‘ಕೈ’ ಶಾಸಕರ ಮಧ್ಯೆ ಗಲಾಟೆ: ಆನಂದ್ ಸಿಂಗ್ ಆಸ್ಪತ್ರೆಗೆ ದಾಖಲು ?

Update: 2019-01-20 14:30 GMT

ಬೆಂಗಳೂರು, ಜ. 20: ಬೆಂಗಳೂರು ಹೊರವಲಯದ ಬಿಡದಿಯ ಸಮೀಪದ ರೆಸಾರ್ಟ್‌ನಲ್ಲಿದ್ದ ಕಾಂಗ್ರೆಸ್ ಶಾಸಕರಾದ ಬಳ್ಳಾರಿ ಜಿಲ್ಲೆಯ ವಿಜಯನಗರ ಕ್ಷೇತ್ರದ ಆನಂದ್ ಸಿಂಗ್ ಮತ್ತು ಕಂಪ್ಲಿ ಕ್ಷೇತ್ರದ ಗಣೇಶ್ ನಿನ್ನೆ ತಡರಾತ್ರಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಹಲ್ಲೆ ಹಿನ್ನೆಲೆಯಲ್ಲಿ ಆನಂದ್ ಸಿಂಗ್ ಅವರ ಕಣ್ಣು, ಭುಜ ಮತ್ತು ಕಿಬ್ಬೊಟ್ಟೆ, ತಲೆಗೆ ಪೆಟ್ಟು ತಗುಲಿ ತೀವ್ರ ಸ್ವರೂಪದ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಅವರನ್ನು ನಗರದ ಶೇಷಾದ್ರಿಪುರಂನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.

ಬಳ್ಳಾರಿಯ ಕಾಂಗ್ರೆಸ್ ಪಕ್ಷದ ಶಾಸಕರಾದ ಭೀಮಾನಾಯ್ಕ್, ಆನಂದ್ ಸಿಂಗ್ ಮತ್ತು ಗಣೇಶ್ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಕೈ-ಕೈ ಮಿಲಾಯಿಸಿದ್ದು, ಗಲಾಟೆ ಮಾಡಿಕೊಂಡ ಹಿನ್ನೆಲೆಯಲ್ಲಿ ಆನಂದ್ ಸಿಂಗ್ ಗಾಯಗೊಂಡಿದ್ದಾರೆ ಎಂದು ಗೊತ್ತಾಗಿದೆ.

‘ಆಪರೇಷನ್ ಕಮಲ’ ಸಂಬಂಧದ ರಹಸ್ಯ ಮಾಹಿತಿಯನ್ನು ಆನಂದ್ ಸಿಂಗ್, ಸಿಎಂ ಕುಮಾರಸ್ವಾಮಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ಬಹಿರಂಗಗೊಳಿಸಿದ್ದರು. ಹೀಗಾಗಿ ಆಕ್ರೋಶಗೊಂಡಿದ್ದ ಗಣೇಶ್ ನಿನ್ನೆ ರಾತ್ರಿ ಪಾರ್ಟಿ ವೇಳೆ ಆನಂದ್ ಸಿಂಗ್ ಅವರನ್ನು ಪ್ರಶ್ನಿಸಿದ್ದಾರೆ. ಇದರಿಂದ ಪರಸ್ಪರ ಮಾತಿನ ಚಕಮಕಿ ನಡೆಸಿದ್ದು, ಒಂದು ಹಂತದಲ್ಲಿ ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ.

ಆದರೆ, ಮತ್ತೊಂದು ಮೂಲದ ಪ್ರಕಾರ ಆನಂದ್ ಸಿಂಗ್ ಎದೆನೋವಿನಿಂದ ಬೆಳಗ್ಗೆ 7:05ರ ಸುಮಾರಿಗೆ ಖಾಸಗಿ ಆಸ್ಪತ್ರೆಗೆ ಅವರೇ ಕಾರಿನಲ್ಲಿ ಆಗಮಿಸಿ ದಾಖಲಾಗಿದ್ದಾರೆಂದು ಗೊತ್ತಾಗಿದೆ. ಆಪರೇಷನ್ ಭೀತಿ ಹಿನ್ನೆಲೆಯಲ್ಲಿ ಮೈತ್ರಿ ಸರಕಾರ ಸಂಕಷ್ಟದಲ್ಲಿರುವಾಗಲೇ ಶಾಸಕರು ಗಲಾಟೆ ಮಾಡಿಕೊಂಡಿದ್ದಾರೆನ್ನುವುದು ಮೈತ್ರಿ ಪಕ್ಷಗಳ ಮುಖಂಡರನ್ನು ಮುಜುಗರಕ್ಕೆ ಸಿಲುಕಿಸಿದೆ.

ಆನಂದ್ ಸಿಂಗ್ ಅವರು ಎದೆನೋವಿನ ಕಾರಣಕ್ಕೆ ಆಸ್ಪತ್ರೆಗೆ ಬಂದಿದ್ದು, ಅವರ ಕಣ್ಣಿಗೆ ಸಣ್ಣ ಪೆಟ್ಟು ತಗುಲಿದ್ದು, ಸಿಟಿ ಸ್ಕಾನ್ ಮಾಡಲಾಗಿದೆ. ಅವರಿಗೆ ಪ್ರಾಣಾಪಾಯವಿಲ್ಲ, ಆರೋಗ್ಯವಾಗಿದ್ದು, ಅವರಿಗೆ ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

ಮುಖಂಡರ ‘ಭಿನ್ನ’ ಹೇಳಿಕೆ: ಶಾಸಕರಾದ ಆನಂದ್ ಸಿಂಗ್ ಮತ್ತು ಗಣೇಶ್ ಕೈ-ಕೈ ಮಿಲಾಯಿಸಿಕೊಂಡಿದ್ದಾರೆಂಬ ಸುದ್ಧಿ ಶುದ್ಧ ಸುಳ್ಳು ಎಂದಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಶಾಸಕರ ನಡುವೆ ಯಾವುದೇ ಗಲಾಟೆ ನಡೆದಿಲ್ಲ. ಅವರಿಬ್ಬರೂ ಮಾಧ್ಯಮಗಳಿಗೆ ಶೀಘ್ರವೇ ಪ್ರತಿಕ್ರಿಯೆ ನೀಡಲಿದ್ದಾರೆಂದು ಹೇಳಿದ್ದಾರೆ.

ಆದರೆ, ಶಿವಕುಮಾರ್ ಅವರ ಸಹೋದರ, ಸಂಸದ ಡಿ.ಕೆ.ಸುರೇಶ್, ಎದೆ ನೋವಿನ ಕಾರಣದಿಂದ ಆನಂದ್‌ಸಿಂಗ್ ಆಸ್ಪತ್ರೆ ದಾಖಲಾಗಿದ್ದು, ಸಂಜೆಯೊಳಗೆ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದಿದ್ದಾರೆ. ಸಚಿವ ಝಮೀರ್ ಅಹ್ಮದ್ ಖಾನ್, ಶಾಸಕರ ಮಧ್ಯೆ ಸಣ್ಣ-ಪುಟ್ಟ ಮನಸ್ತಾಪವಿದ್ದು, ಗಲಾಟೆ ನಡೆದಿರುವುದು ಸತ್ಯ ಎಂದು ಒಪ್ಪಿಕೊಂಡಿರುವುದು ಸಂಶಯಕ್ಕೆ ಕಾರಣವಾಗಿದೆ.

ರೆಸಾರ್ಟ್‌ಗೆ ಮುಖಂಡರ ದೌಡು: ಶಾಸಕರ ನಡುವೆ ಗಲಾಟೆ ಸುದ್ಧಿ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರು ರೆಸಾರ್ಟ್‌ನತ್ತ ದೌಡಾಯಿಸಿದ್ದು, ಗಲಾಟೆಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೆ, ಉಸ್ತುವಾರಿ ವೇಣುಗೋಪಾಲ್ ಅವರಿಗೆ ಮಾಹಿತಿ ರವಾನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News