಾಶವಾಣಿಯಲ್ಲಿ ಹಾಡಿದಾಗ 25ಸಾವಿರ ರೂ.ಸಂಭಾವನೆ ಕೊಟ್ಟರು. ಪೀಠಾಧಿಪತಿಯ ಸ್ಥಾನಕ್ಕಿಂತ ಆ ದುಡಿಮೆಯ ಹಣ ನನಗೆ ಹೆಚ್ಚು ಸಂತಸ ತಂದುಕೊಟ್ಟಿತು. ಆಗ ನಾನು ಸನ್ಯಾಸಿಯಾಗಿದ್ದೆ. ನಂತರ, ಸಂಗೀತಗಾರನಾದೆ. ಈಗ ಆತ್ಮಕಥನ ಬರೆದು ಸಾಹಿತಿಯಾಗಿಬಿಟ್ಟೆ ಎಂದು ಸಂತಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News