ಶಾಸಕರ ಗಲಾಟೆ ಸುದ್ದಿ ಶುದ್ಧ ಸುಳ್ಳು: ಸಚಿವ ಡಿ.ಕೆ.ಶಿವಕುಮಾರ್

Update: 2019-01-20 13:32 GMT

ಬೆಂಗಳೂರು, ಜ. 20: ಬಳ್ಳಾರಿಯ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಮತ್ತು ಕಂಪ್ಲಿ ಕ್ಷೇತ್ರದ ಶಾಸಕ ಗಣೇಶ್ ಕೈ-ಕೈ ಮಿಲಾಯಿಸಿಕೊಂಡಿದ್ದಾರೆ ಎಂಬ ಮಾಧ್ಯಮಗಳ ಸುದ್ದಿ ಶುದ್ಧ ಸುಳ್ಳು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಸ್ಪಷ್ಟಣೆ ನೀಡಿದ್ದಾರೆ.

ರವಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಬ್ಬರು ಶಾಸಕರು ರೆಸಾರ್ಟ್‌ನಲ್ಲಿ ಚೆನ್ನಾಗಿಯೇ ಇದ್ದಾರೆ. ಯಾರೋ ಸುಖಾ ಸುಮ್ಮನೆ ಸುಳ್ಳು ಸುದ್ಧಿ ಹಬ್ಬಿಸುತ್ತಿದ್ದಾರೆ. ಅವರಿಬ್ಬರೂ ಒಟ್ಟಿಗೆ ಮಾಧ್ಯಮಗಳ ಮುಂದೆ ಬರಲಿದ್ದಾರೆ ಎಂದು ಹೇಳಿದರು.

ಇಬ್ಬರ ಮಧ್ಯೆ ಕೆಲ ಸಣ್ಣಪುಟ್ಟ ಮನಸ್ತಾಪ ಇದ್ದದ್ದು ನಿಜ. ಅದೆಲ್ಲವೂ ನಿನ್ನೆ ನಾನೇ ಬಗೆಹರಿಸಿದ್ದೇನೆ. ಕ್ಷೇತ್ರಗಳ ಅನುದಾನ ಹಂಚಿಕೆಗೆ ಸಂಬಂಧಿಸಿದಂತೆ ಮನಸ್ತಾಪ ಇತ್ತೇ ಹೊರತು, ಶಾಸಕರ ನಡುವೆ ವೈಯಕ್ತಿಕ ದ್ವೇಷ ಇರಲಿಲ್ಲ. ಇದು ಸತ್ಯಕ್ಕೆ ದೂರವಾದದ್ದು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಬಿಜೆಪಿ ಮುಖಂಡರು ಬರ ಪರಿಸ್ಥಿತಿ ಅಧ್ಯಯನಕ್ಕಾಗಿ ಬಂದಿದ್ದಾರೆ. ಹತ್ತು ದಿನ ಹರ್ಯಾಣದ ಗುರುಗ್ರಾಮದ ರೆಸಾರ್ಟ್‌ನಲ್ಲಿ ಕಾಲ ಕಳೆದು ಬಂದಿದ್ದಾರೆ. ಒಳ್ಳೆಯ ಗಾಳಿ, ಒಳ್ಳೆಯ ವಾತಾವರಣ ಅನುಭವಿಸಿ ಬಂದಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಶಿವಕುಮಾರ್ ಲೇವಡಿ ಮಾಡಿದರು.

ಬರ ಪರಿಸ್ಥಿತಿ ಅಧ್ಯಯನ ನಡೆಸಿ ಈಗಾಗಲೇ ಅಗತ್ಯ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ, ಕುಡಿಯುವ ನೀರು ಮತ್ತು ಮೇವು ಪೂರೈಕೆಗೆ ಸರಕಾರ ಕ್ರಮ ವಹಿಸಿದೆ. ಆದರೆ, ಬಿಜೆಪಿ ಶಾಸಕರು ಕ್ಷೇತ್ರದಲ್ಲಿ ಕಣ್ಮರೆಯಾಗಿದ್ದಾರೆಂದು ಅವರು ವಾಗ್ದಾಳಿ ನಡೆಸಿದರು.

ಎದೆನೋವಿನಿಂದ ಆಸ್ಪತ್ರೆ: ಶಾಸಕ ಆನಂದ್‌ಸಿಂಗ್ ಅವರು ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರ ಹೊರತಾಗಿ ಶಾಸಕರ ನಡುವೆ ಗಲಾಟೆ ನಡೆದಿಲ್ಲ. ಆನಂದ್ ಸಿಂಗ್‌ಗೆ ಯಾವುದೇ ಗಾಯಗಳಾಗಿಲ್ಲ ಎಂದು ಸಂಸದ ಡಿ.ಕೆ.ಸುರೇಶ್ ಸ್ಪಷ್ಟಣೆ ನೀಡಿದರು.

ಆಸ್ಪತ್ರೆಗೆ ದಾಖಲಾಗಿರುವ ಆನಂದ್‌ಸಿಂಗ್ ಅವರ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ ಅವರು, ‘ಗಣೇಶ್ ಮತ್ತು ಆನಂದಸಿಂಗ್ ನಡುವೆ ಗಲಾಟೆಯಾಗಿದೆ. ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದ, ಇದೆಲ್ಲವೂ ಆಧಾರ ರಹಿತ’ ಎಂದು ನಿರಾಕರಿಸಿದರು.

ರವಿವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಆನಂದ್ ಸಿಂಗ್ ಅವರು ತಾವಾಗಿಯೇ ಬಂದು ಶೇಷಾದ್ರಿಪುರಂನಲ್ಲಿರುವ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸರಿಯಾಗಿ ನಿದ್ದೆ ಇರಲಿಲ್ಲ. ಆರೋಗ್ಯ ಕೊಂಚ ಕೆಟ್ಟಿದೆ ಎಂಬ ಮಾಹಿತಿ ಇದೆ. ವೈದ್ಯರು ಆನಂದ್ ಸಿಂಗ್ ಅವರಿಗೆ ವಿವಿಧ ಪರೀಕ್ಷೆಗಳನ್ನು ಮಾಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News