ಹೊಸ ಶುಲ್ಕ ವ್ಯವಸ್ಥೆಯಿಂದ ಕೇಬಲ್ ಟಿವಿ ಅಗ್ಗವಾಗುತ್ತದೆಯೇ ?

Update: 2019-01-22 04:32 GMT

ಹೊಸದಿಲ್ಲಿ, ಜ. 22: ಹೊಸ ಪ್ರಸಾರ ವ್ಯವಸ್ಥೆಯಿಂದಾಗಿ ಕೇಬಲ್ ಟಿವಿಗಳ ಮಾಸಿಕ ಶುಲ್ಕ ಗಣನೀಯವಾಗಿ ಇಳಿಕೆಯಾಗಲಿದೆ ಎಂದು ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷ ಆರ್.ಎಸ್. ಶರ್ಮಾ ಹೇಳಿದ್ದಾರೆ.

ಚಾನಲ್‌ಗಳ ಬೆಲೆ ನಿಗದಿಗೆ ಎಂಆರ್‌ಪಿ ಆಧರಿತ ಮಾದರಿ ಫೆಬ್ರವರಿ 1ರಿಂದ ಜಾರಿಗೆ ಬರುತ್ತಿದ್ದು, ಇದು ಹೆಚ್ಚು ಸ್ಥಿತಿಸ್ಥಾಪಕತ್ವ, ಪ್ರಸಾರ ಅಂಶಗಳ ವೆಚ್ಚ ಹಾಗೂ ಗ್ರಾಹಕರಿಗೆ ಪಾರದರ್ಶಕತೆಗೆ ಕಾರಣವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಗ್ರಾಹಕರು ತಕ್ಷಣಕ್ಕೆ ಹೊಸ ವ್ಯವಸ್ಥೆಗೆ ವರ್ಗಾವಣೆಗೊಳ್ಳಲು ವಿಫಲರಾದರೂ ತಕ್ಷಣಕ್ಕೆ ಸಂಪರ್ಕ ಕಡಿತಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

"ಉಚಿತ ಚಾನಲ್‌ಗಳ ಪ್ರಸಾರ ಮುಂದುವರಿಯಲಿದೆ. ಈಗಾಗಲೇ ಪಾವತಿ ಚಾನಲ್‌ಗಳನ್ನು ವೀಕ್ಷಿಸುತ್ತಿರುವ ಗ್ರಾಹಕರು, ಕಡಿಮೆ ಶುಲ್ಕದ ಹಿನ್ನೆಲೆಯಲ್ಲಿ ನಿಗದಿತ ಅವಧಿಯ ಒಳಗಾಗಿ ಹೊಸ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂಬ ನಿರೀಕ್ಷೆ ನಮ್ಮದು" ಎಂದು ಟೈಮ್ಸ್ ಆಫ್ ಇಂಡಿಯಾ ಜತೆ ಮಾತನಾಡಿದ ಅವರು ತಿಳಿಸಿದರು.

ಹೊಸ ಪ್ರಸಾರ ನೀತಿ ಗ್ರಾಹಕರಿಗೆ ಲಾಭದಾಯಕವಲ್ಲ ಎಂಬ ಆತಂಕವನ್ನು ಅಲ್ಲಗಳೆದ ಅವರು, ಹೊಸ ಪ್ರಸಾರ ವ್ಯವಸ್ಥೆ ಅನುಷ್ಠಾನದ ದಿನಾಂಕ ಸಮೀಪಿಸುತ್ತಿದ್ದಂತೇ, ಹಲವು ಚಾನಲ್‌ಗಳ ದರ ಕಡಿಮೆಯಾಗುತ್ತಿದೆ ಎಂದು ಪ್ರತಿಪಾದಿಸಿದರು.

"ಈ ಹಿಂದೆ ಜನರಿಗೆ ಅಗತ್ಯವಾಗಿ ಹಲವು ಪೇ ಚಾನಲ್‌ಗಳನ್ನು ಹೇರಲಾಗುತ್ತಿತ್ತು. ಇವುಗಳನ್ನು ಗ್ರಾಹಕರು ನೋಡದಿದ್ದರೂ, ಇದಕ್ಕಾಗಿ ಗ್ರಾಹಕರು ಪಾವತಿಸಬೇಕಾಗುತ್ತಿತ್ತು. ಹೀಗೆ ಅಧಿಕ ಚಾನಲ್‌ಗಳ ಮೂಲಕ ಪ್ರಸಾರ ಸಂಸ್ಥೆಗಳು ಮತ್ತು ವಿತರಕರಾದ ಡಿಟಿಎಚ್ ಕಂಪನಿಗಳು ಮತ್ತು ಕೇಬಲ್ ಆಪರೇಟರ್‌ಗಳು ಹಲವು ಚಾನಲ್‌ಗಳನ್ನು ಜನರ ಮೇಲೆ ಹೇರುತ್ತಿದ್ದರು. ಆದರೆ ಹೊಸ ವ್ಯವಸ್ಥೆ ಮೂಲಕ ಟ್ರಾಯ್ ಪ್ರಸಾರ ವಲಯದಲ್ಲಿ ಪಾರದರ್ಶಕತೆ ತರಲು ಮುಂದಾಗಿದೆ. ಟಿವಿ ವೀಕ್ಷಕರಿಗೆ ಹೆಚ್ಚಿನ ಅಧಿಕಾರ ಸಿಗಲಿದ್ದು, ಅನಗತ್ಯ ಚಾನಲ್‌ಗಳನ್ನು ನಿರಾಕರಿಸಬಹುದಾಗಿದೆ" ಎಂದು ಸ್ಪಷ್ಟಪಡಿಸಿದರು.

ಇದೀಗ ಗ್ರಾಹಕರು ಸುಮಾರು 200-250 ರೂಪಾಯಿಗಳನ್ನು ಮಾಸಿಕವಾಗಿ ಪಾವತಿಸುತ್ತಿದ್ದಾರೆ. ಆದರೆ ವಾಸ್ತವವಾಗಿ 50ಕ್ಕಿಂತ ಹೆಚ್ಚು ಚಾನಲ್‌ಗಳನ್ನು ಜನ ನೋಡುವುದಿಲ್ಲ. ಇದರಿಂದ ಹೊಸ ಕಡಿಮೆ ದರದ ಎಂಆರ್‌ಪಿ ವ್ಯವಸ್ಥೆಯಲ್ಲಿ, ಜನರಿಗೆ ಯಾವ ಯಾವ ಚಾನಲ್‌ಗಳು ಬೇಕು ಎಂಬ ಬಗ್ಗೆ ಕಂಪನಿಗಳು ಮಾಹಿತಿ ನೀಡಬೇಕಾಗುತ್ತದೆ. ಕನಿಷ್ಠ 130 ರೂಪಾಯಿ ದರ ನಿಗದಿಪಡಿಸಲಾಗಿದ್ದು, ಇದರಲ್ಲಿ 100 ಉಚಿತ ಚಾನಲ್‌ಗಳನ್ನು ನೀಡಬೇಕಾಗುತ್ತದೆ. ಉಳಿದಂತೆ ಗ್ರಾಹಕರು ತಾವು ಇಚ್ಛಿಸುವ ಚಾನಲ್‌ಗಳನ್ನು ಮಾತ್ರ ಖರೀದಿಸಬಹುದಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News