ಅಂತಾರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ 240 ಕೋಟಿ ವಹಿವಾಟು

Update: 2019-01-20 16:22 GMT

ಬೆಂಗಳೂರು, ಜ.20: ನಗರದ ಅರಮನೆ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಅಂತಾರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯ ವಾಣಿಜ್ಯ ಮೇಳದಲ್ಲಿ 240.25 ಕೋಟಿ ರೂ.ಗೂ ಅಧಿಕ ವಹಿವಾಟು ನಡೆದಿದೆ.

ಮೂರು ದಿನಗಳ ಮೇಳದಲ್ಲಿ ದೇಶ-ವಿದೇಶಗಳ ಹಲವಾರು ಕಂಪೆನಿಗಳು, ರೈತರು ನೇರ ಮುಖಾಮುಖಿಯಾಗಲು ಸಾಧ್ಯವಾಗಿದೆ. 300 ಬಿಟುಬಿ ಸಭೆಗಳು ನಡೆದಿದ್ದು, 67 ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಖರೀದಿದಾರು 56, 511 ಮೆಟ್ರಿಕ್ ಟನ್ ಸಿರಿಧಾನ್ಯಗಳ ಖರೀದಿಗೆ ರೈತರೊಂದಿಗೆ ಒಪ್ಪಂದಕ್ಕೆ ಸಹಿಹಾಕಲಾಗಿದೆ.

ಸಣ್ಣ ಮತ್ತು ಅತಿಸಣ್ಣ ರೈತರನ್ನು ದೇಶ-ವಿದೇಶಗಳೊಂದಿಗೆ ಲಿಂಕ್ ಮಾಡುವ ಉದ್ದೇಶದಿಂದ ಮೇಳದಲ್ಲಿ ರೈತರಿಗಾಗಿ ಆಯೋಜಿಸಿದ್ದ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಂವಾದ ಸಭೆಗಳಲ್ಲಿ ಎರಡು ಸಾವಿರಕ್ಕೂ ಅಧಿಕ ರೈತರು ಪಾಲ್ಗೊಂಡು ಮಾಹಿತಿ ಪಡೆದುಕೊಂಡಿದ್ದಾರೆ. 7 ಅಂತಾರಾಷ್ಟ್ರೀಯ ಪ್ರತಿನಿಧಿಗಳು, 400 ವಿವಿಧ ರಾಜ್ಯಗಳ ಪ್ರತಿನಿಧಿಗಳು ಹಾಗೂ 11 ರಾಜ್ಯಗಳು ಮೇಳದಲ್ಲಿ ಪಾಲ್ಗೊಂಡಿದ್ದವು ಎಂದು ಕೃಷಿ ಇಲಾಖೆಯ ಕೃಷಿ ಆಯುಕ್ತ ಕೆ.ಜಿ.ಜಗದೀಶ್ ಮಾಹಿತಿ ನೀಡಿದರು.

ಕರ್ನಾಟಕದಲ್ಲಿ 121 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಇದ್ದು, 20.97 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಾವಯವ ಉತ್ಪಾದನೆ ಮಾಡಲಾಗುತ್ತಿದೆ. ರಾಜ್ಯದ 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 2.82 ಲಕ್ಷ ಟನ್ ಸಿರಿಧಾನ್ಯಗಳನ್ನು ಉತ್ಪಾದನೆ ಮಾಡಲಾಗುತ್ತಿದೆ ಎಂದ ಅವರು, ಮುಂದಿನ ವರ್ಷದೊಳಗೆ ರಾಜ್ಯಾದ್ಯಂತ 1.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯಗಳನ್ನು ಬೆಳೆಯಲು ಗುರಿಯನ್ನಿಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News