ಕಡ್ಡಾಯ ತೇರ್ಗಡೆಗೆ ತಡೆ: ಮಕ್ಕಳ ಭವಿಷ್ಯದಲ್ಲಿ ಚೆಲ್ಲಾಟ

Update: 2019-01-21 05:17 GMT

ಈ ದೇಶದಲ್ಲಿ ರೈತರ ಆತ್ಮಹತ್ಯೆಗಿಂತ ಭೀಕರವಾಗಿದೆ ವಿದ್ಯಾರ್ಥಿಗಳ ಆತ್ಮಹತ್ಯೆ. ಮಾರ್ಚ್ ತಿಂಗಳಿನಿಂದ ಜೂನ್ ತಿಂಗಳವರೆಗೆ ವಿದ್ಯಾರ್ಥಿಗಳ ಆತ್ಮಹತ್ಯೆ, ನಾಪತ್ತೆ ಸರಣಿಯೋಪಾದಿಯಲ್ಲಿ ಪತ್ರಿಕೆಗಳ ಯಾವುದಾದರೂ ಮೂಲೆಯಲ್ಲಿ ಮುದ್ರಣಗೊಳ್ಳುತ್ತಿರುತ್ತವೆ. ಇಂದು ಶಿಕ್ಷಣವೆಂದರೆ ‘ಬಾಲ ಕಾರ್ಮಿಕ’ ದುಡಿಮೆಯ ಇನ್ನೊಂದು ಮುಖವೇ ಆಗಿ ಬದಲಾಗಿದೆ. ಬಾಲ ಕಾರ್ಮಿಕ ಮಕ್ಕಳು ಕೂಳಿಗಾಗಿ ದುಡಿದರೆ, ವಿದ್ಯಾರ್ಥಿಗಳು ಅಂಕಗಳಿಗಾಗಿ ದುಡಿಯುವ ಕಾರ್ಮಿಕರು. ಮಕ್ಕಳು ದುಡಿದು ಇಂತಿಷ್ಟು ಅಂಕಗಳನ್ನು ತರಲೇಬೇಕು ಎನ್ನುವಂತಹ ಮನಸ್ಥಿತಿ ನಮ್ಮ ಸಮಾಜದಲ್ಲಿದೆ. ಶಿಕ್ಷಣವೆನ್ನುವುದು ಅಂಕಗಳಿಗೆ ಸೀಮಿತವಾದ ಕಾರಣಕ್ಕೆ, ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ಮಕ್ಕಳು ತಮ್ಮ ಭವಿಷ್ಯವೇ ಸರ್ವನಾಶವಾಯಿತು ಎಂಬ ಭ್ರಮೆಗೆ ಒಳಗಾಗುತ್ತಾರೆ. ಪಾಲಕರ ನಿಂದನೆ, ಸಮಾಜದ ಲೇವಡಿ, ಅವಮಾನ ಇವೆಲ್ಲವೂ ಎಳೆ ಮನಸ್ಸನ್ನು ತೀವ್ರವಾಗಿ ಘಾಸಿಗೊಳಿಸುತ್ತದೆ. ಇನ್ನಷ್ಟೇ ನಿಜವಾದ ಬದುಕನ್ನು ಎದುರುಗೊಳ್ಳಬೇಕಾದ ಮಕ್ಕಳು ತಮ್ಮನ್ನು ಸಾವಿಗೆ ಒಪ್ಪಿಸಿಕೊಳ್ಳುತ್ತಾರೆ.

ಪರೀಕ್ಷೆಯ ಒತ್ತಡದಿಂದ ಪಾರು ಮಾಡುವುದಕ್ಕೋಸ್ಕರವೇ ಪ್ರಾಥಮಿಕ ಶಾಲೆಯಲ್ಲಿ ಪಾಸು-ಫೇಲು ಎನ್ನುವ ಚಂಡಮುಂಡರಿಂದ ಏಳನೇ ಮತ್ತು ಎಂಟನೇ ತರಗತಿಯ ಮಕ್ಕಳನ್ನು ಮುಕ್ತಗೊಳಿಸಲಾಗಿತ್ತು. 2009ರಲ್ಲಿ ಕಡ್ಡಾಯ ತೇರ್ಗಡೆ ನಿಬಂಧನೆಯನ್ನು ಜಾರಿಗೊಳಿಸಲಾಯಿತು. ಇದು ಬೇರೆ ಬೇರೆ ಕಾರಣಗಳಿಗಾಗಿ ಅನಿವಾರ್ಯವಾಗಿತ್ತು. ಮುಖ್ಯವಾಗಿ ಪ್ರಾಥಮಿಕ, ಪ್ರೌಢಶಾಲೆಯ ಕಲಿಕೆಯೆನ್ನುವುದು ಮಕ್ಕಳ ಪ್ರತಿಭೆಗಳನ್ನು ಗುರುತಿಸುವ ಮೊದಲ ಹಂತವಾಗಿದೆ. . ಈ ಸಂದರ್ಭದಲ್ಲಿ ಶಿಕ್ಷಣವನ್ನು ಬರೇ ಅಂಕಗಳಿಗೆ ಸೀಮಿತಗೊಳಿಸಿ, ಅಂಕಪಡೆಯಲಾರದ ವಿದ್ಯಾರ್ಥಿಗಳಿಗೆ ಮುಂದಕ್ಕೆ ಓದಲು ಅವಕಾಶ ನೀಡದಿರುವುದು ಇನ್ನೇನೂ ಅರಳಬೇಕಾದ ಹೂವನ್ನು ಮುದುಡಿ ಹಾಕಿದಂತೆ. ವಿದ್ಯಾರ್ಥಿಗಳು ಅರ್ಧದಲ್ಲೇ ಶಾಲೆ ತೊರೆಯುವುದಕ್ಕೆ ಇದು ಬಹುದೊಡ್ಡ ಕಾರಣವಾಗಿತ್ತು. ಜೊತೆಗೆ, ಪರೀಕ್ಷೆಯ ಒತ್ತಡವಿಲ್ಲದೆ ಇದ್ದಾಗಲೇ ಮಕ್ಕಳು ಅತ್ಯಂತ ಉಲ್ಲಸಿತವಾಗಿ ಕಲಿಕೆಯಲ್ಲಿ ಭಾಗವಹಿಸುತ್ತಾರೆ ಎನ್ನುವುದು ಶಿಕ್ಷಣ ತಜ್ಞರ ಅನಿಸಿಕೆಯಾಗಿದೆ. ಒಂದು ಮಗು ಅತ್ಯುತ್ತಮ ಚಿತ್ರಕಲಾವಿದನಾಗಿರಬಹುದು. ಕಥೆಗಾರನಾಗಬಹುದು. ಇವೆಲ್ಲವೂ ಶಿಕ್ಷಣದ ಭಾಗವೇ ಆಗಿದೆ.

ಯಾವುದೋ ಒಂದು ಪಠ್ಯ ವಿದ್ಯಾರ್ಥಿಗೆ ಕಠಿಣವಾದ ಕಾರಣದಿಂದ ಆತನನ್ನು ಸಂಪೂರ್ಣ ದಡ್ಡ ಎಂದು ಘೋಷಿಸಲಾಗದು. ಅವನದೇ ಆಸಕ್ತಿಯ ಇನ್ನೊಂದು ಕ್ಷೇತ್ರದಲ್ಲಿ ಅಪರಿಮಿತ ಸಾಧನೆ ಮಾಡುವ ಅವಕಾಶಗಳು ಅವನ ಮುಂದಿರಬಹುದು. ಆತನನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡದೇ ಇರುವುದರಿಂದ ಆ ಅವಕಾಶ ಅವನಿಂದ ತಪ್ಪಿ ಹೋಗಬಹುದು. ದುರದೃಷ್ಟಕ್ಕೆ, ಭಾರತೀಯ ಶಾಲಾ ಮಕ್ಕಳಿಗೆ ಹೊಸ ವರ್ಷ ಅತ್ಯಂತ ಕೆಟ್ಟದಾಗಿ ಆರಂಭವಾಗಿದೆ. ಒಂದರಿಂದ ಎಂಟನೇ ತರಗತಿವರೆಗೆ ಮಕ್ಕಳನ್ನು ಯಾವುದೇ ಕಾರಣಕ್ಕೂ ಅನುತ್ತೀರ್ಣಗೊಳಿಸಬಾರದು ಎಂಬ 2009ರ ಶಿಕ್ಷಣದ ಹಕ್ಕು ಕಾಯ್ದೆಯ, ಕಡ್ಡಾಯ ತೇರ್ಗಡೆ ನಿಬಂಧನೆಗೆ ತಿದ್ದುಪಡಿ ತರಲು ಜನವರಿ 3ರಂದು ಸಂಸತ್‌ನಲ್ಲಿ ಒಪ್ಪಿಗೆ ನೀಡಲಾಯಿತು.

ಕಡ್ಡಾಯ ತೇರ್ಗಡೆ ನಿಯಮಕ್ಕೆ ತಿದ್ದುಪಡಿ ತರಲು ಸಂಸತ್ ನಿರ್ಧರಿಸಿರುವುದು ಸರಕಾರದ ವೈಫಲ್ಯಕ್ಕೆ ಮಕ್ಕಳನ್ನು ಶಿಕ್ಷಿಸಿದಂತಾಗಿದೆ. ಅಸಮರ್ಪಕ ಶಾಲಾ ಕಟ್ಟಡಗಳು, ಶೌಚಾಲಯಗಳು, ಆಟದ ಮೈದಾನಗಳ ಕೊರತೆ, ಅನುಭೂತಿಯೇ ಇಲ್ಲದ ಅಷ್ಟೇನೂ ಶಿಕ್ಷಿತರಲ್ಲದ ಶಿಕ್ಷಕರು, ಶಾಲಾ ಮುಖ್ಯೋಪಾಧ್ಯಾಯರಿಗಿಂತಲೂ ಸರಕಾರಿ ಅಧಿಕಾರಿಗಳ ಮಾತಿಗೆ ಹೆಚ್ಚು ತಲೆಯಾಡಿಸುವ ಶಾಲಾ ವ್ಯವಸ್ಥಾಪನಾ ಮಂಡಳಿ, ಒಂದೇ ರೀತಿಯ ಪಠ್ಯಕ್ರಮ ಮತ್ತು ಬುದ್ಧಿಹೀನತೆಯನ್ನು ಪ್ರೋತ್ಸಾಹಿಸುವ ಮತ್ತು ಪ್ರತಿ ಮಗುವಿನ ಸಹನೆಯನ್ನು ಒರೆಗೆ ಹಚ್ಚುವ ಪರೀಕ್ಷಾ ವಿಧಾನಕ್ಕೆ ಅಂತಿಮವಾಗಿ ಬಲಿಯಾಗುವುದು ವಿದ್ಯಾರ್ಥಿಗಳು. ಇದನ್ನು ಸರಿಪಡಿಸುವ ಬದಲು, ಕಡ್ಡಾಯ ತೇರ್ಗಡೆಯೇ ಮಕ್ಕಳ ಕಲಿಕೆಗೆ ಅಡ್ಡಿಯಾಗಿದೆ ಎಂದು ಸರಕಾರ ಭಾವಿಸಿದೆ.

 ಶಾಲಾ ಶಿಕ್ಷಣದ ಬಗ್ಗೆ ಪ್ರಥಮ ಜವಾಬ್ದಾರಿಯನ್ನು ಹೊಂದಿರುವ ರಾಜ್ಯಗಳ ಬೆಂಬಲವನ್ನು ಈ ತಿದ್ದುಪಡಿ ಹೊಂದಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ತಿದ್ದುಪಡಿಯ ಬಗ್ಗೆ ತಮ್ಮ ನಿರ್ಧಾರವನ್ನು ತಿಳಿಸುವಂತೆ ರಾಜ್ಯ ಸರಕಾರಗಳಿಗೆ 2015ರಲ್ಲಿ ಕೇಳಲಾಗಿತ್ತು. ಕಡ್ಡಾಯ ತೇರ್ಗಡೆ ನಿಯಮವನ್ನೇ ಇರಿಸಿಕೊಳ್ಳುತ್ತೇವೆ ಎಂದು ಕೆಲವು ರಾಜ್ಯಗಳು ತಿಳಿಸಿ ಅದಕ್ಕೆ ಸರಿಯಾದ ಕಾರಣವನ್ನೂ ನೀಡಿದ್ದವು. ಕೆಲವು ರಾಜ್ಯಗಳು ಬದಲಾವಣೆಗಳನ್ನು ಬಯಸಿದ್ದವು. ಈ ಬದಲಾವಣೆಗಳು ಸಮಸ್ಯೆಯ ನಿಜವಾದ ಕಾರಣವನ್ನು ಸರಿಪಡಿಸುವ ಉದ್ದೇಶವನ್ನು ಹೊಂದಿದ್ದವು. ಇನ್ನು ಇತರ ಕೆಲವು ರಾಜ್ಯಗಳು ವಾಸ್ತವ ಸಮಸ್ಯೆಯನ್ನು ನಿರ್ಲಕ್ಷಿಸುವಂತಹ ಬದಲಾವಣೆಗಳ ಸಲಹೆ ನೀಡಿತ್ತು. ಬೆರಳೆಣಿಕೆಯ ರಾಜ್ಯಗಳು ಕಡ್ಡಾಯ ತೇರ್ಗಡೆ ನಿಯಮವೇ ಬೇಡವೆಂದರೆ ಕೆಲವು ಯಾವುದೇ ಪ್ರತಿಕ್ರಿಯೆ ನೀಡದೆ ತಟಸ್ಥ ಉಳಿದವು. ಮಕ್ಕಳಿಗೆ ಕಲಿಸುವ ವಿಧಾನದಲ್ಲಿ ಬದಲಾವಣೆ ತರಬೇಕೇ ಹೊರತು, ಮಕ್ಕಳನ್ನು ಶಿಕ್ಷಿಸಿ ಅವರು ಕಲಿಯುವಂತೆ ಒತ್ತಡ ಹೇರುವುದು ಮಕ್ಕಳ ಬದುಕುವ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ.

ಇಂದು ಮಾರ್ಪಾಡು ನಡೆಯಬೇಕಾದುದು ಕಡ್ಡಾಯ ತೇರ್ಗಡೆಯಲ್ಲಿ ಅಲ್ಲ. ಕಲಿಸುವ ವಿಧಾನದಲ್ಲಿ. ಜೊತೆಗೆ ಶಿಕ್ಷಣವೆಂದರೆ ಕೇವಲ ಮಾಹಿತಿಯೂ ಅಲ್ಲ, ಅಂಕಗಳೂ ಅಲ್ಲ. ಅದು ವಿದ್ಯಾರ್ಥಿಗಳ ವ್ಯಕ್ತಿತ್ವದ ವಿಕಸನಕ್ಕೆ ಕಾರಣವಾಗುವಂತಹದು. ವಿದ್ಯಾರ್ಥಿಗಳ ಒಳಗಿರುವ ಪ್ರತಿಭೆಗಳನ್ನು ಗುರುತಿಸಿ ಅವುಗಳಿಗೆ ನೀರೆರೆಯುವುದು ಶಿಕ್ಷಕರ ಹೊಣೆಗಾರಿಕೆ. ಇದು ಶಾಲೆ, ಅದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಸರಕಾರದ ಜವಾಬ್ದಾರಿ. ಆದರೆ ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಲು ವಿಫಲರಾದವರು, ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡಲು ಹೊರಟಿದ್ದಾರೆ. ಮಕ್ಕಳನ್ನು ಒಂದು ವರ್ಷ ಅಥವಾ ಹೆಚ್ಚು ಬಾರಿ ಒಂದೇ ತರಗತಿಯಲ್ಲಿ ಉಳಿಸುವ ಮೂಲಕ ಕಲಿಯುವಿಕೆಯನ್ನು ಉತ್ತಮಗೊಳಿಸಲು ಸಾಧ್ಯವಿಲ್ಲ ಎಂದು ಜಗತ್ತಿನಾದ್ಯಂತ ನಡೆಸಿರುವ ಸಂಶೋಧನೆಗಳು ಸಾಬೀತುಪಡಿಸಿವೆ. ಜೊತೆಗೆ ಮಕ್ಕಳನ್ನು ಒಂದೇ ತರಗತಿಯಲ್ಲಿ ಉಳಿಸಿದರೆ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಅವರ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ ಎಂದು ಸಂಶೋಧನೆಗಳು ಸ್ಪಷ್ಟಪಡಿಸಿವೆ. ಹೀಗಿದ್ದೂ ಕೌಶಲ್ಯಗಳ ಸಮಸ್ಯೆಗಳು ಪ್ರಾಥಮಿಕ ಶಾಲೆಯಲ್ಲಿನ ಕಡ್ಡಾಯ ತೇರ್ಗಡೆ ನಿಯಮದಿಂದಲೇ ಉಂಟಾಗಿದೆ ಎಂದು ಸರಕಾರ ವಾದಿಸುತ್ತಿದೆ.

ಸರಕಾರದ ಈ ನಿರ್ಧಾರದಿಂದ ಮಕ್ಕಳು ಮತ್ತೆ ಒತ್ತಡಕ್ಕೆ ಸಿಲುಕುತ್ತಾರೆ. ಈಗಾಗಲೇ ಎಸೆಸೆಲ್ಸಿ, ಪಿಯುಸಿ ಪರೀಕ್ಷೆಯ ಒತ್ತಡದಿಂದ ಮಕ್ಕಳ ಆತ್ಮಹತ್ಯೆಗಳು ಹೆಚ್ಚುತ್ತಿರುವಾಗ ಮುಂದೆ ಇದು ಏಳನೇ ತರಗತಿಯ ಮಕ್ಕಳನ್ನೂ ಕಾಡಬಹುದು. ಬರೇ ಬದಲಾವಣೆಗಳನ್ನು ಮಾಡಿದಾಕ್ಷಣ ಶಿಕ್ಷಣ ಸುಧಾರಣೆಯಾಗುವುದಿಲ್ಲ. ಈ ಬದಲಾವಣೆ ವಿದ್ಯಾರ್ಥಿಗಳ ಕಲಿಕೆಗೆ ಹೇಗೆ ನೆರವಾಗಬಹುದು ಎನ್ನುವುದರ ಬಗ್ಗೆಯೂ ಸರಕಾರ ಯೋಚಿಸಬೇಕು. ಕಡ್ಡಾಯ ತೇರ್ಗಡೆ ನಿಬಂಧನೆಗೆ ತಿದ್ದುಪಡಿ ನಿರ್ಧಾರದಿಂದ ಸರಕಾರ ಹಿಂದೆ ಸರಿಯಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News