ಭಾರತ ಮೂಲದ ಗುರಿಂದರ್‌ಸಿಂಗ್‌ ಗೆ ಅಮೆರಿಕದ ಪ್ರತಿಷ್ಠಿತ ಪ್ರಶಸ್ತಿಯ ಗರಿ

Update: 2019-01-20 16:36 GMT

ವಾಶಿಂಗ್ಟನ್, ಜ.20: ಭಾರತೀಯ ಮೂಲದ ಅಮೆರಿಕನ್ ಪ್ರಜೆ, ಖ್ಯಾತ ಸಮಾಜಸೇವಕ ಹಾಗೂ ಉದ್ಯಮಿ ಗುರಿಂದರ್‌ಸಿಂಗ್ ಖಾಲ್ಸಾ ಅವರಿಗೆ ಪ್ರತಿಷ್ಠಿತ ‘ರೋಸಾ ಪಾರ್ಕ್ ಟ್ರೈಲ್‌ಬ್ಲೇಝರ್’ ಪುರಸ್ಕಾರ ದೊರೆತಿದೆ. ಸಿಖ್ಖ್ ಸಮುದಾಯದ ಶಿರವಸ್ತ್ರದ ಬಗ್ಗೆ ಅಮೆರಿಕದ ಆಡಳಿತವು ತನ್ನ ನೀತಿಯನ್ನು ಬದಲಿಸುವಂತೆ ಮಾಡಲು ಕಾರಣವಾದ ಯಶಸ್ವಿ ಅಭಿಯಾನವೊಂದನ್ನು ಕೈಗೊಂಡಿದ್ದಕ್ಕಾಗಿ ಅವರಿಗೆ ಈ ಪುರಸ್ಕಾರ ನೀಡಲಾಗಿದೆ.

ಇಂಡಿಯಾನ ಪೊಲೀಸ್ ನಿವಾಸಿಯಾದ 45 ವರ್ಷ ವಯಸ್ಸಿನ ಖಾಲ್ಸಾ ಅವರಿಗೆ 2007ರಲ್ಲಿ ಸಾಂಪ್ರದಾಯಿಕ ಸಿಖ್ಖ್ ಪೇಟಾ ಧರಿಸಿದ್ದರೆಂಬ ಕಾರಣಕ್ಕಾಗಿ ವಿಮಾನವೇರದಂತೆ ತಡೆಹಿಡಿಯಲಾಗಿತ್ತು. ಈ ಘಟನೆಯ ಆನಂತರ ಖಾಲ್ಸಾ ಅವರು ಅಮೆರಿಕಾದ್ಯಂತ 67 ಸಾವಿರಕ್ಕೂ ಅಧಿಕ ಮಂದಿಯನ್ನು ಒಗ್ಗೂಡಿಸಿ, ಸಿಖ್ಖರಿಗೆ ಶಿರವಸ್ತ್ರ ಧಾರಣೆಗೆ ನಿರ್ಬಂಧ ವಿಧಿಸಿರುವುದರ ವಿರುದ್ಧ ಅಮೆರಿಕ ಕಾಂಗ್ರೆಸ್‌ಗೆ ದೂರು ಅರ್ಜಿ ಸಲ್ಲಿಸುವ ಅಭಿಯಾನ ನಡೆಸಿದ್ದರು. ಇದರಿಂದಾಗಿ ಅಮೆರಿಕದ ಸಾರಿಗೆ ಹಾಗೂ ಭದ್ರತಾ ಆಡಳಿತ (ಟಿಎಸ್‌ಎ)ವು ಸಿಖ್ಖ್ ಸಮುದಾಯದ ಶಿರವಸ್ತ್ರ ಧಾರಣೆ ಕುರಿತು ತನ್ನ ನೀತಿಯಲ್ಲಿ ಬದಲಾವಣೆಯನ್ನು ಮಾಡಬೇಕಾಯಿತು.

ಈ ಯಶಸ್ವಿ ಚಳವಳಿಯ ಪರಿಣಾಮವಾಗಿ, ಇಂದು ಸಿಖ್ಖರು ಅಮೆರಿಕದಲ್ಲಿ ವಿಮಾನನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ಸಂದರ್ಭದಲ್ಲಿಯೂ ಪೇಟಾವನ್ನು ಧರಿಸಬಹುದಾಗಿದೆ. ‘‘ ನಾನು ನನ್ನ ಪೇಟಾವನ್ನು ತೆಗೆಯಲು ನಿರಾಕರಿಸಿದ್ದಕ್ಕಾಗಿ, ವಿಮಾನವನ್ನು ಏರಲು ಅನುಮತಿ ನಿರಾಕರಿಸಲಾಗಿತ್ತು. ಆ ಬಳಿಕ ನಾನು ಧಾರ್ಮಿಕ ಸ್ವಾತಂತ್ರ್ಯದಲ್ಲಿ ನಂಬಿಕೆಯಿರಿಸಿರುವವರ ಪರವಾಗಿ ಈ ಹೋರಾಟವನ್ನು ಆರಂಭಿಸಿದ್ದೆ’’ ಎಂದು ಇಂಡಿಯಾನಾ ಮೂಲದ ಸಿಖ್ಖರ ರಾಜಕೀಯ ವ್ಯವಹಾರಗಳ ಸಮಿತಿಯ ವರಿಷ್ಠರೂ ಆಗಿರುವ ಗುರೀಂದರ್ ಸಿಂಗ್ ಖಾಲ್ಸಾ ತಿಳಿಸಿದ್ದಾರೆ.

ತಾನು ಪ್ರತಿಷ್ಠಿತ ಪ್ರಶಸ್ತಿಯನ್ನು ಸಿಖ್ಖ್ ಸಮುದಾಯಕ್ಕೆ ಸಮರ್ಪಿಸುವುದಾಗಿ ಖಾಲ್ಸಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News