ಚನ್ನಕಲ್ ಗ್ರಾಮದಲ್ಲಿ ಅಸ್ಪಶ್ಯತೆ ಆಚರಣೆ ಬಗ್ಗೆ ಪೇಜಾವರ ಶ್ರೀ ಉತ್ತರ ನೀಡಬೇಕು: ಲಕ್ಷ್ಮಿನಾರಾಯಣ ನಾಗವಾರ

Update: 2019-01-20 16:28 GMT

ಬೆಂಗಳೂರು, ಜ. 20: ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಚನ್ನಕಲ್ ಗ್ರಾಮದಲ್ಲಿ ಅಸ್ಪಶ್ಯತೆ ಜೀವಂತವಾಗಿರುವ ಬಗ್ಗೆ ಹಿಂದೂಧರ್ಮದ ವಕ್ತಾರರಾದ ಉಡುಪಿಯ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಶ್ರೀಗಳು ಉತ್ತರ ನೀಡಬೇಕು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಲಕ್ಷ್ಮಿ ನಾರಾಯಣ ನಾಗವಾರ ಆಗ್ರಹಿಸಿದ್ದಾರೆ.

ದಲಿತರು ನಿಮಗೆ ಮನುಷ್ಯರಂತೆ ಕಾಣುತ್ತಿಲ್ಲವೇ? ‘ನಾವೆಲ್ಲ ಹಿಂದೂ ನಾವೆಲ್ಲ ಒಂದು’ ಎಂದು ಹೇಳುವ ನೀವು(ಪ್ರೇಜಾವರ ಶ್ರೀಗಳು) ಮುಸ್ಲಿಮ್, ಕ್ರೈಸ್ತರ ವಿರುದ್ಧ ಹೋರಾಟ ಮಾಡಬೇಕಾದರೆ ದಲಿತರು ನಿಮಗೆ ಹಿಂದೂಗಳಾಗಿ ಕಾಣುಸುತ್ತಾರೆಯೇ ಎಂದು ಲಕ್ಷ್ಮಿನಾರಾಯಣ ನಾಗವಾರ ಟೀಕಿಸಿದ್ದಾರೆ.

ಮುಸ್ಲಿಮರು, ಕ್ರೈಸ್ತರು ಇಲ್ಲದಾಗ ದಲಿತರು ನಿಮಗೆ ಹಿಂದೂಗಳಾಗಿ ಕಾಣುವುದಿಲ್ಲ. ಅವರು ಅಸ್ಪಶ್ಯರಾಗಿ ಕಾಣುತ್ತಾರೆ ಅಲ್ಲವೇ? ಹೀಗಾಗಿ ನಾವು ಹಿಂದೂ ಧರ್ಮದಲ್ಲಿ ಉಳಿಯಬೇಕೋ? ಮತಾಂತರವಾಗಬೇಕೋ? ಎಂದು ಲಕ್ಷ್ಮಿನಾರಾಯಣ ನಾಗವಾರ, ಪೇಜಾವರ ಶ್ರೀಗಳನ್ನು ಪ್ರಶ್ನಿಸಿದ್ದಾರೆ.

ದಲಿತರ ಮೇಲೆ ಹೇರಿರುವ ಅಸ್ಪಶ್ಯತೆಯ ಕರಾಳತೆ ಖಂಡನೀಯ. ಗ್ರಾಮದ ಎಲ್ಲ ಸಮುದಾಯಗಳಿಗೆ ಸಮರ್ಪಕ ನೀರಿನ ಸೌಲಭ್ಯ ಕಲ್ಪಿಸಿ, ದಲಿತ ಕೇರಿಗೆ ಕೊಳವೆ ನಲ್ಲಿಗಳ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಕ್ಷೌರದ ಅಂಗಡಿಗಳನ್ನು ಪ್ರಾರಂಭಿಸಿ ದಲಿತರಿಗೂ ಅವಕಾಶ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ದಲಿತ ಹೆಣ್ಣು ಮಕ್ಕಳಿಗೆ ಮಾನಸಿಕ, ದೈಹಿಕ ಹಿಂಸೆ ಕೊಡುತ್ತಿರುವ ಪುಂಡರನ್ನು ಕೂಡಲೇ ಬಂಧಿಸಬೇಕು. ಗ್ರಾಮದಲ್ಲಿ ಅಸ್ಪಶ್ಯತೆ ಆಚರಿಸುತ್ತಿರುವವರ ಮೇಲೆ ಸರಕಾರ ಸ್ವಪ್ರೇರಣೆಯಿಂದ ದೂರು ದಾಖಲು ಮಾಡಿಕೊಂಡು ಕ್ರಮ ಜರುಗಿಸಬೇಕು. ಅಸ್ಪಶ್ಯತೆ ಆಚರಣೆ ಮಾಡುವವರನ್ನು ಕೂಡಲೇ ಗಡಿಪಾರು ಮಾಡಬೇಕು. ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ ದಲಿತರಿಗೆ ರಕ್ಷಣೆ ಕಲ್ಪಿಸಬೇಕು ಎಂದು ನಾಗವಾರ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News