ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ: ತರಕಾರಿ, ಹಣ್ಣು, ಹೂವುಗಳಲ್ಲಿ ಅರಳಿದ ಕಲಾಕೃತಿಗಳು

Update: 2019-01-20 16:34 GMT

ಬೆಂಗಳೂರು, ಜ.20: ಗಣರಾಜ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನದದಲ್ಲಿ ಕಲ್ಲಂಗಡಿ ಹಣ್ಣಿನಲ್ಲಿ ಹೂಬುಟ್ಟಿ ಮಾಡಿದರೆ, ಬಾಳೆ-ತೆಂಗಿನ ಗರಿಗಳಲ್ಲಿ ಕಲ್ಯಾಣ ಮಂಟಪ, ಮೂಲಂಗಿಯಲ್ಲಿ ಶಂಕು ಮಾಡಿದರೆ, ಕ್ಯಾರಟ್‌ನಲ್ಲಿ ಹೂವು, ಪಕ್ಷಿ ಹೀಗೆ ಬಗೆ ಬಗೆಯ ಹಣ್ಣು-ತರಕಾರಿಗಳಿಂದ ಹಲವು ಪ್ರಕಾರದ ಕಲೆಗಳು ಮೈದಳೆದಿವೆ.

ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದ ಅಂಗವಾಗಿ ಉದ್ಯಾನದ ಡಾ. ಎಂ.ಎಚ್. ಮರಿಗೌಡ ಸ್ಮಾರಕ ಸಭಾಂಗಣದಲ್ಲಿ ಆಯೋಜಿಸಿರುವ ಪೂರಕ ಕಲೆಗಳ ಪ್ರದರ್ಶನಕ್ಕೆ ಶಾಸಕಿ ಸೌಮ್ಯ ರೆಡ್ಡಿ ಚಾಲನೆ ನೀಡಿದ್ದು, ಹೆಚ್ಚು ಜನರನ್ನು ಇದನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.

ಪುಷ್ಪ ಜೋಡಣೆ, ತರಕಾರಿ ಕೆತ್ತನೆ, ಇಕೆಬಾನ, ಡಚ್ ಹಾಗೂ ಒಣ ಹೂವಿನ ಜೋಡಣೆ, ಥಾಯ್ ಆರ್ಟ್ ಮತ್ತಿತರ ಪೂರಕ ಕಲೆಗಳ ಪ್ರದರ್ಶನದಲ್ಲಿ 450 ಜೋಡಣೆಗಳನ್ನು ಅಲಂಕರಿಸಲಾಗಿತ್ತು.

ಬೃಹತ್ ಗಾತ್ರದ ಸಿಹಿಕುಂಬಳ ಕಾಯಿಯಲ್ಲಿ ಚಿತ್ತಾರ ಬಿಡಿಸಿ, ಗಣರಾಜ್ಯೋತ್ಸವ ಶುಭಾಶಯಗಳನ್ನು ಪ್ರದರ್ಶಿಸಿದರೆ, ಕ್ಯಾರಟ್‌ನಲ್ಲಿ ಪಕ್ಷಿಗಳನ್ನು ನಿರ್ಮಿಸಲಾಗಿದೆ. ಬದನೆಕಾಯಿ ಮತ್ತು ಸೋರೆಕಾಯಿಯಲ್ಲಿ ಹೆಣ್ಣು-ಗಂಡಿನ ಮೂರ್ತಿಗಳನ್ನು ಮಾಡಲಾಗಿದೆ. ಡಚ್ ಹೂವುಗಳ ಜೋಡಣೆಯಂತೂ ಮನೋಲ್ಲಾಸವಾಗಿದೆ. ಥಾಯ್ ಆರ್ಟ್, ಇಕೆಬಾನ, ಒಣ ಹೂವಿನ ಜೋಡಣೆ ಹೀಗೆ ಎಲ್ಲವೂ ಒಂದಕ್ಕಿಂತ ಒಂದು ಭಿನ್ನವಾಗಿವೆ. ಆ ಕಲಾಕೃತಿಗಳು ಮತ್ತು ಜೋಡಣೆಗೊಂಡಿರುವ ರೀತಿ ನೋಡುಗರನ್ನು ಬೆರಗುಗೊಳಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News