ಕ್ರೀಡೆ-ಆರೋಗ್ಯ ಒಂದೇ ನಾಣ್ಯದ ಎರಡು ಮುಖ: ರಮಾದೇವಿ ವೆಂಕಟಪತಿ

Update: 2019-01-20 17:04 GMT

ಬೆಂಗಳೂರು, ಜ.20: ಕ್ರೀಡೆ ಹಾಗೂ ಆರೋಗ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ದೈಹಿಕ, ಮಾನಸಿಕ ಸಮತೋಲನ ಕಾಪಾಡಿಕೊಳ್ಳಲು ಕ್ರೀಡಾ ಚಟುವಟಿಕೆಗಳು ಅತ್ಯವಶ್ಯಕ ಎಂದು ಎಂ.ಜಿ.ಚಾರಿಟೇಬಲ್ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ರಮಾದೇವಿ ವೆಂಕಟಪತಿ ಹೇಳಿದರು. 

ನಗರದ ಮಹದೇವಪುರ ಕ್ಷೇತ್ರದ ಬಿದರಹಳ್ಳಿಯಲ್ಲಿರುವ ‘ಜ್ಞಾನ ಪ್ರಭ’ ಈಸ್ಟ್ ಪಾಯಿಂಟ್ ಕ್ಯಾಪಂಸ್‌ನಲ್ಲಿ ಆಯೋಜಿಸಲಾಗಿದ್ದ ಶಾಲೆಯ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಯಾವುದಾದರೊಂದು ಕ್ರೀಡೆಗಳಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಳ್ಳುವ ಮೂಲಕ ದೈಹಿಕ ಸಾಮರ್ಥ್ಯ, ಏಕಾಗ್ರತೆ, ಮಾನಸಿಕ ಸಮತೋಲನ ಗಳಿಸಿಕೊಳ್ಳಬಹುದು. ಕೇವಲ ಸೋಲು-ಗೆಲುವು ಇಲ್ಲಿ ಮುಖ್ಯವಲ್ಲ. ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡುವುದು ಮುಖ್ಯ ಎಂದು ಅವರು ಹೇಳಿದರು.

ಕ್ರೀಡಾಕೂಟಗಳಲ್ಲಿ ಸೋಲು-ಗೆಲುವನ್ನು ಕೂಡಾ ಕ್ರೀಡೆ ಸ್ಪೂರ್ತಿಯಿಂದಲೇ ಸ್ವೀಕರಿಸುವುದು, ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಮನೋಭಾವ ಬೆಳೆಸುತ್ತದೆ. ಇಂದಿನ ಒತ್ತಡದ ಜೀವನದಲ್ಲಿ ಹಿರಿಯರು ದೈಹಿಕ ಶ್ರಮಗಳಿಂದ ದೂರವಿರುತ್ತಾರೆ. ಹಿರಿಯರೂ ಕೂಡ ಕ್ರೀಡೆಗೆ , ದೈಹಿಕ ಶ್ರಮಕ್ಕೆ ಸಮಯ ಮೀಸಲಿಟ್ಟರೆ ಮಾನಸಿಕ ಒತ್ತಡ ನೀಗಿಸಿಕೊಳ್ಳಬಹುದು ಎಂದು ಅವರು ಸಲಹೆ ನೀಡಿದರು.

ಮಕ್ಕಳಿಗೆ ಕೇವಲ ಪಠ್ಯ ಚಟುವಟಿಕೆ, ಅಧ್ಯಯನದ ಬಗ್ಗೆ ಒತ್ತಡ ಹೇರದೆ ಪೋಷಕರು ಕ್ರೀಡೆಗಳತ್ತ ಪ್ರೇರೇಪಿಸಿ ಪ್ರೋತ್ಸಾಹಿಸಬೇಕು. ಬೆಳಗ್ಗೆಯಿಂದ ಸಂಜೆವರೆಗೂ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದವು. ಸಂಜೆ ನಡೆದ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ, ಭಾಗವಹಿಸಿದ ಎಲ್ಲರಿಗೂ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಈಸ್ಟ್ ಪಾಯಿಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಟ್ರಸ್ಟಿಗಳಾದ ಎಸ್.ವಿ.ಪ್ರಮೋದ್ ಗೌಡ, ಎಸ್.ವಿ.ರಾಜೀವ್ ಗೌಡ, ಶಾಲಾ ಪ್ರಾಂಶುಪಾಲರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News