ಮಕ್ಕಳಲ್ಲಿ ಮಹಾತ್ಮ ಗಾಂಧಿ ತತ್ವ ಬಿತ್ತುವುದು ಅಗತ್ಯ: ಎಸ್.ಭಗೀರಥ

Update: 2019-01-20 18:32 GMT

ಬೆಂಗಳೂರು, ಜ.20: ಇಂದಿನ ತಲೆಮಾರಿನ ಮಕ್ಕಳಲ್ಲಿ ಮಹಾತ್ಮ ಗಾಂಧೀಜಿ ಅವರ ತತ್ವಗಳನ್ನು ಬಿತ್ತುವುದು ಬಹಳ ಅವಶ್ಯಕ ಎಂದು ಎಎಸ್‌ಬಿ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಎಸ್.ಭಗೀರಥ ಅಭಿಪ್ರಾಯಪಟ್ಟರು.

ರವಿವಾರ ನಗರದ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನದಲ್ಲಿ ಮಹಾತ್ಮ ಗಾಂಧಿಯವರ ಆತ್ಮಚರಿತ್ರೆಯ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲೂ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಬಾಪೂಜಿಯವರ ಸಂದೇಶಗಳನ್ನು ತಲುಪಿಸುವ ಕಾರ್ಯಕ್ಕೂ ಎಎಸ್‌ಬಿ ಮುಂದಾಗಲಿದೆ ಎಂದು ತಿಳಿಸಿದರು.

ಸೇವೆ ಮತ್ತು ಸಹ ಬಾಳ್ವೆಯ ಪಾಠ ಬೋಧಿಸಿದ ಬಾಪೂಜಿಗೆ ಬಾಪೂ ಕುಟೀರದ ಮೂಲಕ ಪುಷ್ಪ ನಮನವನ್ನು ಎಎಸ್‌ಬಿ ಸಲ್ಲಿಸುತ್ತಿದ್ದು, ಬಾಪು ಕುಟೀರದ ಪ್ರಾಯೋಕತ್ವ ವಹಿಸಿಕೊಂಡಿರುವುದು ನಮ್ಮ ಸೌಭಾಗ್ಯವೇ ಸರಿ. ಇದೇ ರೀತಿ ಇಂದಿನ ಮಕ್ಕಳಲ್ಲಿ ಮಹಾತ್ಮ ಗಾಂಧೀಜಿಯವರ ಆದರ್ಶಗಳ ಬಗ್ಗೆ ತಿಳುವಳಿಕೆ ಮೂಡಿಸುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.

ಸೆಲ್ಫಿ ಕಿಕ್ಕು: ರವಿವಾರ ರಜೆ ದಿನವಾಗಿದ್ದರಿಂದ ಸಿಲಿಕಾನ್‌ಸಿಟಿ ಸೇರಿದಂತೆ ಸುತ್ತಲ ಜಿಲ್ಲೆಗಳ ಜನರು ತಮ್ಮ ಕುಟುಂಬದೊಂದಿಗೆ ಲಪುಷ್ಪ ಪ್ರದರ್ಶನಕ್ಕೆ ಆಗಮಿಸಿದ್ದರು. ಸಬರಮತಿ ಆಶ್ರಮ, ಬಾಪುಕಟ್ಟೆ, ಗಾಂಧೀ ಕನ್ನಡಕ, ಮೂರು ಕೋತಿಗಳು ಸೇರಿದಂತೆ ಇತರೆಡೆಗಳಲ್ಲಿ ಯುವಕ-ಯುವತಿಯರು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದರು. ಪ್ರತಿ ಹತ್ತು ನಿಮಿಷಕ್ಕೆ ಹೂಗಳು ಬಾಡದಂತೆ ನೀರು ಸಂಪಡಿಸಲಾಗುತ್ತಿತ್ತು.

ರಾಶಿ ಕಸ: ಸರ್ಜಾಪುರದ ಪಿಐಎಸ್‌ಬಿ ಶಾಲೆಯ 25ಕ್ಕೂ ಅಧಿಕ ವಿದ್ಯಾರ್ಥಿಗಳು ಲಪುಷ್ಪ ಪ್ರದರ್ಶನದಲ್ಲಿ ಹಸಿ ಕಸ, ಒಣ ಕಸ ಬೇರ್ಪಡಿಸಿ ನಮ್ಮ ಪರಿಸರ ಉಳಿಸಿ ಎಂಬ ಫಲಕದೊಂದಿಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರೆ, ಮತ್ತೊಂದೆಡೆ ಲಾಲ್‌ಬಾಗ್‌ನ ಗಾಜಿನಮನೆಯ ಹತ್ತಿರ ಕಸದ ರಾಶಿ ಬಿದ್ದಿತ್ತು. ತೋಟಗಾರಿಕೆ ಇಲಾಖೆ ಸ್ವಚ್ಛತೆಗಾಗಿ ಕ್ರಮಕೈಗೊಂಡರೂ, ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ ಎಂಬುದು ಕಸದ ರಾಶಿಯೇ ತಿಳಿಸುತ್ತಿತ್ತು.

ವಾದ್ಯಗೋಷಿ: ಮಾರ್ಗ ಜ್ಯೋತಿ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಮಾರ್ಗ ಜ್ಯೋತಿ ಅಂಧರ ವಾದ್ಯಗೋಷ್ಠಿ ನಡೆಯಿತು. ಟ್ರಸ್ಟ್‌ನ ಅಧ್ಯಕ್ಷ ಪಿ.ಬಾಬು ಅವರ ತಂಡ ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಸೇರಿದಂತೆ ಇತರೆ ನಟರ ಚಲನಚಿತ್ರಗಳ ಹಾಡುಗಳನ್ನು ಹಾಡಿದರು. ವಾದ್ಯಗೋಷ್ಠಿ ಪ್ರದರ್ಶನಕ್ಕೆ ಆಗಮಿಸಿದ ಎಲ್ಲರ ಗಮನ ಸೆಳೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News