ಆಂಧ್ರಪ್ರದೇಶ: ತುಳುನಾಡ ಕೋರಿಕಟ್ಟದಲ್ಲಿ ಬಹುಕೋಟಿ ರೂ. ದಂಧೆ

Update: 2019-01-20 04:14 GMT

ವಿಜಯವಾಡ, ಜ. 20: ಆಂಧ್ರಪ್ರದೇಶ ಕರಾವಳಿಯಲ್ಲಿ ಸಂಕ್ರಾಂತಿ ಸಂದರ್ಭ ಸಾಂಪ್ರದಾಯಿಕವಾಗಿ ಗಾಳಿಪಟ ಹಾರಿಸುವುದು, ಸುಗ್ಗಿ ಸಂಭ್ರಮದಂಥ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತದೆ. ಆದರೆ ಇದೀಗ ಸಂಕ್ರಾಂತಿ ಸಂದರ್ಭದಲ್ಲಿ ರಕ್ತದ ಓಕುಳಿ, ಮದ್ಯದ ಮತ್ತು ಹಣದ ಹೊಳೆ ಹರಿಯುತ್ತಿರುವ ದೃಶ್ಯ ಕಂಡುಬರುತ್ತಿದೆ.

ತುಳುನಾಡಿನ ಸಾಂಪ್ರದಾಯಿಕ ಮನೋರಂಜನಾ ಕ್ರೀಡೆಯಾದ ಕೋರಿಕಟ್ಟ (ಕೋಳಿ ಅಂಕ) ಆಂಧ್ರ ಕರಾವಳಿಯಲ್ಲಿ ಈ ಸಂದರ್ಭದಲ್ಲಿ ಎಲ್ಲೆಡೆ ಅವ್ಯಾಹತವಾಗಿ ನಡೆಯುತ್ತಿದ್ದು, ಕೋಟ್ಯಂತರ ರೂಪಾಯಿಗಳ ದೊಡ್ಡ ದಂಧೆಯಾಗಿ ಬೆಳೆದಿದೆ.

ಕಾಲಿಗೆ ಕಟ್ಟುವ ಬಾಳು (ಹರಿತ ಆಯುಧ) ಮೂಲಕ ಎದುರಾಳಿಯ ಜಂಬದ ಕೋಳಿಯನ್ನು ಸಾಯಿಸುವರೆಗೂ ದಾಳಿ ಮಾಡುವ ಫೇವರಿಟ್ ಹುಂಜದ ಮೇಲೆ ಕೋಟಿಗಟ್ಟಲೆ ಬೆಟ್ಟಿಂಗ್ ನಡೆಯುತ್ತದೆ. ಒಂದರ್ಥದಲ್ಲಿ ತಮಿಳುನಾಡಿನಲ್ಲಿ ನಡೆಯುವ ಜಲ್ಲಿಕಟ್ಟು ಕ್ರೀಡೆಯ ಹಿಂಸಾತ್ಮಕ ಹಾಗೂ ಸಂಕ್ಷಿಪ್ತ ರೂಪ ಇದು.

ಈ ವರ್ಷದ ಸಂಕ್ರಾಂತಿ ಸಂದರ್ಭದಲ್ಲಿ ಕರಾವಳಿಯ ಎಲ್ಲೆಡೆ ತಾತ್ಕಾಲಿಕ ಟೆಂಟ್‌ಗಳಲ್ಲಿ ನಡೆಯುತ್ತಿರುವ ಕೋಳಿ ಅಂಕದಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಕೋಳಿಗಳು ಪಾಲ್ಗೊಂಡಿವೆ. ಸುಮಾರು 900 ರಿಂದ 1200 ಕೋಟಿ ರೂಪಾಯಿಯನ್ನು ಪಂಟರ್‌ಗಳು ಪಣಕ್ಕಿಟ್ಟಿದ್ದರು ಎಂದು ಹೇಳಲಾಗುತ್ತಿದೆ.

ಇಂಥ ಕೋಳಿ ಅಂಕ ಆಯೋಜಿಸುವ ವಿಜಯವಾಡದ ಹೊರವಲಯದ ಎಡುಪಗಲ್ಲು ಎಂಬ ಒಂದು ಪುಟ್ಟಗ್ರಾಮ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಆಂಧ್ರದಿಂದ ಮಾತ್ರವಲ್ಲದೇ ತೆಲಂಗಾಣ, ಒಡಿಶಾ ಮತ್ತು ತಮಿಳುನಾಡಿನಿಂದಲೂ ದ್ವಿಚಕ್ರ ವಾಹನಗಳಲ್ಲಿ ಜನ ಹಿಂಡು ಹಿಂಡಾಗಿ ಇಲ್ಲಿಗೆ ಆಗಮಿಸುತ್ತಾರೆ.

ಹೈಕೋರ್ಟ್ ಆದೇಶದ ಪ್ರಕಾರ ಕೋಳಿ ಅಂಕ ನಿಷಿದ್ಧ. ಆದಾಗ್ಯೂ ಅವ್ಯಾಹತವಾಗಿ ನಡೆಯುತ್ತಿದೆ. ಈ ಬಾರಿ 914 ಪ್ರಕರಣಗಳನ್ನು ದಾಖಲಿಸಿದ್ದೇವೆ ಎಂದು ಪೊಲೀಸ್ ಆಯುಕ್ತ ಸಿ.ಎಚ್.ದ್ವಾರಕ ತಿರುಮಲ ರಾವ್ ಹೇಳಿದ್ದಾರೆ. ಆದರೆ ಬಹುತೇಕ ಕಡೆಗಳಲ್ಲಿ ನಡೆಯುವ ಕೋಳಿ ಅಂಕಕ್ಕೆ ಪೊಲೀಸರೇ ಮೂಕ ಪ್ರೇಕ್ಷಕರಾಗುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News