ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನದಲ್ಲಿ ಆಕರ್ಷಿಸಿದ ನೀರಿನ ಕಾರಂಜಿ

Update: 2019-01-20 16:17 GMT

ಬೆಂಗಳೂರು, ಜ.20: ಲಾಲ್‌ಬಾಗ್‌ನಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ಮೈಸೂರಿನ ಕೆಆರ್‌ಎಸ್ ಅನ್ನು ನೆನಪಿಸುವ ನೀರಿನ ಕಾರಂಜಿಗಳ ಝೇಂಕಾರ ನೋಡುಗರನ್ನು ಆಕರ್ಷಿಸುತ್ತಿವೆ. ಪ್ರದರ್ಶನದ ಮೂರನೇ ದಿನದ ಅಂಗವಾಗಿ ಲಾಲ್‌ಬಾಗ್‌ನ ನೀರಿನ ಜಲಪಾತ ಪ್ರತಿ 20 ನಿಮಿಷಕ್ಕೆ ಒಮ್ಮೆ ನೋಡುಗರ ಗಮನ ಸೆಳೆಯುತ್ತಿದ್ದುದು ಪ್ರದರ್ಶನದ ಮತ್ತೊಂದು ಆಕರ್ಷಣೆಯಾಗಿತ್ತು. ಉದ್ಯಾನದಾದ್ಯಂತ ಕಾರಂಜಿಗಳು ಚಿಮ್ಮುತ್ತಿದ್ದ ನೀರಿನ ಸಿಂಚನ ತಂಪು ನೀಡುತ್ತಿತ್ತು.

ಹೆಚ್ಚು ಜನ ಭೇಟಿ: ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಮೂರನೇ ದಿನ ರವಿವಾರ ಲಾಲ್‌ಬಾಗ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರು ಆಗಮಿಸಿದ್ದರು. ಖ್ಯಾತ ಚಲನಚಿತ್ರ ನಿರ್ದೇಶಕ ಎಸ್. ನಾರಾಯಣ್ ದಂಪತಿ ಸೇರಿದಂತೆ ಹಲವರು ಭೇಟಿ ನೀಡಿ ಪುಷ್ಪಗಳಲ್ಲಿ ಅರಳಿರುವ ಸಬರಮತಿ ಆಶ್ರಮವನ್ನು ವೀಕ್ಷಿಸಿ ಪುಳಕಿತಗೊಂಡರು.

ವೆಸ್ಟ್‌ಗೇಟ್‌ನಲ್ಲಿ ಹೆಚ್ಚಿದ ಜನ: ಲಾಲ್‌ಬಾಗ್‌ಗೆ ರವಿವಾರ ಮೆಟ್ರೊ ರೈಲಿನಲ್ಲಿ ಹೆಚ್ಚಿನ ವೀಕ್ಷಕರು ಆಗಮಿಸಿದ ಪರಿಣಾಮ ವೆಸ್ಟ್‌ಗೇಟ್‌ನಲ್ಲಿ ಹೆಚ್ಚಿನ ಜನಸಂದಣಿಯಿತ್ತು. ವಾಹನ ನಿಲುಗಡೆ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ ಹಲವು ವೀಕ್ಷಕರು ಮೆಟ್ರೊ ರೈಲನ್ನು ಅವಲಂಬಿಸಿದ್ದರು. ಇದೊಂದು ಉತ್ತಮ ಬೆಳವಣಿಗೆಯಾಗಿತ್ತು.

ದೃಷ್ಟಿ ವಿಶೇಷಚೇತನರ ಸಂಗೀತ: ಪ್ರತಿ ಪ್ರದರ್ಶನದಲ್ಲೂ ಉದ್ಯಾನದ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿ ಸಂಗೀತದ ಇಂಪು ಕೇಳುಗರ ಗಮನ ಸೆಳೆಯುತ್ತದೆ. ಅದೇ ರೀತಿ ಫಲಪುಷ್ಪ ಪ್ರದರ್ಶನದಲ್ಲಿ ನಡೆದ ಸಂಗೀತ ಕಛೇರಿ ಅತ್ಯಂತ ವಿಶೇಷವಾಗಿತ್ತು. ಸಂಜೆ ದೃಷ್ಟಿ ವಿಶೇಷಚೇತನರಾದ ಬಾಲಚಂದ್ರ ಮತ್ತು ತಂಡದವರು ಕಛೇರಿ ನಡೆಸಿಕೊಟ್ಟರು ಎಂದು ರಾಜ್ಯ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಂ.ಆರ್. ಚಂದ್ರಶೇಖರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News