ಉತ್ತರ ಪ್ರದೇಶದಲ್ಲಿ ಪಿಂಚಣಿ ರಾಜಕೀಯ !

Update: 2019-01-22 03:41 GMT

ಲಕ್ನೋ, ಜ. 22: ಕುಂಭಮೇಳದ ಸ್ಥಳದಲ್ಲಿ ಈ ತಿಂಗಳ ಕೊನೆಗೆ ನಡೆಯುವ ಉತ್ತರ ಪ್ರದೇಶದ ಐತಿಹಾಸಿಕ ಸಚಿವ ಸಂಪುಟ ಸಭೆಯಲ್ಲಿ,  ಮುಖ್ಯಮಂತ್ರಿ ಆದಿತ್ಯನಾಥ್ ಸರಕಾರ ಸ್ವಾಮೀಜಿಗಳಿಗೆ ಪಿಂಚಣಿ ನೀಡುವ ಯೋಜನೆಯನ್ನು ಘೋಷಿಸಲು ಸಿದ್ಧತೆ ಮಾಡಿಕೊಂಡಿದೆ.

ಸರ್ಕಾರದ ಈ ಉದ್ದೇಶಿತ ನಡೆ ವಿರೋಧ ಪಕ್ಷಗಳಲ್ಲಿ ತಲ್ಲಣ ಮೂಡಿಸಿದೆ. ಪ್ರಮುಖ ವಿರೋಧ ಪಕ್ಷವಾದ ಸಮಾಜವಾದಿ ಮುಖಂಡ ಅಖಿಲೇಶ್ ಯಾದವ್ ತಮ್ಮ ಮೆದು ಹಿಂದುತ್ವ ನೀತಿ ಪ್ರತಿಪಾದಿಸಿದ್ದಾರೆ.

ಸರ್ಕಾರದ ಪಿಂಚಣಿ ಯೋಜನೆಯ ಸೌಲಭ್ಯ ಪಡೆಯಲು ಬಯಸುವ ಸ್ವಾಮೀಜಿಗಳ ಹೆಸರು ನೋಂದಾಯಿಸಿಕೊಳ್ಳಲು ವಿಶೇಷ ಶಿಬಿರಗಳನ್ನು ಆಯೋಜಿಸಲು ಆದಿತ್ಯನಾಥ್ ಸರ್ಕಾರ ಇತ್ತೀಚೆಗೆ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧರಿಸಿತ್ತು. ಇದರಲ್ಲಿ ಮನೆ ಮಠ ಇಲ್ಲದ ಮತ್ತು ಅಲೆಮಾರಿ ಸಾಧುಗಳು ಕೂಡಾ ಸೇರುತ್ತಾರೆ. ಹಿರಿಯ ಸ್ವಾಮೀಜಿಗಳ ಪ್ರತ್ಯೇಕ ವರ್ಗವನ್ನೂ ಸೃಷ್ಟಿಸಲಾಗುತ್ತಿದೆ ಎಂದು ಬಿಜೆಪಿ ವಕ್ತಾರ ರಾಕೇಶ್ ತ್ರಿಪಾಠಿ ಹೇಳಿದ್ದಾರೆ.

ಈ ಯೋಜನೆಯಡಿ ನೀಡುವ ಗೌರವಧನವನ್ನು ಮಾಸಿಕ 400 ರಿಂದ 500 ರೂಪಾಯಿಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ.
ಸರ್ಕಾರದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಅಖಿಲೇಶ್, ಸ್ವಾಮೀಜಿಗಳಿಗೆ ಕನಿಷ್ಠ ಮಾಸಿಕ 20 ಸಾವಿರ ರೂಪಾಯಿ ಪಿಂಚಣಿ ನೀಡಬೇಕು ಹಾಗೂ ಸಮಾಜವಾದಿ ಪಕ್ಷದ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಬೇಕು ಹಾಗೂ ಎಸ್ಪಿ ಸರ್ಕಾರ ನೀಡುತ್ತಿದ್ದಂತೆ ಯಶ್ ಭಾರತಿ ಪುರಸ್ಕೃತರಿಗೆ 50 ಸಾವಿರ ರೂಪಾಯಿ ಗೌರವಧನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಗ್ರಾಮಗಳಲ್ಲಿ ರಾಮಾಯಣ ಹಾಡುವವರಿಗೆ, ರಾಮ, ಭರತ ಹಾಗೂ ಸೀತೆ ಪಾತ್ರ ಮಾಡುವ ಕಲಾವಿದರಿಗೆ ಕೂಡಾ ಪಿಂಚಣಿ ನೀಡುವಂತೆ ಒತ್ತಾಯಿಸಿದ್ದಾರೆ. ಮತ್ತೂ ಹಣ ಇದ್ದರೆ ರಾವಣನ ಪಾತ್ರ ಮಾಡುವವರಿಗೂ ಪಿಂಚಣಿ ನೀಡಿ ಎಂದು ಸಲಹೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News