ಮನುಷ್ಯ ಏರಬಹುದಾದ ಎತ್ತರ ಶಿವಕುಮಾರ ಸ್ವಾಮೀಜಿ

Update: 2019-01-21 18:33 GMT

ಭಾರತದ ಗಲ್ಲಿಗಲ್ಲಿಗಳಲ್ಲಿ ಮಠಗಳು, ಸ್ವಾಮೀಜಿಗಳನ್ನು ನಾವು ಕಾಣುತ್ತಿದ್ದೇವೆ. ಅಷ್ಟೇ ಅಲ್ಲ ಈ ಸ್ವಾಮೀಜಿ ವೇಷಗಳ ಮರೆಯಲ್ಲಿ ಅವರು ನಡೆಸುತ್ತಿರುವ ಅವ್ಯವಹಾರಗಳು ಪದೇ ಪದೇ ಬೆಳಕಿಗೆ ಬರುತ್ತಿದೆ. ಒಂದು ಕಾಲದಲ್ಲಿ ಸ್ವಘೋಷಿತವಾಗಿ ದೇವಮಾನವರೆಂದು ಗುರುತಿಸಿಕೊಂಡವರು ಇಂದು ಜೈಲಿನಲ್ಲಿ ದಿನ ಎಣಿಸುತ್ತಿದ್ದಾರೆ. ರಾಮಕೃಷ್ಣ ಪರಮಹಂಸ, ವಿವೇಕಾನಂದ, ನಾರಾಯಣಗುರುವಿನಂತಹ ಸಂತ ಶ್ರೇಷ್ಠರಿಂದ ತಲೆಯೆತ್ತಿ ನಿಂತ ಹಿಂದೂ ಧರ್ಮ, ಭಾರತೀಯ ಸಂಸ್ಕೃತಿ ಈ ನಕಲಿ ಸ್ವಾಮೀಜಿಗಳಿಂದಾಗಿ ಮತ್ತೆ ತಲೆತಗ್ಗಿಸುವಂತಾಗಿದೆ. ಹಲವು ಸ್ವಾಮೀಜಿಗಳು ಅತ್ಯಾಚಾರದಂತಹ ಮಹಾ ಪಾತಕಗಳ ಕಾರಣಕ್ಕಾಗಿ ಸುದ್ದಿಯಾಗುತ್ತಿದ್ದಾರೆ. ಇದರ ಹೊರತಾಗಿಯೂ ಸ್ವಾಮೀಜಿಯಾಗುವುದರಿಂದ ಹಲವು ಲಾಭಗಳಿವೆ.

ಅವರು ಸಮಾಜ ಸೇವೆಯ ಹೆಸರಿನಲ್ಲಿ ಬೃಹತ್ ವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜುಗಳನ್ನು ನಡೆಸುತ್ತಾ ಅದರಿಂದ ಕೋಟಿಗಟ್ಟಳೆ ಹಣ ಸಂಪಾದಿಸಬಹುದು. ಯಾವ ಆತಂಕವೂ ಇಲ್ಲದೆ ರಿಯಲ್ ಎಸ್ಟೇಟ್ ದಂಧೆ ನಡೆಸಬಹುದು. ಉಡುಪಿಯ ಒಬ್ಬ ಹಿರಿಯ ಸ್ವಾಮೀಜಿ ಬಡ್ಡಿಗೆ ಹಣ ಕೊಡುವ ಮೂಲಕವೇ ಕುಖ್ಯಾತರಾಗಿದ್ದಾರೆ. ಇಂದು ಸ್ವಾಮೀಜಿಗಳೆಂದು ವೇಷ ತೊಟ್ಟರೆ ಸಾಕು ರಾಜಕಾರಣಿಗಳು ತಮ್ಮ ಕಪ್ಪು ಹಣವನ್ನು ತಂದು ಅವರ ಪಾದ ಬುಡದಲ್ಲಿ ಸುರಿಯುತ್ತಾರೆ. ಐಟಿ ಅಧಿಕಾರಿಗಳು ಅವರ ಕಡೆಗೆ ಕಣ್ಣೆತ್ತಿಯೂ ನೋಡುವುದಿಲ್ಲ. ಈ ಹಿನ್ನೆಲೆಯಲ್ಲೇ ಒಬ್ಬ ಹಿರಿಯ ರಾಜಕಾರಣಿ ‘‘ಕಪ್ಪು ಹಣ ಸ್ವಿಸ್ ಬ್ಯಾಂಕ್‌ನಲ್ಲಿ ಇರುವುದಕ್ಕಿಂತ ಭಾರತದಲ್ಲಿರುವ ಮಠಗಳಲ್ಲೇ ಶೇಖರಣೆಗೊಂಡಿದೆ’’ ಎಂದು ವ್ಯಂಗ್ಯವಾಡುತ್ತಾರೆ. ಇದೇ ಸಂದರ್ಭದಲ್ಲಿ ತಮ್ಮ ಅಗಾಧ ಸೇವೆ, ತ್ಯಾಗಗಳ ಮೂಲಕ ಅಪರೂಪಕ್ಕೆ ಕೆಲವು ಮಹಾ ಸನ್ಯಾಸಿಗಳು ನಿಜಕ್ಕೂ ಸ್ವಾಮೀಜಿಗಳು ಹೇಗಿರುತ್ತಾರೆ, ಹೇಗಿರಬೇಕು ಎನ್ನುವುದನ್ನು ದೇಶಕ್ಕೆ, ವಿಶ್ವಕ್ಕೆ ಜಾಹೀರು ಮಾಡಿ ಹೋಗುತ್ತಾರೆ. ಅಂತಹ ಮಹಾ ಶರಣ ಸ್ವಾಮೀಜಿಯೊಬ್ಬರು ಈ ಜಗದಿಂದ ಅಗಲಿದ್ದಾರೆ. ಯಾವುದೇ ಭಾಷಣ, ಪ್ರವಚನ ಇತ್ಯಾದಿಗಳ ಹಂಗಿಲ್ಲದೆ, ಬರೇ ಸೇವೆಯ ಮೂಲಕವೇ ಹೇಗೆ ಒಬ್ಬ ಸ್ವಾಮೀಜಿ ಸಮಾಜವನ್ನು ಉದ್ಧರಿಸಬಹುದು ಎನ್ನುವುದಕ್ಕೆ ಉದಾಹರಣೆಯಾಗಿ ಬಾಳಿದ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಗಳು ನಮ್ಮನ್ನು ಅಗಲಿದ್ದಾರೆ.

ಶರಣನ ಗುಣವನ್ನು ಮರಣದಲ್ಲಿ ಕಾಣು ಎಂಬ ವಚನಕಾರರ ಮಾತಿದೆ. ಇದು ಸಿದ್ದಗಂಗಾ ಸ್ವಾಮೀಜಿಗೆ ಅನ್ವಯವಾಗುತ್ತದೆ. ನೂರಾ ಹನ್ನೊಂದು ವರ್ಷದ ಅತ್ಯಂತ ಹಿರಿಜೀವ ಈ ನೆಲವನ್ನು ಬಿಟ್ಟು ನಿರ್ಗಮಿಸುವಾಗ ಸಮಾಜ ಅದಕ್ಕೆ ಪ್ರತಿಕ್ರಿಯಿಸಿದ ರೀತಿಯೇ ಸ್ವಾಮೀಜಿಯ ಹಿರಿಮೆಯನ್ನು ಹೇಳುತ್ತದೆ. ಬಹುಶಃ ಇತ್ತೀಚಿನ ದಿನಗಳಲ್ಲಿ ಒಬ್ಬ ಸ್ವಾಮೀಜಿಯ ಅಗಲಿಕೆಗೆ ಈ ರೀತಿಯ ಪ್ರತಿಕ್ರಿಯೆಯನ್ನು ಸಮಾಜ ವ್ಯಕ್ತಪಡಿಸಿದ್ದೇ ಇಲ್ಲ. ಸಾಧಾರಣವಾಗಿ ಒಂದು ಜಾತಿಗೆ ಸೇರಿದ ಸ್ವಾಮೀಜಿಯ ಅಗಲಿಕೆಗೆ ಕಣ್ಣೀರು ಸುರಿಸುವವರು ಆ ಜಾತಿಗಷ್ಟೇ ಸೀಮಿತವಾಗಿರುವವರಾಗಿರುತ್ತಾರೆ. ಆದರೆ ಸಿದ್ದಗಂಗಾ ಸ್ವಾಮೀಜಿಯ ಅಗಲಿಕೆಗೆ ಇಡೀ ನಾಡು ಜಾತಿ, ಧರ್ಮವೆಂಬ ಭೇದವಿಲ್ಲದೆ ಕಣ್ಣೀರು ಸುರಿಸುತ್ತಿದೆ. ಬಸವಣ್ಣನ ಕಾಯಕ ಮತ್ತು ದಾಸೋಹವನ್ನು ಅಕ್ಷರಶಃ ಪಾಲಿಸುವ ಮೂಲಕ ಒಬ್ಬ ನಿಜವಾದ ಶರಣ, ನಿಜವಾದ ಲಿಂಗಾಯತ ಹೇಗೆ ಬದುಕಬೇಕು ಎನ್ನುವುದನ್ನು ಶಿವಕುಮಾರ ಸ್ವಾಮೀಜಿಯವರು ತೋರಿಸಿಕೊಟ್ಟರು.

ಇಂದು ಬಹುತೇಕ ಸ್ವಾಮೀಜಿಗಳು ರಾಜಕೀಯದೊಂದಿಗೆ ಗುರುತಿಸಿಕೊಳ್ಳುತ್ತಿದ್ದಾರೆ. ರಾಜಕೀಯ ನಾಯಕರ ಜೊತೆಗೆ ನಂಟಿಲ್ಲದ ಸ್ವಾಮೀಜಿಗಳೇ ಅಪರೂಪ. ಪೇಜಾವರಶ್ರೀಗಳಂತಹ ಸ್ವಾಮೀಜಿಗಳು ಬಹಿರಂಗವಾಗಿಯೇ ರಾಜಕೀಯ ನಡೆಸುತ್ತಾರೆ. ವಿವಿಧ ಜಾತಿಯ ಸ್ವಾಮೀಜಿಗಳು ಒಂದೊಂದು ರಾಜಕೀಯ ಪಕ್ಷಗಳ ಜೊತೆಗೆ ನಂಟನ್ನು ಹೊಂದಿದ್ದಾರೆ. ಕೆಲವು ಸ್ವಾಮೀಜಿಗಳನ್ನು ಪೋಷಿಸುತ್ತಿರುವುದೇ ರಾಜಕಾರಣಿಗಳು. ಮಠಗಳೆಂದರೆ ರಾಜಕಾರಣಿಗಳ ಹಣ ಮತ್ತು ಮತಗಳ ಬ್ಯಾಂಕ್ ಎಂದೇ ಹೇಳಬಹುದು. ಆದರೆ ಶಿವಕುಮಾರ ಸ್ವಾಮೀಜಿಗಳು ಯಾವ ರಾಜಕಾರಣಿಗಳ ಜೊತೆಗೂ ಗುರುತಿಸಿಕೊಂಡವರಲ್ಲ. ಆದರೆ ಎಲ್ಲ ಪಕ್ಷಗಳ ರಾಜಕಾರಣಿಗಳೂ ಅವರ ಜೊತೆಗೆ ಗುರುತಿಸಿಕೊಳ್ಳಲು ಹಂಬಲಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಹಣ ಸಂಗ್ರಹಿಸಲು ಸೇವೆಯನ್ನು ಸಾಧನವಾಗಿ ಬಳಸಿದವರಲ್ಲ. ಸೇವೆಗಾಗಿ ಭಿಕ್ಷಾಟನೆ ಮಾಡಿದ ಹೆಮ್ಮೆ ಇವರದು. ಎಲ್ಲ ಮಠಗಳು ತಮ್ಮದೇ ಆದ ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳನ್ನು ಹೊಂದಿವೆ. ಶಿವಕುಮಾರ ಸ್ವಾಮೀಜಿಗಳು ಮನಸ್ಸು ಮಾಡಿದ್ದರೆ ಅಂತಹ ಹಲವು ಕಾಲೇಜುಗಳನ್ನು ನಿರ್ಮಿಸಬಹುದಿತ್ತು. ಕೋಟಿ ಕೋಟಿ ಬಾಚಬಹುದಿತ್ತು. ಆದರೆ ಅವರು ಪ್ರಾಥಮಿಕ ಶಾಲೆಗಳಿಗೆ ಒತ್ತು ನೀಡಿದರು. ಪ್ರಾಥಮಿಕ ಶಾಲೆ ಕಲಿಯುವ ಲಕ್ಷಾಂತರ ಮಕ್ಕಳಿಗೆ ಅನ್ನ ದಾಸೋಹದ ಜೊತೆಗೆ ಶಿಕ್ಷಣ ದಾಸೋಹಗೈದರು.

ತನ್ನ ಮಠದಲ್ಲಿ ಜಾತೀಯತೆಯ ಸೋಂಕನ್ನು ಪ್ರವೇಶಿಸಲು ಬಿಡಲಿಲ್ಲ. ‘ಮುಟ್ಟು’ ಎಂದು ವಿದ್ಯಾರ್ಥಿನಿಯರನ್ನು ದೂರ ಕೂರಿಸಿದಾಗ, ಸ್ವಾಮೀಜಿ ಬಂದು ಆ ವಿದ್ಯಾರ್ಥಿನಿಯರಿಗೆ ಬುದ್ಧಿ ಹೇಳಿ ಅವರನ್ನು ಎಲ್ಲರ ಜೊತೆಗೆ ಕೂರಿಸಿ ಊಟ ಬಡಿಸಿದವರು. ಸಿದ್ದಗಂಗಾ ಸ್ವಾಮೀಜಿಗಳು ಇತರ ಸ್ವಾಮೀಜಿಗಳಂತೆ ಮಾತಿನಲ್ಲಿ ಅರಮನೆ ಕಟ್ಟಿದವರಲ್ಲ. ಯಾವತ್ತೂ ಅವರು ಬಾಗಿ ನಡೆಯುತ್ತಿದ್ದರು. ಬಾಗಿ ನಡೆದವನು ಬಾಹುಬಲಿಗಿಂತ ಎತ್ತರ ಬೆಳೆಯಬಲ್ಲ ಎನ್ನುವುದನ್ನು ಸಮಾಜಕ್ಕೆ ತೋರಿಸಿಕೊಟ್ಟರು. ಸ್ವಾಮೀಜಿಗಳನ್ನು ‘ನಡೆದಾಡುವ ದೇವರು’ ಎಂದು ಕೆಲವರು ಕರೆಯುತ್ತಾರೆ. ಅವರನ್ನು ಪವಾಡ ಪುರುಷನನ್ನಾಗಿಸಲು ಹಲವರು ತರಾತುರಿಯಲ್ಲಿದ್ದಾರೆ. ಮದರ್ ತೆರೇಸಾ ಅವರಿಗೂ ಇದೇ ಸಂಭವಿಸಿತು. ಒಬ್ಬ ಮನುಷ್ಯಳಾಗಿ ಕುಷ್ಠ ರೋಗಿಗಳ ಸೇವೆಯನ್ನು ಮಾಡಿದರು ತೆರೇಸಾ. ಭೂಮಿಯಲ್ಲಿ ಬಡವರ, ದೀನರ, ದಲಿತರ, ರೋಗಿಗಳ ಸೇವೆ ಮಾಡಲು ದೇವರೇ ಇಳಿದು ಬರಬೇಕಾಗಿಲ್ಲ ಎನ್ನುವುದನ್ನು ಜಗತ್ತಿಗೆ ತೋರಿಸಿಕೊಟ್ಟವರು. ದೇವಸಂಭೂತೆಯಾಗಿದ್ದರೆ ಆಕೆ ಮಾಡುವ ಸೇವೆಯಲ್ಲಿ ಅದ್ಭುತವೇನಿದೆ? ಬರೇ ಮನುಷ್ಯಳಾಗಿ ಅಷ್ಟೊಂದು ದೊಡ್ಡ ಮಟ್ಟದಲ್ಲಿ ಸೇವೆ ಮಾಡಲು ಸಾಧ್ಯ ಎನ್ನುವುದೇ ತೆರೇಸಾ ಹಿರಿಮೆ. ಶಿವಕುಮಾರ ಸ್ವಾಮೀಜಿಗಳೂ ಒಬ್ಬ ಮನುಷ್ಯರಾಗಿ ಎಷ್ಟು ಎತ್ತರಕ್ಕೆ ಏರಬಹುದು ಎನ್ನುವುದನ್ನು ನಮಗೆ ತೋರಿಸಿಕೊಟ್ಟು ಹೋಗಿದ್ದಾರೆ. ಅವರನ್ನು ದೇವರನ್ನಾಗಿ ಮಾರ್ಪಡಿಸದೆ ನಾವು ನಮ್ಮ ಮನುಷ್ಯ ಲೋಕದಲ್ಲಿ ಉಳಿಸಿಕೊಳ್ಳೋಣ. ಇನ್ನೊಬ್ಬ ಮನುಷ್ಯನಿಗೆ ಆ ಎತ್ತರಕ್ಕೆ ತಲುಪಲು ಸ್ಫೂರ್ತಿಯಾಗಿ ಮದರ್ ತೆರೇಸಾ, ಶಿವಕುಮಾರ ಸ್ವಾಮೀಜಿಗಳು ಮನುಷ್ಯ ಲೋಕದಲ್ಲಿ ಮನುಷ್ಯರಾಗಿಯೇ ಉಳಿಯುವುದು ಅತ್ಯಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News