ಮಾಯಾವತಿ ನಪುಂಸಕರಿಗಿಂತಲೂ ಕಡೆ ಎಂದ ಬಿಜೆಪಿ ಶಾಸಕಿ!

Update: 2019-01-20 13:41 GMT

   ಲಕ್ನೊ, ಜ.20: ಬಿಎಸ್ಪಿ ನಾಯಕಿ ಮಾಯಾವತಿ ನಪುಂಸಕರಿಗಿಂತಲೂ ಕಡೆ . ಅವರು ಮಹಿಳೆಯೂ ಅಲ್ಲ, ಪುರುಷರೂ ಅಲ್ಲ. ಅವರಿಗೆ ಘನತೆ ಎಂಬ ಪದದ ಅರ್ಥವೇ ತಿಳಿದಿಲ್ಲ. ತನ್ನನ್ನು ಈ ಹಿಂದೆ ಅವಮಾನಿಸಿದವರ ಜೊತೆ ಕೈಜೋಡಿಸಿದ್ದಾರೆ ಎಂದು ಬಿಜೆಪಿ ಶಾಸಕಿ ಸಾಧನಾ ಸಿಂಗ್ ಟೀಕಿಸಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.

   ಶಾಸಕಿಯ ಹೇಳಿಕೆಯನ್ನು ಗಮನಿಸಿ, ಅವರಿಗೆ ನೋಟಿಸ್ ಜಾರಿಗೊಳಿಸಲು ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂಪ್ರೇರಿತವಾಗಿ ನಿರ್ಧರಿಸಿದೆ ಎಂದು ವರದಿಯಾಗಿದೆ. ಬಿಜೆಪಿ ಶಾಸಕಿಯ ಹೇಳಿಕೆಯನ್ನು ಖಂಡಿಸಿರುವ ಬಿಎಸ್ಪಿ ಮುಖಂಡ ಸತೀಶ್‌ಚಂದ್ರ ಮಿಶ್ರ, ಸಾಧನಾ ಸಿಂಗ್ ಬಳಸಿದ ಭಾಷೆ ಬಿಜೆಪಿಯರ ಸಂಸ್ಕೃತಿಗೆ ಉದಾಹರಣೆಯಾಗಿದೆ. ಸಾಧನಾ ಸಿಂಗ್ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಅವರನ್ನು ಆಗ್ರ ಅಥವಾ ಬರೇಲಿಯ ಮಾನಸಿಕ ಆಸ್ಪತ್ರೆಗೆ ದಾಖಲಿಸಬೇಕು ಎಂದಿದ್ದಾರೆ.

ಮಹಾಭಾರತದಲ್ಲಿ ದ್ರೌಪದಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಳಿಕ ಸೇಡು ತೀರಿಸುವುದಾಗಿ ಪ್ರತಿಜ್ಞೆ ಮಾಡಿದ್ದರು. ಆದರೆ ಉ.ಪ್ರದೇಶದ ಮಾಜಿ ಮುಖ್ಯಮಂತ್ರಿ ತನ್ನ ಬಟ್ಟೆಬಿಚ್ಚಲು ಮುಂದಾಗಿದ್ದ ವ್ಯಕ್ತಿಗಳ ಜೊತೆಗೇ ಇದೀಗ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಅಧಿಕಾರ ಪಡೆಯಲು ತನ್ನನ್ನು ತಾನೇ ಮಾರಿಕೊಂಡಿದ್ದು ಇಡೀ ಮಹಿಳಾ ಕುಲಕ್ಕೇ ಇವರೊಂದು ಕೆಟ್ಟ ಹೆಸರಾಗಿದ್ದಾರೆ. ಅತಿಥಿಗೃಹದಲ್ಲಿ ಪಕ್ಷವೊಂದರ ಕಾರ್ಯಕರ್ತರಿಂದ ದಾಳಿಗೊಳಗಾಗಿದ್ದ ಮಾಯಾವತಿಯ ಘನತೆಯನ್ನು ಬಿಜೆಪಿ ರಕ್ಷಿಸಿತ್ತು. ಆದರೆ ತನ್ನ ಲಾಭಕ್ಕಾಗಿ ಮತ್ತು ಅಧಿಕಾರದ ದಾಹಕ್ಕಾಗಿ ಅದನ್ನು ಮಾರಿಕೊಂಡಿದ್ದಾರೆ. ಇಡೀ ದೇಶದ ಮಹಿಳೆಯರೆಲ್ಲಾ ಮಾಯಾವತಿಯನ್ನು ಖಂಡಿಸುತ್ತಿದ್ದಾರೆ ಎಂದು ಸಾಧನಾ ಸಿಂಗ್ ಶನಿವಾರ ಹೇಳಿಕೆ ನೀಡಿದ್ದರು. ಎಸ್ಪಿ-ಬಿಎಸ್ಪಿ ಮೈತ್ರಿಯಿಂದ ಹತಾಶರಾಗಿರುವ ಬಿಜೆಪಿ ಇದೀಗ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಕೈಬಿಟ್ಟಿದೆ ಮತ್ತು ಮಾನಸಿಕ ಸಮತೋಲನ ಕಳೆದುಕೊಂಡಿದೆ ಎಂದು ಎಸ್ಪಿ ಮುಖಂಡ ಸತೀಶ್‌ಚಂದ್ರ ಮಿಶ್ರ ಇದಿರೇಟು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News