ಬಂಡವಾಳಶಾಹಿಗಳ ಲೂಟಿಗೆ ಅವಕಾಶ ಕಲ್ಪಿಸಿಕೊಡುತ್ತಿರುವ ಕೇಂದ್ರ ಸರಕಾರ: ಬೃಂದಾ ಕಾರಟ್

Update: 2019-01-22 13:19 GMT

ಬೆಂಗಳೂರು, ಜ.22: ಬಂಡವಾಳಶಾಹಿಗಳು ದೇಶದ ಸಂಪತ್ತನ್ನು ಲೂಟಿ ಮಾಡುವುದಕ್ಕೆ ಕೇಂದ್ರ ಸರಕಾರ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಆದಿವಾಸಿಗಳು, ದಲಿತ ಸಮುದಾಯ ಹಾಗೂ ಮಹಿಳೆಯರ ಮೇಲೆ ಶೋಷಣೆ ನಡೆಸಲಾಗುತ್ತಿದೆ ಎಂದು ಸಿಪಿಎಂ ಪಾಲಿಟ್ ಬ್ಯುರೋ ಸದಸ್ಯೆ ಬೃಂದಾ ಕಾರಟ್ ಆರೋಪಿಸಿದರು.

ಮಂಗಳವಾರ ಸಮಾಜ ಕಲ್ಯಾಣ ಇಲಾಖೆ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಸಂವಿಧಾನ ಸಂವಾದ ವಿಚಾರಗೋಷ್ಟಿಯಲ್ಲಿ ಮಾತನಾಡಿದ ಅವರು, ಆದಿವಾಸಿಗಳಿಗೆ ತಾವು ವಾಸಿಸುತ್ತಿರುವ ಜಾಗದಲ್ಲಿ ಬದುಕಲು, ವ್ಯವಹಾರ ಮಾಡಲು ಸಂವಿಧಾನಬದ್ಧ ವಿಶೇಷ ಅಧಿಕಾರವಿದೆ. ಆದಾಗ್ಯೂ ಅವರನ್ನು ಹಿಂಸಾತ್ಮಕವಾಗಿ ಒಕ್ಕಲೆಬ್ಬಿಸುವ ಕ್ರಿಯೆ ಮುಂದುವರೆದಿದೆ ಎಂದು ತಿಳಿಸಿದರು.

ಸಂಸತ್‌ನಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಮಸೂದೆ 2009ರಿಂದ 2019ರವರೆಗೆ ಸದನದಲ್ಲೆ ಇದ್ದು, ಇದನ್ನು ಜಾರಿ ಮಾಡುವಂತಹ ಮನಸನ್ನು ಯಾರೂ ಮಾಡುತ್ತಿಲ್ಲ. ಹೀಗೆ ದಲಿತ, ಆದಿವಾಸಿ ಹಾಗೂ ಮಹಿಳೆಯರ ಮೇಲೆ ನಿರಂತರವಾಗಿ ಶೋಷಣೆಗಳು ಇಂದಿಗೂ ನಡೆಯುತ್ತಿವೆ ಎಂದು ಅವರು ವಿಷಾದಿಸಿದರು.

ಇವತ್ತು ಸಂಘಪರಿವಾರ ಜಾತಿ, ಧರ್ಮ, ಆಹಾರ ಹಾಗೂ ಉಡುಗೆಯ ಹೆಸರಿನಲ್ಲಿ ಹಲ್ಲೆಗಳನ್ನು ನಡೆಯುತ್ತಿದೆ. ಇದನ್ನು ಪ್ರಶ್ನಿಸುವವರನ್ನು ದೇಶದ್ರೋಹಿಗಳು ಎಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ. ಹೀಗಾಗಿ ಜನಸಾಮಾನ್ಯರು ಬಿಜೆಪಿಯ ರಾಜಕೀಯ ಅಜೆಂಡಾಗಳನ್ನು ಸರಿಯಾಗಿ ಗ್ರಹಿಸುವಂತಾಗಬೇಕೆಂದು ಅವರು ಹೇಳಿದರು.

ಬಿಜೆಪಿಯ ಸಂಸದ ರಾಕೇಶ್ ಸಿನ್ಹಾ ಮಾತನಾಡಿ, ಮೇಲ್ಜಾತಿ ಬಡವರಿಗೆ ಶೇ.10ರಷ್ಟು ಮೀಸಲಾತಿ ಜಾರಿ ಮಾಡುವ ಮೂಲಕ ಬಿಜೆಪಿ ಪ್ರಗತಿಪರವಾದ ನಿಲುವನ್ನು ತೆಗೆದುಕೊಂಡಿದೆ. ಇದನ್ನು ಕೆಲವು ಸಂಘಟನೆಗಳು ವಿರೋಧಿಸುವುದು ಅರ್ಥವಿಲ್ಲದ್ದೆಂದು ತಿಳಿಸಿದರು. ದೇಶದಲ್ಲಿ ಆಹಾರ, ಜಾತಿ, ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಹಲ್ಲೆಗಳನ್ನು ತಡೆಯಲಾಗುತ್ತಿದೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ಅಧಿಕಾರದ ಅವಧಿಯಲ್ಲಿ ಸಿದ್ಧಾಂತದ ಹೆಸರಿನಲ್ಲಿ ನೂರಾರು ಮಂದಿಯ ಕೊಲೆಗಳು ನಡೆದಿವೆ. ತೃಣಮೂಲ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಅದು ಮುಂದುವರೆದಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News