ಬೆಂಗಳೂರಿನ ಸ್ವಚ್ಚತೆಗೆ ಸಿದ್ಧವಾದ ಯೂತ್ ಫಾರ್ ಪರಿವರ್ತನಾ ತಂಡ

Update: 2019-01-20 16:47 GMT

ಬೆಂಗಳೂರು, ಜ.20: ಬೆಂಗಳೂರಿನ ರಸ್ತೆ ಬದಿಯಲ್ಲಿ ಕಸ, ಮೂತ್ರವಿಸರ್ಜನೆಯಿಂದ ಕೊಳಕಾಗಿರುವ ಜಾಗಗಳನ್ನು ಸ್ವಚ್ಚಗೊಳಿಸಿ, ಅಲ್ಲಿನ ಗೋಡೆಗಳಿಗೆ ಬಣ್ಣ ಬಳಿದು, ಚಿತ್ರಗಳನ್ನು ಮೂಡಿಸುವ ಮೂಲಕ ನಗರದ ಜನತೆಗೆ ಸ್ವಚ್ಚತೆಯ ಕುರಿತು ಜಾಗೃತಿ ಮೂಡಿಸಲು ಯೂತ್ ಫಾರ್ ಪರಿವರ್ತನಾ ತಂಡವು ಸಿದ್ಧವಾಗಿದೆ.

ನಗರದ ಮಿನರ್ವ ಸರ್ಕಲ್ ಬಳಿಯಲ್ಲಿ ರಸ್ತೆ ಬದಿಯ ಗೋಡೆಗಳು ದಾರಿ ಹೋಕರ ಮೂತ್ರ ವಿಸರ್ಜನೆಯಿಂದ ಗಬ್ಬು ನಾರುತ್ತಿತ್ತು. ಪಾದಚಾರಿಗಳು ಅಲ್ಲಿ ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಗಮನಿಸಿದ ಯೂತ್ ಫಾರ್ ಪರಿವರ್ತನ ತಂಡದ ಸದಸ್ಯರು ಜ.20ರಂದು ರವಿವಾರ ಈ ಭಾಗದ ಗೋಡೆಗಳನ್ನು ಸ್ವಚ್ಚಗೊಳಿಸಿ, ಬಣ್ಣ ಬಳಿದು, ಚಿತ್ರ ಬಿಡಿಸಿ ಜಾಗೃತಿ ಮೂಡಿಸಿದರು.

ಈ ಕುರಿತು ಯೂತ್ ಫಾರ್ ಪರಿವರ್ತನಾ ತಂಡದ ಅಧ್ಯಕ್ಷ ಅಮಿತ್ ಅಮರನಾಥ್ ಮಾತನಾಡಿ, ನಾವು ವಾಸಿಸುತ್ತಿರುವ ಮನೆ ಪರಿಸರ, ವಾರ್ಡ್, ನಗರ, ಜಿಲ್ಲೆ ಹಾಗೂ ರಾಜ್ಯವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ನಮ್ಮ ಬಿಡುವಿನ ವೇಳೆಯಲ್ಲಿ ನಾವು ನೆಲೆಸಿರುವ ಬೆಂಗಳೂರನ್ನು ಸ್ವಚ್ಚವಾಗಿಡಲು ಶ್ರಮಿಸುತ್ತಿದ್ದೇವೆ ಎಂದರು.

ಕಳೆದ 5 ವರ್ಷಗಳಲ್ಲಿ ಬೆಂಗಳೂರು ನಗರದ 173 ಕಡೆಗಳಲ್ಲಿ ಸ್ವಚ್ಚತಾ ಕಾರ್ಯದಲ್ಲಿ ತೊಡಗಿ, ಅಲ್ಲಿನ ಗೋಡೆಗಳಿಗೆ ಬಣ್ಣ ಬಳಿದು, ಚಿತ್ರ ಬಿಡಿಸಿ ಸ್ಥಳೀಯರಲ್ಲಿ ಸ್ವಚ್ಚತೆಯ ಕುರಿತು ಜಾಗೃತಿ ಮೂಡಿಸುತ್ತಾ ಬಂದಿದ್ದೇವೆ. ಹಾಗೂ ಸ್ಥಳಾವಕಾಶವಿರುವ ಜಾಗದಲ್ಲಿ ಗಿಡವನ್ನು ನೆಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

2 ಸಾವಿರ ಸ್ವಯಂಸೇವಕರು: ಯೂತ್ ಫಾರ್ ಪರಿವರ್ತನಾ ತಂಡದಲ್ಲಿ ಸುಮಾರು 2 ಸಾವಿರ ಸ್ವಯಂ ಸೇವಕರಿದ್ದಾರೆ. ವಿದ್ಯಾರ್ಥಿಗಳಿಂದ ಸಾಫ್ಟ್‌ವೇರ್ ಎಂಜಿನಿಯರ್, ವೈದ್ಯರು, ವಕೀಲರು ಸೇರಿದಂತೆ ಸಮಾಜದ ಎಲ್ಲ ಕ್ಷೇತ್ರದ ಯುವ ಜನತೆ ಇದ್ದಾರೆ. ಪ್ರತಿ ವಾರ ಒಂದೊಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದು ಅವರು ಹೇಳಿದರು.

‘ಬೆಂಗಳೂರಿನ ಸ್ವಚ್ಚತೆಗೆ ಯೂತ್ ಫಾರ್ ಪರಿವರ್ತನಾ ತಂಡವು ಸದಾ ಸಿದ್ಧ. ಇದರ ಜೊತೆಗೆ ಆರೋಗ್ಯ ಶಿಬಿರ, ರಕ್ತದಾನ, ಪರಿಸರ ಕುರಿತು ಜಾಗೃತಿ, ಸರಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸಲು ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದ್ದೇವೆ’

-ಅಮಿತ್ ಅಮರನಾಥ್, ಅಧ್ಯಕ್ಷ, ಯೂತ್ ಫಾರ್ ಪರಿವರ್ತನಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News