ಯುವ ಸಮೂಹ ಸಾಮಾಜಿಕ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು: ಜಯರಾಜ್ ನಾಯ್ಕಿ

Update: 2019-01-20 17:03 GMT

ಬೆಂಗಳೂರು, ಜ.20: ವಿದ್ಯಾರ್ಥಿ ಜೀವನದಲ್ಲೆ ನಮ್ಮ ಯುವ ಸಮೂಹವು ಸಾಮಾಜಿಕ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ಅಲ್ಲದೆ, ವಿದ್ಯಾಭ್ಯಾಸದೊಂದಿಗೆ ಕ್ರೀಡೆ, ಸಾಹಿತ್ಯ ಸೇರಿದಂತೆ ಇನ್ನಿತರ ಸಮಾಜಮುಖಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕೆ.ಆರ್.ಪುರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಜಯರಾಜ್‌ ನಾಯ್ಕಿ ಕರೆ ನೀಡಿದರು.

ನಗರದ ಕೆ.ಆರ್.ಪುರದಲ್ಲಿರುವ ಸಿಲಿಕಾನ್‌ ಸಿಟಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಂಕ್ರಾಂತಿ ಸುಗ್ರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ತಮ್ಮ ಜೀವನದ ಮೊದಲ 25 ವರ್ಷಗಳನ್ನು ಶ್ರಮ ವಹಿಸಿ, ಉತ್ತಮ ವಿದ್ಯಾಭ್ಯಾಸವನ್ನು ಪಡೆದರೆ, ಸಮಾಜಕ್ಕೆ ಆಸ್ತಿಯಾಗುತ್ತಾರೆ ಎಂದರು.

ಸುಶಿಕ್ಷಿತ ಯುವ ಸಮೂಹವು ತಮ್ಮ ಪೋಷಕರು, ಸಮಾಜಕ್ಕೆ ಕೀರ್ತಿ ತರುತ್ತದೆ. ಶಿಕ್ಷಣದ ಜೊತೆಗೆ ನೈತಿಕ, ಸಾಮಾಜಿಕ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮ್ಮ ಜೀವನವು ಸಾರ್ಥಕವಾಗುತ್ತದೆ ಎಂದು ಅವರು ಹೇಳಿದರು.

ಯುವ ಪೀಳಿಗೆಯೂ ದೇಶದ ಭವಿಷ್ಯ. ತಮ್ಮ ಜೀವನವನ್ನು ಸೂಕ್ತ ಮಾರ್ಗದಲ್ಲಿ ನಡೆಸಿಕೊಳ್ಳಬೇಕು. ತಂದೆ-ತಾಯಿಗೆ ಉತ್ತಮ ಮಕ್ಕಳಾಗಿ, ಕಾಲೇಜಿಗೆ ಒಳ್ಳೆಯ ವಿದ್ಯಾರ್ಥಿಯಾಗಿ, ಸಮಾಜಕ್ಕೆ ಶ್ರಮ ಜೀವಿಯಾಗಿ ಬಾಳಬೇಕು ಎಂದು ಜಯರಾಜ್ ನಾಯ್ಕೆ ಸಲಹೆ ನೀಡಿದರು.

ಸಿಲಿಕಾನ್ ಸಿಟಿ ಕಾಲೇಜಿನ ಅಧ್ಯಕ್ಷ ಡಾ.ಎಚ್.ಎಂ.ಚಂದ್ರಶೇಖರ್ ಮಾತನಾಡಿ, ಗುರಿ ಇಲ್ಲದ ವಿದ್ಯಾರ್ಥಿ ಸಮಾಜಕ್ಕೆ ಮಾರಕನಾಗುತ್ತಾನೆ, ಯಾವುದೇ ಒಂದು ಕೆಲಸದಲ್ಲಾದರೂ ಮೊದಲು ಗುರಿಯನ್ನು ಇಟ್ಟುಕೊಳ್ಳಿ. ಸಿಲಿಕಾನ್ ಸಿಟಿ ಕಾಲೇಜಿನಲ್ಲಿ ಕೇವಲ ವಿದ್ಯೆಗಷ್ಟೇ ಪ್ರಾಮುಖ್ಯತೆ ನೀಡುತ್ತಿಲ್ಲ, ಸಂಸ್ಕೃತಿ ಬಿಂಬಿಸುವ ಚಟುವಟಿಕೆಗಳು, ಕ್ರೀಡೆಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ ಎಂದರು.

ಸುಗ್ರಿ ಕಾರ್ಯಕ್ರಮದ ಅಂಗವಾಗಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಗಾಳಿಪಟ ಉತ್ಸವ, ರಂಗೋಲಿ ಸ್ಪರ್ಧೆ, ಸೈಕ್ಲಿಂಗ್ ಸ್ಪರ್ಧೆ, ಮಡಿಕೆ ಹೊಡೆಯುವ ಸ್ಪರ್ಧೆ, ಹಗ್ಗಜಗ್ಗಾಟ ಹಾಗೂ ಸಾಂಸ್ಕೃತಿಕ ನೃತ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕಾಲೇಜಿನ ನಿರ್ದೇಶಕ ಎಚ್.ಎಂ.ಮುಕುಂದ್, ಪ್ರಾಂಶುಪಾಲರಾದ ಜ್ಞಾನೇಶ್, ಆದಿಲಕ್ಷ್ಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News