ಉಪನಗರ ರೈಲು ಯೋಜನೆ ಅನುಷ್ಠಾನಕ್ಕೆ ನೈರುತ್ಯ ರೈಲ್ವೆಗೆ 19 ಷರತ್ತು

Update: 2019-01-22 17:05 GMT

ಬೆಂಗಳೂರು, ಜ.22: ಉಪನಗರ ರೈಲು ಯೋಜನೆಗೆ ರಾಜ್ಯ ಸಚಿವ ಸಂಪುಟದಲ್ಲಿ ಕರಡು ಕಾರ್ಯ ಸಾಧ್ಯತಾ ವರದಿಗೆ ಒಪ್ಪಿಗೆ ನೀಡಿದ ಬಳಿಕ ಅದರ ಅನುಷ್ಠಾನಕ್ಕೆ ನೈರುತ್ಯ ರೈಲ್ವೆಗೆ 19 ಷರತ್ತುಗಳನ್ನು ವಿಧಿಸಿದೆ. ಬಿನ್ನಿಮಿಲ್ ಪ್ರದೇಶದಲ್ಲಿ 3 ಎಕರೆ ಖಾಸಗಿ ಭೂಮಿ ಭೋಗ್ಯಕ್ಕೆ ಪಡೆದುಕೊಳ್ಳುವ ಪ್ರಸ್ತಾವನೆ ಕೈಬಿಡಬೇಕು. ಬದಲಾಗಿ ನಗರದ ಹೊರವಲಯದಲ್ಲಿ ಕಾಸ್ಟಿಂಗ್ ಯಾರ್ಡ್‌ಗೆ(ಮೇಲ್ಸೇತುವೆ ತಯಾರಿ ಪ್ರದೇಶ) ಭೂಮಿ ಪಡೆದುಕೊಳ್ಳಲು ಇಲಾಖೆಗೆ ತಿಳಿಸಿದೆ.

1-2 ಕಿ.ಮಿ.ಗೊಂದು ನಿಲ್ದಾಣ ಬೇಡ: ವರದಿ ಅನ್ವಯ ಪ್ರತಿ 1 ರಿಂದ 2 ಕಿ.ಮಿ. ಅಂತರದಲ್ಲಿ ಒಟ್ಟು 81 ನಿಲ್ದಾಣಗಳು ಬರಲಿವೆ ಎಂದು ತಿಳಿಸಲಾಗಿದೆ. ಕೆಲ ನಿಲ್ದಾಣಗಳಲ್ಲಿ ಪ್ರಯಾಣಿಕರು ಸಂಖ್ಯೆ ಕಡಿಮೆಯಿರುವ ಸಾಧ್ಯತೆಯಿರುವುದರಿಂದ 4-5 ಕಿ.ಮಿ.ಗೆ ಒಂದು ನಿಲ್ದಾಣವಿರಲಿ. 1-2 ಕಿ.ಮಿ.ಗೆ ನಿಲ್ದಾಣವಿದ್ದರೆ ಪ್ರಯಾಣ ಸಮಯವೂ ಹೆಚ್ಚಲಿದೆ. ಜತೆಗೆ 180 ಮಿ. ಪ್ಲಾಟ್‌ಫಾರಂ ಬದಲಿಗೆ 8 ರಿಂದ 12 ಬೋಗಿಗಳು ನಿಲ್ಲುವ 190 ಮಿ.ಗಿಂತಲೂ ಉದ್ದದ ಪ್ಲಾಟ್‌ಫಾರಂ ನಿರ್ಮಿಸಲು ತಿಳಿಸಿದೆ.

ಇತರೆ ನಿಬಂಧನೆಗಳು: ತುಮಕೂರು, ದೊಡ್ಡಬಳ್ಳಾಪುರ, ಹೊಸೂರು, ಮಾಲೂರು, ಬಂಗಾರಪೇಟೆ, ಬಿಡದಿ, ರಾಮನಗರಕ್ಕೂ ರೈಲು ಸಂಪರ್ಕ. ಮೆಜೆಸ್ಟಿಕ್‌ನಿಂದ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಉಪನಗರ ರೈಲು ಸಂಪರ್ಕ ಹಾಗೂ ವಿಮಾನ ನಿಲ್ದಾಣ ಸಮಿಪ ಹೊಸ ರೈಲು ನಿಲ್ದಾಣ. ಕೆಂಗೇರಿ-ವೈಟ್‌ಫೀಲ್ಡ್, ಸೋಲದೇವನಹಳ್ಳಿ-ನೆಲಮಂಗಲ ಕಾರಿಡಾರ್ ಮೆಟ್ರೊ ಮಾರ್ಗಕ್ಕೆ ಸಮಾನಾಂತರವಾಗಿರುವ ಕಾರಣ ಉಪನಗರ ರೈಲು ಯೊಜನೆಯಿಂದ ಕೈಬಿಡಿ. ಉಪನಗರ ರೈಲು ನಿಲ್ದಾಣ ಹಾಗೂ ಸ್ಥಳೀಯ ಮೆಟ್ರೋ ನಿಲ್ದಾಣದ ನಡುವೆ ಸೂಕ್ತ ಪಾದಚಾರಿ ಮಾರ್ಗ. ಯೋಜನೆಗೆ ಅಗತ್ಯವಿರುವ ಸರಕಾರಿ ಭೂಮಿ ಪ್ರತಿ ಎಕರೆಗೆ 1 ರೂ.ಗೆ ಭೊಗ್ಯಕ್ಕೆ ಹಾಗೂ ರೈಲು ಮಾರ್ಗದ ಕೊನೆಯಲ್ಲಿ ಡಿಪೋ ನಿರ್ಮಾಣ. ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್(ಇಎಂಯು) ಬದಲಾಗಿ ಮೆನ್ಲೇನ್ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್(ಮೆಮು) ಕೋಚ್ ಹಾಗೂ ಕಾಮಗಾರಿ ಸಂದರ್ಭದಲ್ಲಿನ ಸಾಲದ ಬಡ್ಡಿ ಹೊರೆಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಭರಿಸಬೇಕು.

ಯೋಜನೆ ಜಾರಿಗೆ 19 ಷರತ್ತುಗಳನ್ನು ವಿಧಿಸಿರುವುದರಿಂದ ಇಡೀ ಯೋಜನೆ ಹಳಿ ತಪ್ಪುತ್ತದೆ ಎಂದು ಸಿಎಂ ಕುಮಾರಸ್ವಾಮಿಗೆ ಸಂಸದ ಪಿ. ಸಿ. ಮೋಹನ್ ಪತ್ರ ಬರೆದಿದ್ದಾರೆ. ಆದರೆ, ಏಕಾಏಕಿ ಒಪ್ಪಲಾಗದಂಥ ಷರತ್ತು ವಿಧಿಸಿರುವ ಕಾರಣವೇನು ಎಂಬುದನ್ನು ಜನರಿಗೆ ವಿವರಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News