ಪಿಎನ್‌ಬಿಯ ಕಾರ್ಯಕಾರಿ ನಿರ್ದೇಶಕರಿಬ್ಬರ ತಲೆದಂಡ: ನೀರವ್ ಮೋದಿ ವಂಚನೆ ಪ್ರಕರಣ

Update: 2019-01-20 15:06 GMT

ಹೊಸದಿಲ್ಲಿ,ಜ.20: ನೀರವ್ ಮೋದಿಯಿಂದ ಎರಡು ಶತಕೋಟಿ ಡಾ.ವಂಚನೆಯನ್ನು ತಡೆಯಲು ವಿಫಲಗೊಂಡಿದ್ದಕ್ಕಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‌ಬಿ)ನ ಕಾರ್ಯಕಾರಿ ನಿರ್ದೇಶಕರಾದ ಕೆ.ವೀರ ಬ್ರಹ್ಮಾಜಿ ರಾವ್ ಮತ್ತು ಸಂಜೀವ ಶರಣ್ ಅವರನ್ನು ಸರಕಾರವು ವಜಾಗೊಳಿಸಿದೆ.

ಈ ಇಬ್ಬರು ಆರ್‌ ಬಿಐ ಮಾರ್ಗಸೂಚಿಯನ್ನು ಉಲ್ಲಂಘಿಸಿದ್ದರು ಎಂದು ಸಿಬಿಐ ಆರೋಪಿಸಿತ್ತು. ವರ್ಷದ ಹಿಂದೆ ಮೋದಿ ಮತ್ತು ಆತನ ಸೋದರಮಾವ ಮೇಹುಲ್ ಚೋಕ್ಸಿ ನಡೆಸಿದ್ದ ಬೃಹತ್ ವಂಚನೆ ಬೆಳಕಿಗೆ ಬಂದ ನಂತರ ಇದು ಬ್ಯಾಂಕಿನ ಅಧಿಕಾರಿಗಳನ್ನು ವಜಾಗೊಳಿಸಿರುವ ಮೊದಲ ಪ್ರಕರಣವಾಗಿದೆ.

ರಾವ್ ಮತ್ತು ಶರಣ್ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಕಾರ್ಯಕಾರಿ ನಿರ್ದೇಶಕರ ಹುದ್ದೆಗಳಿಂದ ವಜಾಗೊಳಿಸಲಾಗಿದೆ ಎಂದು ಪಿಎನ್‌ಬಿ ಶುಕ್ರವಾರ ಸಂಜೆ ಶೇರು ವಿನಿಮಯ ಕೇಂದ್ರಗಳಿಗೆ ಸಲ್ಲಿಸಿರುವ ಹೇಳಿಕೆಯಲ್ಲಿ ತಿಳಿಸಿದೆ. ಆದರೆ ವಜಾಕ್ಕೆ ಕಾರಣವನ್ನು ತಿಳಿಸಿಲ್ಲ.

ಆದರೆ ಈ ಇಬ್ಬರು ಅಧಿಕಾರಿಗಳು ವಂಚನೆಯನ್ನು ಪತ್ತೆ ಹಚ್ಚಲು ಜಾಗತಿಕ ಪಾವತಿ ಜಾಲ ಸ್ವಿಫ್ಟ್ ಅನ್ನು ಬಳಸಲು ವಿಫಲಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ. ಅವರು ಸರಿಯಾದ ಉಸ್ತುವಾರಿಯನ್ನು ವಹಿಸಿರಲಿಲ್ಲ ಮತ್ತು ಕರ್ತವ್ಯಲೋಪವನ್ನು ಎಸಗಿದ್ದರು ಎಂದು ಅವು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News