ದೇಶದ 9 ಶತಕೋಟ್ಯಾಧಿಪತಿಗಳ ಸಂಪತ್ತು ತಳಮಟ್ಟದ ಶೇ.50ರಷ್ಟು ಮಂದಿಯ ಆದಾಯಕ್ಕೆ ಸಮ

Update: 2019-01-21 10:59 GMT

ದಾವೋಸ್, ಜ.21: ದೇಶದ ಶತಕೋಟ್ಯಾಧಿಪತಿಗಳ ಸಂಪತ್ತು ಕಳೆದ ವರ್ಷ ಪ್ರತಿ ದಿನ 2,200 ಕೋಟಿ ರೂ. ಗಳಷ್ಟು ಏರಿಕೆಯಾಗಿದ್ದು, ದೇಶದ ಅತ್ಯಂತ ಶ್ರೀಮಂತರ ಪೈಕಿ ಟಾಪ್ ಶೇ.1ರಷ್ಟು ಮಂದಿಯ ಸಂಪತ್ತು ಶೇ.39ರಷ್ಟು ಹೆಚ್ಚಾಗಿದೆ. ತಳಮಟ್ಟದ ಶೇ. 50ರಷ್ಟು ಮಂದಿಯ ಆದಾಯ ಕೇವಲ ಶೇ.3ರಷ್ಟು ಏರಿಕೆಯಾಗಿದೆಯೆಂದು ಆಕ್ಸ್ ಫ್ಯಾಮ್ ವಾರ್ಷಿಕ ಅಧ್ಯಯನಾ ವರದಿ ತಿಳಿಸಿದೆ. 

ಭಾರತದ ಅತ್ಯಂತ ಶ್ರೀಮಂತರ ಪೈಕಿ ಶೇ. 10ರಷ್ಟು ಮಂದಿಯ ಬಳಿ ದೇಶದ 77.4%ರಷ್ಟು ಸಂಪತ್ತು  ಇದೆ ಎಂದೂ ವರದಿ ತಿಳಿಸಿದೆ. ದಾವೋಸ್ ನಲ್ಲಿ ವರ್ಲ್ಡ್ ಇಕನಾಮಿಕ್ ಫೋರಂನ ಐದು ದಿನಗಳ ವಾರ್ಷಿಕ ಸಭೆಯ ಆರಂಭದ ದಿನ ಈ ವರದಿ ಬಿಡುಗಡೆಗೊಂಡಿದೆ.

ದೇಶದ ಅತ್ಯಂತ ಬಡವರ ಪೈಕಿ ಶೇ. 10ರಷ್ಟಿರುವ 13.6 ಕೋಟಿ ಮಂದಿ 2004ರಿಂದ ಸಾಲದಲ್ಲಿದ್ದಾರೆ. ದೇಶದ 9 ಶತಕೋಟ್ಯಾಧಿಪತಿಗಳ ಸಂಪತ್ತು ತಳಮಟ್ಟದ ಶೇ.50ರಷ್ಟು ಮಂದಿಯ ಆದಾಯಕ್ಕೆ ಸಮವಾಗಿದೆ ಎಂದೂ ವರದಿ ತಿಳಿಸಿದೆ.

ಈ ವರದಿಯ ಪ್ರಕಾರ ಕಳೆದ ವರ್ಷ ಭಾರತದಲ್ಲಿ 18 ಹೊಸ ಶತಕೋಟ್ಯಾಧಿಪತಿಗಳ ಸೃಷ್ಟಿಯಾಗಿದ್ದು, ಇದರಿಂದ ಶತಕೋಟ್ಯಾಧಿಪತಿಗಳ ಸಂಖ್ಯೆ 119 ಕೋಟಿಗೆ ಏರಿದ್ದು ಮೊದಲ ಬಾರಿಗೆ ಅವರು ಹೊಂದಿರುವ ಸಂಪತ್ತಿನ ಮೌಲ್ಯ ರೂ 28 ಲಕ್ಷ ಕೋಟಿ ದಾಟಿದೆ.

ಭಾರತೀಯ ಕೋಟ್ಯಾಧಿಪತಿಗಳ ಸಂಪತ್ತು 2017ರಲ್ಲಿ 325.5 ಬಿಲಿಯನ್ ಡಾಲರ್  ಆಗಿದ್ದರೆ 2018ರಲ್ಲಿ ಅದು 440.1 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ. 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರ ವಾರ್ಷಿಕವಾಗಿ ಶ್ರೀಮಂತರ ಸಂಪತ್ತು ಇಷ್ಟೊಂದು ಏರಿಕೆಯಾದ ಏಕೈಕ ದೇಶ ಭಾರತ ಎಂದು ವರದಿಯಲ್ಲಿ ಹೇಳಲಾಗಿದೆ.

ಭಾರತದ ಅತ್ಯಂತ ಶ್ರೀಮಂತರ ಪೈಕಿ ಶೇ.1ರಷ್ಟು ಮಂದಿ  ತಮ್ಮ ಸಂಪತ್ತಿನ ಮೇಲೆ ಕೇವಲ 0.5 ಶೇ ಹೆಚ್ಚುವರಿ ತೆರಿಗೆ ಪಾವತಿಸುತ್ತಿದ್ದಾರೆಂದೂ ವರದಿಯಲ್ಲಿ ಹೇಳಲಾಗಿದೆ. ಜಾಗತಿಕವಾಗಿ ಕೋಟ್ಯಾಧಿಪತಿಗಳ ಸಂಪತ್ತು ದಿನವೊಂದಕ್ಕೆ ಶೇ 12ರಷ್ಟು ಅಂದರೆ 2.5 ಬಿಲಿಯನ್ ಡಾಲರಿನಷ್ಟು  ಏರಿಕೆಯಾಗಿದೆ ಎಂದೂ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News