ಬೆಂಗಳೂರು: ಅಂತಾರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ಅದ್ಧೂರಿ ತೆರೆ

Update: 2019-01-20 15:47 GMT

ಬೆಂಗಳೂರು, ಜ.20: ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ವಾಣಿಜ್ಯ ಮೇಳದಲ್ಲಿ ಮೂರು ದಿನಗಳಲ್ಲಿ 1.5 ಲಕ್ಷ ಜನ ಭೇಟಿ ನೀಡಿದ್ದು, ಕೋಟ್ಯಾಂತರ ರೂಪಾಯಿಗಳ ವಹಿವಾಟಿನ ಮೂಲಕ ಅದ್ಧೂರಿ ತೆರೆ ಕಂಡಿದೆ.

ಜ.18ರಿಂದ 20ರವರೆಗೆ ನಡೆದ ಮೇಳದಲ್ಲಿ ದೇಶ-ವಿದೇಶಗಳಿಂದ ಆಗಮಿಸುವ ಆಹಾರ ಕಂಪೆನಿಗಳು, ವಿಜ್ಞಾನಿಗಳು, ರೈತರು ಸಾಕ್ಷಿಯಾದರು. ತಮಿಳುನಾಡು, ಆಂಧ್ರಪ್ರದೇಶ, ಹಿಮಾಚಲ ಪ್ರದೇಶ, ಪಂಜಾಬ್, ಮಣಿಪುರ, ಕೇರಳ ಮತ್ತು ತೆಲಂಗಾಣ ಸೇರಿದಂತೆ ಚಿಲಿ, ಪೋಲಂಡ್, ಶ್ರೀಲಂಕ, ಯುಎಇ, ಜರ್ಮನಿ, ಸ್ವಿಡ್ಜರ್‌ಲ್ಯಾಂಡ್ ಮತ್ತಿತರ ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದು, ಸುಮಾರು 400ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳು, 16 ಸ್ಟಾರ್ಟ್‌ಅಪ್ ಸಂಸ್ಥೆಗಳು ಭಾಗವಹಿಸಿದ್ದವು.

ಸೂಕ್ತ ಮಾರುಕಟ್ಟೆ ಕಲ್ಪಿಸಲು ಚಿಂತನೆ: ನಗರ ಹಾಗೂ ಗ್ರಾಮೀಣ ಪ್ರದೇಶದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಿರಿಧಾನ್ಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ, ರೈತರು ಹೆಚ್ಚಾಗಿ ಸಿರಿಧಾನ್ಯಗಳನ್ನು ಬೆಳೆಯುವಂತೆ ಪ್ರೋತ್ಸಾಹಿಸಲು ಮೇಳ ಯಶಸ್ವಿಯಾಗಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಸಿರಿಧಾನ್ಯ ಬೆಳೆಯುವವರಿಗೆ ವಿಶೇಷವಾದ ಪ್ರೋತ್ಸಾಹ, ಸಹಾಯ ಹಾಗೂ ಸೂಕ್ತ ಮಾರುಕಟ್ಟೆ ಕಲ್ಪಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಭರವಸೆ ನೀಡಿದರು.

ಸಿರಿಧಾನ್ಯಗಳನ್ನು ಬೆಳೆಯಲು ಹೆಚ್ಚು ಬಂಡವಾಳದ ಅಗತ್ಯವಿಲ್ಲ. ಅಲ್ಲದೆ, ಇದನ್ನು ಅತಿ ಕಡಿಮೆ ನೀರು ಬಳಕೆ ಮಾಡಿ ಬೆಳೆಯುವುದರಿಂದ ಮಳೆಯಾಶ್ರಿತ ಭೂಮಿಯಲ್ಲಿಯೂ ಬೆಳೆಯಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಅಧಿಕವಾದ ಬರವನ್ನು ಕಾಣುತ್ತಿದ್ದೇವೆ. ಈ ನಿಟ್ಟಿನಲ್ಲಿ ರೈತರು ಈ ಕಡೆಗೆ ಹೆಚ್ಚು ಒಲವು ತೋರುತ್ತಿರುವುದು ಸಂತೋಷದ ಸಂಗತಿ ಎಂದು ನುಡಿದರು.

ಪ್ರಶಸ್ತಿ ಪ್ರದಾನ: ಮೇಳದಲ್ಲಿ ಸಾವಯವ ಮತ್ತು ಸಿರಿಧಾನ್ಯಕ್ಕೆ ಸಂಬಂಧಿಸಿ 7 ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರಶಸ್ತಿ ನೀಡಲಾಯಿತು. ಸೆಂಟ್ರಲ್ ಫುಡ್ ಟೆಕ್ನಾಲಜಿ ರಿಸರ್ಚ್ ಇನ್‌ಸ್ಟಿಟ್ಯೂಟ್, ಡಾ. ಸಿ.ತಾರಾ ಸತ್ಯವತಿ, ಸಿ. ಅರುಣಾ, ಕೊಠಾರಂ ಆಗ್ರೋ ಪ್ರೈ ಲಿ., ಶೈಲಜಾ, ಇನ್ನರ್ ಬಿನ್ ವಿಲ್‌ನರ್ ಪ್ರೈ ಲಿ., ದಾನ್ ಫೌಂಡೇಶನ್‌ಗೆ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿಯು ಪ್ರಮಾಣ ಪತ್ರ, 30 ಸಾವಿರ ರೂ. ನಗದು ಬಹುಮಾನ ಹೊಂದಿದೆ.

ಅಡುಗೆ ಸ್ಪರ್ಧೆ ವಿಜೇತರು: ಎರಡು ವಿಭಾಗವಾಗಿ ಅಡುಗೆ ಮಾಡುವ ಸ್ಪರ್ಧೆ ಏರ್ಪಡಿಸಲಾಗಿದ್ದು, ಮೊದಲ ವಿಭಾಗದಲ್ಲಿ ಮಾನಸ್ ಪ್ರಥಮ (10 ಸಾವಿರ ನಗದು), ದಿವ್ಯ ಜೈನ್- ದ್ವಿತೀಯ (8 ಸಾವಿರ ರೂ.), ರೂಪಾ ಬಾಲಚಂದ್ರ - ತೃತೀಯ (6 ಸಾವಿರ ರೂ.). ಎರಡನೇ ವಿಭಾಗದಲ್ಲಿ ಶಿಾ ಫಾತಿಮಾ - ಪ್ರಥಮ (10 ಸಾವಿರ ರೂ.), ಮಾನಸ್ - ದ್ವಿತೀಯ (8 ಸಾವಿರ ರೂ.), ದಿವ್ಯ ಜೈನ್ - ತೃತೀಯ (6 ಸಾವಿರ ರೂ.) ಬಹುಮಾನ ಪಡೆದರು.

ರೈತರಿಗೆ ಹಾಗೂ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಸ್ಕರಣೆ ನಂತರ ಮಾರಾಟ ಮಾಡುವ ಸಲುವಾಗಿ ಮಾರಾಟ ಒಕ್ಕೂಟ ರಚಿಸಲು ಸರಕಾರ ಚಿಂತನೆ ನಡೆಸಿದೆ.

-ಎನ್.ಎಚ್.ಶಿವಶಂಕರರೆಡ್ಡಿ, ಕೃಷಿ ಸಚಿವ

ಸಿರಿಧಾನ್ಯಗಳ ಮಹತ್ವದ ಬಗ್ಗೆ ನಮಗೆ ಸರಿಯಾದ ಮಾಹಿತಿ ಇರಲಿಲ್ಲ. ಆದರೆ, ನಾವು ಮೂರು ದಿನಗಳ ಕಾಲವೂ ಮೇಳದಲ್ಲಿ ಬಂದು ಹಲವಾರು ಮಾಹಿತಿ ಪಡೆದುಕೊಂಡೆವು. ಸಿರಿಧಾನ್ಯಗಳಿಂದ ಹಲವು ರೋಗಗಳು ದೂರವಾಗುತ್ತವೆ. ಮುಂದಿನ ದಿನಗಳಲ್ಲಿ ನಾವು ನಮ್ಮ ಮನೆಯಲ್ಲಿ ಆಹಾರದೊಂದಿಗೆ ಸಿರಿಧಾನ್ಯಗಳನ್ನು ಬಳಕೆ ಮಾಡಲು ನಿರ್ಧರಿಸಿದ್ದೇವೆ.

-ಪ್ರೇಮಲತಾ, ಹೆಬ್ಬಾಳದ ನಿವಾಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News