ಶಿಕ್ಷಣ ಸೌಲಭ್ಯ ಬಡವರಿಗೆ ತಲುಪಲಿ: ಪರಿಷತ್ ಮಾಜಿ ಸಭಾಧ್ಯಕ್ಷ ಡಿ.ಹೆಚ್.ಶಂಕರಮೂರ್ತಿ

Update: 2019-01-20 17:30 GMT

ಬೆಂಗಳೂರು, ಜ.20: ಶಿಕ್ಷಣದ ಸೌಲಭ್ಯ ಬಡ ವಿದ್ಯಾರ್ಥಿಗಳಿಗೆ ತಲುಪಿದಾಗ ಮಾತ್ರ, ಅದರ ಉದ್ದೇಶ ಸಾರ್ಥಕತೆ ಪಡೆಯುತ್ತದೆ ಎಂದು ವಿಧಾನ ಪರಿಷತ್ತಿನ ಮಾಜಿ ಸಭಾಧ್ಯಕ್ಷ ಡಿ.ಹೆಚ್.ಶಂಕರಮೂರ್ತಿ ಅಭಿಪ್ರಾಯಪಟ್ಟರು.

ರವಿವಾರ ನಗರದ ಶೇಷಾದ್ರಿ ರಸ್ತೆಯ ಕರ್ನಾಟಕ ಆರ್ಯವೈಶ್ಯ ಮಹಾಸಭಾದ ವತಿಯಿಂದ ಆಯೋಜಿಸಿದ್ದ, ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿ ಗಳಿಗೆ ಲ್ಯಾಪ್‌ಟಾಪ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಓದುವ ಹವಾಸ್ಯವನ್ನು ಬೆಳೆಸಿಕೊಳ್ಳಬೇಕು. ಶ್ರಮ ಪಟ್ಟು ಓದಬೇಕು. ಸತತವಾಗಿ ಅಧ್ಯಯನ ಮಾಡಿದಾಗ ಮಾತ್ರ ಜೀವನದಲ್ಲಿ ಉನ್ನತ ಮಟ್ಟದವರೆಗೆ ಬೆಳೆಯಲು ಸಾಧ್ಯ ಎಂದು ಅವರು ನುಡಿದರು.

ಜೀವನದಲ್ಲಿ ಛಲವಿದ್ದರೆ ಏನು ಬೇಕಾದರೂ ಸಾಧಿಸಬಹುದು. ಹೀಗಾಗಿ, ವಿದ್ಯಾರ್ಥಿಗಳು ಛಲ ಮತ್ತು ದೂರದೃಷ್ಟಿ ಸ್ವಭಾವವನ್ನು ಮೈಗೂಡಿಸಿಕೊಳ್ಳಬೇಕು. ಇನ್ನೂ ಧ್ಯೇಯೋದ್ದೇಶ ಮತ್ತು ಸಲತೆಗೆ ನೀಡುವ ಶ್ರಮವೇ ವಿದ್ಯಾರ್ಥಿಗಳನ್ನು ಯಶಸ್ವಿನ ಹಾದಿಗೆ ತಲುಪಿಸುತ್ತದೆ ಎಂದು ನುಡಿದರು.

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸುವ ಯೋಜನೆ ಒಳ್ಳೆಯದು. ಇದರ ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಹೊಸ ವಿಚಾರಗಳನ್ನು ತಿಳಿಯಲು ಮುಂದಾಗಬೇಕು. ಅದೇ ರೀತಿ, ಕೇಂದ್ರ ಸರ್ಕಾರವು ನೀಡುವ ವಿದ್ಯಾರ್ಥಿ ವೇತನವನ್ನು ಪಡೆಯಲು ಆರ್ಹ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಸಲಹೆ ಮಾಡಿದರು.

ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಅಧ್ಯಕ್ಷ ಆರ್.ಪಿ.ರವಿಶಂಕರ್ ಮಾತನಾಡಿ, ಇದೇ ಮೊದಲ ಬಾರಿಗೆ ಮಹಾಸಭಾದ ವತಿಯಿಂದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸುವ ಯೋಜನೆ ಜಾರಿಗೆ ತರಲಾಗಿದೆ. 110 ವರ್ಷಗಳಿಂದ ಆರ್ಯವೈಶ್ಯ ಸಮುದಾಯದ ಪ್ರಾತಿನಿಧಿಕ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.

ಆರ್ಥಿಕ ಸಮಸ್ಯೆಯಿಂದಾಗಿ ಸಮುದಾಯದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ವಿದ್ಯಾನಿಧಿ ಹಾಗೂ ವಿದ್ಯಾ ಮಿತ್ರ ಯೋಜನೆಗಳನ್ನು ಪ್ರಾರಂಭಿಸಿದೆ. ಈ ಯೋಜನೆಗಳ ಮೂಲಕ ವಿದ್ಯಾರ್ಥಿ ವೇತನ ಹಾಗೂ ವಾರ್ಷಿಕ ಗರಿಷ್ಠ 1 ಲಕ್ಷದ ವರೆಗೆ ಬಡ್ಡಿರಹಿತ ಸಾಲ ನೀಡುತ್ತಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ 125 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಲಾಯಿತು. ಬಿಜೆಪಿ ಸಂಸದ ಪಿ.ಸಿ.ಮೋಹನ್, ದಕ್ಷಿಣ ಭಾರತ ರಾಜ್ಯಗಳ ಆರ್ಯವೈಶ್ಯ ಅಧ್ಯಕ್ಷರಾದ ನಂದಕುಮಾರ್ ಗಾದೇವಾರ್, ಪೆನುಗೊಂಡ ಸುಬ್ಬರಾಯುಡು, ರಾಮದಾಸ್, ಅಮರವಾಡಿ ಲಕ್ಷ್ಮೀನಾರಾಯಣ ಸೇರಿ ಪ್ರಮುಖರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News