ಅಪರೇಷನ್ ಕಮಲದ ವಿರುದ್ಧ ಜನತೆ ಧ್ವನಿ ಎತ್ತಲಿ: ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ

Update: 2019-01-20 15:52 GMT

ಬೆಂಗಳೂರು, ಜ.20: ಅಪರೇಷನ್ ಕಮಲದ ಹೆಸರಿನಲ್ಲಿ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸುತ್ತಿರುವ ಜನಪ್ರತಿನಿಧಿಗಳ ವಿರುದ್ಧ ರಾಜ್ಯದ ಜನತೆ ಧ್ವನಿ ಎತ್ತಬೇಕೆಂದು ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ತಿಳಿಸಿದರು.

ರವಿವಾರ ಕಲಾ ಬಂಧು ಫೌಂಡೇಷನ್ ನಗರದ ಗಾಂಧಿಭವನದಲ್ಲಿ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರಸ್ವಾಮಿ ಅವರ ಜೀವಿತ ಸಾಧನೆ ಕುರಿತಾದ ಸಾಕ್ಷಚಿತ್ರದ ದೃಶ್ಯ ಮುದ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರ, ಪ್ರಜೆಗಳಿಂದ ಚುನಾಯಿತರಾದ ಶಾಸಕರನ್ನು ಹರಾಜಿಗೆ ಕೂಗುವ ರೀತಿಯಲ್ಲಿ ಆಮಿಷ ಒಡ್ಡುತ್ತಿರುವುದು ರಾಜ್ಯಸಭಾ ಸದಸ್ಯರಾದ ನನಗೆ ಅಸಹ್ಯ ತರಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶಾಂತವೀರಿ ಗೋಪಾಲಗೌಡರು ಚುನಾವಣಾ ಖರ್ಚಿಗಾಗಿ ಜನತೆಯಿಂದಲೆ ಹಣ ಸಂಗ್ರಹಿಸಿ ಚುನಾವಣೆ ಎದುರಿಸಿದರು. ಖರ್ಚಾಗಿ ಉಳಿದ ಹಣವನ್ನು ಪುನಃ ಜನತೆಗೆ ಹಿಂದಿರುಗಿಸಿದರು. ಇಂತಹ ಇತಿಹಾಸ ಹೊಂದಿರುವ ರಾಜ್ಯವನ್ನು ಅರಾಜಕತೆಗೆ ತಳ್ಳುತ್ತಿರುವವರ ವಿರುದ್ಧ ಜನತೆ ಮೌನ ವಹಿಸಬಾರದೆಂದು ಅವರು ಹೇಳಿದರು.

ಎಚ್.ಎಸ್.ದೊರೆಸ್ವಾಮಿ ನಮ್ಮ ರಾಜ್ಯದ ಸಾಕ್ಷಿ ಪ್ರಜ್ಞೆಯಾಗಿದ್ದಾರೆ. ಸ್ವಾತಂತ್ರ ಪೂರ್ವದಲ್ಲಿ ಹುಟ್ಟಿದ ಅವರು, ಸ್ವಾಂತಂತ್ರಕ್ಕಾಗಿ ಹೋರಾಟ ಮಾಡಿದರು. ನಂತರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನತೆಗಾಗಿ ನಿರಂತರವಾಗಿ ಹೋರಾಟದಲ್ಲಿ ತೊಡಗಿದ್ದಾರೆ. ಇಂತವರ ಬದುಕು ಶಿಕ್ಷಣದಲ್ಲಿ ಪಠ್ಯವಾಗಬೇಕೆಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಅಕ್ಕಿಮಠದ ಗುರುಲಿಂಗ ಸ್ವಾಮಿ, ಶಾಸಕ ಎ.ಟಿ.ರಾಮಸ್ವಾಮಿ ಮತ್ತಿತರರಿದ್ದರು.

‘ಸರಕಾರಿ ಭೂ ಒತ್ತುವರಿ ಸಂಬಂಧಿಸಿದ ಸದನ ಸಮಿತಿ ಅಧ್ಯಕ್ಷ ಎ.ಟಿ.ರಾಮಸ್ವಾಮಿ, ರಾಜ್ಯದಲ್ಲಿ ಅಕ್ರಮವಾಗಿ ಸರಕಾರಿ ಭೂಮಿ ಒತ್ತುವರಿಯಾಗಿರುವುದನ್ನು ಪತ್ತೆ ಹಚ್ಚಿ ಸುಮಾರು 3ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿಯನ್ನು ಸರಕಾರಕ್ಕೆ ಒದಗಿಸಿಕೊಟ್ಟಿದ್ದಾರೆ. ಇಂತಹ ಪ್ರಮಾಣಿಕ ಜನಪ್ರತಿನಿಧಿಗಳು ನಮ್ಮ ಸಮಾಜದಲ್ಲಿದ್ದಾರೆ. ಇದೇ ಸಮಾಜದಲ್ಲಿ ತಮ್ಮ ಸ್ವಾರ್ಥಕ್ಕಾಗಿ ಶಾಸಕರನ್ನು ಖರೀದಿಸುವವರಿದ್ದಾರೆ. ಹೀಗಾಗಿ ಜನತೆ ನಿರಾಶರಾಗಬೇಕಿಲ್ಲ. ಸರಿಯಾದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ನಿರ್ಣಯ ಕೈಗೊಳ್ಳಬೇಕು’

-ಡಾ.ಎಲ್.ಹನುಮಂತಯ್ಯ, ರಾಜ್ಯಸಭಾ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News