ಆನಂದ್ ತೇಲ್ತುಂಬ್ಡೆ ಒಂಟಿಯಾಗದಿರಲಿ

Update: 2019-01-22 18:34 GMT

 ರೋಹಿತ್ ವೇಮುಲಾ ಎಂಬ ಸಂಶೋಧನಾ ವಿದ್ಯಾರ್ಥಿಯನ್ನು ವ್ಯವಸ್ಥೆ ಬಲಿ ಹಾಕಿ ಮೂರು ವರ್ಷ ಕಳೆದಿದೆ. ಸರಕಾರ, ಪೊಲೀಸ್ ಇಲಾಖೆ, ರಾಜಕಾರಣಿಗಳು ಮತ್ತು ಅಧಿಕಾರಿವರ್ಗ ಜೊತೆ ಸೇರಿ ಹೇಗೆ ಒಬ್ಬ ಸೃಜನಶೀಲ ವ್ಯಕ್ತಿಯನ್ನು, ಹೋರಾಟಗಾರನನ್ನು ದಮನ ಮಾಡಬಹುದು ಎನ್ನುವುದಕ್ಕೆ ರೋಹಿತ್ ವೇಮುಲಾ ಪ್ರಕರಣ ಉದಾಹರಣೆಯಾಗಿ ನಮ್ಮ ಮುಂದಿದೆ. ಈ ದಮನ ವೇಮುಲಾ ಜೊತೆಗೇ ಕೊನೆಯಾಗಿಲ್ಲ. ಇದೊಂದು ಆರಂಭ ಮಾತ್ರವಾಗಿತ್ತು. ಇಂದು ಸರಕಾರದ ಸರ್ವಾಧಿಕಾರದ ವಿರುದ್ಧ ಮಾತನಾಡುವ ಹೋರಾಟಗಾರರ ಮೇಲೆ ಸರಣಿಯಾಗಿ ಮೊಕದ್ದಮೆ ದಾಖಲಾಗುತ್ತಿದೆ. ಈ ಮೂಲಕ ಅವರ ಕೈ ಬಾಯಿಯನ್ನು ಕಟ್ಟಿ ಹಾಕಿ, ಶಾಶ್ವತವಾಗಿ ಮೂಕರನ್ನಾಗಿಸುವುದು ಸರಕಾರದ ಉದ್ದೇಶವಾಗಿದೆ. ಒಂದು ವರ್ಷದ ಹಿಂದೆ ಕೋರೆಗಾಂವ್ ಚಳವಳಿಯಲ್ಲಿ ಭಾಗವಹಿಸಿದ ಪ್ರಮುಖ ಚಿಂತಕರನ್ನೆಲ್ಲ ‘ಅರ್ಬನ್ ನಕ್ಸಲ್’ ಎಂದು ಕರೆದು ಜೈಲಿಗೆ ತಳ್ಳುತ್ತಿದೆ. ಮುಂದಿನ ಚುನಾವಣೆಯ ಸಂದರ್ಭದಲ್ಲಿ ತನ್ನ ವಿರುದ್ಧ ಪಕ್ಷೇತರವಾಗಿ ಪ್ರಾಮಾಣಿಕ ಹೋರಾಟ ನಡೆಸುವ ಎಲ್ಲ ಶಕ್ತಿಗಳನ್ನು ಮುಗಿಸಿ ಬಿಡುವ ಉದ್ದೇಶ ಇದರ ಹಿಂದಿದೆ. ಬಂಧಿಸುವುದಕ್ಕೆ ಕೋರೆಗಾಂವ್ ಚಳವಳಿ ಒಂದು ನೆಪ ಮಾತ್ರ. ಶಾಂತ ರೀತಿಯಲ್ಲಿ ನಡೆಯುತ್ತಿದ್ದ ಒಂದು ಕಾರ್ಯಕ್ರಮದಲ್ಲಿ ಹಿಂಸಾಚಾರ ಸೃಷ್ಟಿಸಿ ಬಳಿಕ ಅದನ್ನು ಹೋರಾಟಗಾರರ ತಲೆಗೆ ಕಟ್ಟಿರುವುದು ಪ್ರಗತಿಪರ ಹೋರಾಟಗಾರರನ್ನು ಸದೆಬಡಿಯುವ ಉದ್ದೇಶದಿಂದ ಎನ್ನುವುದು ಆನಂತರದ ಘಟನಾವಳಿಗಳಿಂದ ಗೊತ್ತಾಗಿ ಬಿಡುತ್ತದೆ.

ವಿಪರ್ಯಾಸವೆಂದರೆ ಕೋರೆಗಾಂವ್‌ನಲ್ಲಿ ನೆರೆದ ದಲಿತ ಸಮುದಾಯವನ್ನು ದಿಕ್ಕೆಡಿಸಲು ದುಷ್ಟ ಶಕ್ತಿಗಳು ಆರಿಸಿಕೊಂಡಿದ್ದು ಸಂಭಾಜಿಯ ಗೋರಿಯನ್ನಾಗಿತ್ತು. ಪೇಶ್ವೆ, ಮರಾಠಾ ಹಾಗೂ ರಜಪೂತರ ಒಳ ಸಂಚಿನಿಂದಾಗಿ ಶಿವಾಜಿಯ ಮಗ ಸಂಭಾಜಿ ಔರಂಗಜೇಬನ ಸೈನ್ಯಕ್ಕೆ ಸಿಲುಕಿ ಬಲಿಯಾಗಬೇಕಾಗುತ್ತದೆ. ಆತನ ಮೃತದೇಹವನ್ನು ಸಂಗ್ರಹಿಸಿ ಅದರ ಅಂತ್ಯ ಸಂಸ್ಕಾರ ಗೈದಿರುವುದು ಪೇಶ್ವೆಗಳೋ, ಮರಾಠರೋ ಅಲ್ಲ. ಬದಲಿಗೆ ಗೋವಿಂದ ಎಂಬ ಮಹಾರ್ ಸಮುದಾಯಕ್ಕೆ ಸೇರಿದ ದಲಿತ. ಆತ ತನ್ನ ಹೊಲದಲ್ಲಿ ಈ ಸಮಾಧಿಯನ್ನು ನಿರ್ಮಿಸಿದ್ದನು. ಗೋವಿಂದ ಮಹಾರ್ ಮೃತಪಟ್ಟ ಬಳಿಕ ಆತನ ಕುಟುಂಬಿಕರು ಆತನ ಸ್ಮಾರಕವನ್ನು ಸಂಭಾಜಿಯ ಸ್ಮಾರಕ ಸಮೀಪವೇ ನಿರ್ಮಿಸಿದ್ದರು. ಶಿವಾಜಿ ಮತ್ತು ಆತನ ಮಗ ಸಂಭಾಜಿ ಜೊತೆಗಿದ್ದವರು ಯಾರು ಮತ್ತು ಅವರಿಗೆ ದ್ರೋಹ ಎಸಗಿದವರು ಯಾರು ಎನ್ನುವುದನ್ನೂ ಈ ಇತಿಹಾಸದ ತುಣುಕಿನಿಂದ ನಾವು ಅರ್ಥೈಸಿಕೊಳ್ಳಬಹುದು. ಆದರೆ ಇತಿಹಾಸವನ್ನು ತಿರುಚಿ ತನ್ನ ರಾಜಕೀಯ ದುರುದ್ದೇಶಕ್ಕೆ ಬಳಸುವುದು ಸಂಘಪರಿವಾರದ ಪರಿಪಾಠವಾಗಿದೆ. ಇಲ್ಲೂ, ಸಂಭಾಜಿಯ ಮೃತದೇಹವನ್ನು ಅಂತ್ಯ ಸಂಸ್ಕಾರ ಮಾಡಿದ್ದು ಮಹಾರ್ ಅಲ್ಲ, ಮರಾಠಾ ಸಮುದಾಯಕ್ಕೆ ಸೇರಿದ ಶಿವಾಲೆ ಎಂಬಾತ ಎಂಬ ಕಟ್ಟು ಕತೆಯನ್ನು ಸಂಘಪರಿವಾರ ಹರಡಿತು. ಅಷ್ಟೇ ಅಲ್ಲ. ಕೋರೆಗಾಂವ್ ದಿನಾಚರಣೆಗೆ ಎರಡು ದಿನಗಳ ಹಿಂದೆ, ಸಂಭಾಜಿಯ ಪಕ್ಕದಲ್ಲೇ ಇದ್ದ ಗೋವಿಂದ ಮಹಾರ್‌ನ ಗೋರಿಯನ್ನು ಹಾಳುಗೆಡವಿದರು. ಕೋರೆಗಾಂವ್ ದಿನಾಚರಣೆಗೆ ಆಗಮಿಸುವ ದಲಿತರನ್ನು ಪ್ರಚೋದಿಸುವ ದುರುದ್ದೇಶವನ್ನು ಇದು ಹೊಂದಿತ್ತು. ಆದರೆ ದಲಿತರು ಶಾಂತಿ ಪಾಲಿಸಿದರು. ಮಾತುಕತೆಯ ಮೂಲಕ ಪ್ರಕರಣವನ್ನು ಶಾಂತಿಯಿಂದ ಇತ್ಯರ್ಥಗೊಳಿಸಲಾಯಿತು. ಆದರೆ ಸಂಘಪರಿವಾರದ ನಾಯಕರಿಗೆ ಕೋರೆಗಾಂವ್ ದಿನ ಗಲಭೆ ನಡೆಯಲೇಬೇಕಾಗಿತ್ತು.

ಜ. 1ರಂದು ನಡೆದ ಸಭೆಗೆ ಸಂಘಪರಿವಾರ ಕಲ್ಲು ತೂರಾಟ ನಡೆಸಿತು. ಕೇಸರಿ ಬಾವುಟಗಳೊಂದಿಗೆ ದಲಿತರ ಮೇಲೆ ನೇರ ದಾಳಿ ನಡೆಸಿತು. ದಲಿತರೂ ಈ ಸಂದರ್ಭದಲ್ಲಿ ಪ್ರತಿ ದಾಳಿ ನಡೆಸುವುದು ಅನಿವಾರ್ಯವಾಯಿತು. ಆದರೆ ಹಿಂಸಾಚಾರದಲ್ಲಿ ಭಾಗಿಯಾದ ಸಂಘಪರಿವಾರದ ಮುಖಂಡರಿಗೆಲ್ಲ ಕ್ಲೀನ್ ಚಿಟ್ ನೀಡಲಾಯಿತು. ಕೋರೆಗಾಂವ್ ದಿನದ ಸಭೆಯಲ್ಲಿ ಭಾಗವಹಿಸಿದ ಪ್ರಗತಿಪರ ನಾಯಕರನ್ನು ಉಗ್ರವಾದಿಗಳು ಎಂದು ಚಿತ್ರಿಸಿ, ಅವರ ಮೇಲೆ ಮೊಕದ್ದಮೆ ಹೂಡಲಾಯಿತು ಮಾತ್ರವಲ್ಲ, ಹಲವರನ್ನು ಜೈಲಿಗೆ ತಳ್ಳಲಾಯಿತು. ದುರಂತವೆಂದರೆ ಯಾರು ಹಿಂಸಾಚಾರದಲ್ಲಿ ನೇರವಾಗಿ ಭಾಗಿಯಾಗಿದ್ದಾರೆಯೋ ಅವರು ನೀಡಿದ ದೂರಿನ ಮೇರೆಗೆ ಪ್ರಗತಿಪರ ಚಿಂತಕರ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಕೋರೆಗಾಂವ್ ಸಭೆಯಲ್ಲಿ ಮಾಡಿದ ಉದ್ವಿಗ್ನಕಾರಿ ಭಾಷಣವೇ ಹಿಂಸಾಚಾರಕ್ಕೆ ಕಾರಣವಾಯಿತು ಎಂದು ಸಂಘಪರಿವಾರ ದೂರಿದೆ. ಆದರೆ ಭಾಷಣ ಮತ್ತು ಸಭೆಯ ಪೂರ್ಣ ವೀಡಿಯೊ ಪೊಲೀಸರ ಬಳಿ ಇದೆ. ಒಂದು ವೇಳೆ ಅದರಲ್ಲಿ ಅಂತಹ ಮಾತುಗಳ ಅಂಶ ಇದ್ದಿದ್ದರೆ ಪೊಲೀಸರು ಸ್ವಯಂ ದೂರು ದಾಖಲಿಸ ಬಹುದಿತ್ತು. ಒಂದು ವಾರದ ಬಳಿಕ ಸಂಘಪರಿವಾರ ನೀಡಿದ ದೂರಿನ ಅನ್ವಯ ಮೊಕದ್ದಮೆ ದಾಖಲಿಸುವ ಅಗತ್ಯ ಏನಿತ್ತು ಎಂಬ ಪ್ರಶ್ನೆ ಏಳುತ್ತದೆ.

ವಿಪರ್ಯಾಸವೆಂದರೆ ಈ ಕಾರ್ಯಕ್ರಮದಲ್ಲಿ ಭಾಗಿಯೇ ಆಗದ ಖ್ಯಾತ ಚಿಂತಕ, ಲೇಖಕ ಆನಂದ್ ತೇಲ್ತುಂಬ್ಡೆ ಮೇಲೂ ಮೊಕದ್ದಮೆ ಹೂಡಲಾಗಿದೆ. ತಾನು ಎಲ್ಗಾರ್ ಪರಿಷತ್ ನಡೆಸಿದ ಸಮಾವೇಶದಲ್ಲಿ ಭಾಗವಹಿಸಿಲ್ಲ ಎನ್ನುವುದನ್ನು ಸ್ಪಷ್ಟವಾಗಿ, ಸಾಕ್ಷಿ ಸಮೇತ ತೇಲ್ತುಂಬ್ಡೆ ನಿರೂಪಿಸಿದ್ದಾರಾದರೂ ಪೊಲೀಸ್ ಇಲಾಖೆ ಅವರ ಬಂಧನಕ್ಕೆ ತುದಿಗಾಲಲ್ಲಿ ನಿಂತಿದೆ. ತೇಲ್ತುಂಬ್ಡ್ಡೆಯ ಹಣೆಯ ಮೇಲೂ ‘ಅರ್ಬನ್ ನಕ್ಸಲ್’ ಪಟ್ಟಿ ಒತ್ತಲು ಹೊರಟಿದೆ. ತೇಲ್ತುಂಬ್ಡೆಯ ಹೇಳಿಕೆ, ನ್ಯಾಯಾಲಯದ ಮುಂದೆ ಅವರ ಮನವಿ ಎಲ್ಲವೂ ಅರಣ್ಯರೋದನವಾಗಿದೆ. ಒಬ್ಬ ಲೇಖಕನ ಬರೆಯುವ ಕೈಗಳನ್ನು, ಚಿಂತಿಸುವ ಮೆದುಳನ್ನು, ಮಾತನಾಡುವ ನಾಲಗೆಯನ್ನು ಕತ್ತರಿಸಲು ಪೂರ್ಣ ತಯಾರಿ ಮುಗಿದಿದೆ. ಸರಕಾರ ತೇಲ್ತುಂಬ್ಡೆಯ ವಿರುದ್ಧ ಯಾಕೆ ಬಿದ್ದಿದೆ ಎನ್ನುವುದನ್ನು ಊಹಿಸುವುದು ಸುಲಭ. ಈ ದೇಶದಲ್ಲಿ ದಲಿತ ಚಿಂತನೆಯನ್ನು ಹುಟ್ಟು ಹಾಕಿ ಬೆಳೆಸಿದ ಅಪರೂಪದ ಲೇಖಕ ಅವರು. ಖೈರ್ಲಾಂಜಿ ಸೇರಿದಂತೆ ದೇಶಾದ್ಯಂತ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ವಿಶ್ವದ ಮುಂದೆ ತೆರೆದಿಡುತ್ತಾ ಬಂದವರು. ಇಲ್ಲವಾದರೆ, ಖೈರ್ಲಾಂಜಿಯಂತಹ ಬರ್ಬರ ಘಟನೆಗಳ ಹಿಂದಿರುವ ವಾಸ್ತವ ಮುಚ್ಚಿ ಹೋಗುತ್ತಿತ್ತು.

ದಲಿತರು ತಮ್ಮ ಸ್ಥಿತಿಗತಿಗಳನ್ನು ಇವರ ಮೂಲಕ ಅರ್ಥ ಮಾಡಿಕೊಳ್ಳತೊಡಗಿದ್ದಾರೆ. ಸಂಘಪರಿವಾರ ಹರಡುತ್ತಿರುವ ಪೊಳ್ಳು ಹಿಂದುತ್ವಕ್ಕೆ ತೇಲ್ತುಂಬ್ಡೆಯಂತಹ ಚಿಂತಕರು ಬಹುದೊಡ್ಡ ಅಡ್ಡಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೋರೆಗಾಂವ್ ಘಟನೆಯನ್ನೇ ನೆಪವಾಗಿಟ್ಟುಕೊಂಡು ಇವರನ್ನು ನಿವಾರಿಸಲು ಹೊರಟಿದೆ. ತೇಲ್ತುಂಬ್ಡೆಯ ಪರವಾಗಿ ದಲಿತರ ಹೆಸರಲ್ಲಿ, ಶೋಷಿತರ ಹೆಸರಲ್ಲಿ ರಾಜಕೀಯ ನಡೆಸುವ ಯಾವ ಪಕ್ಷಗಳೂ ಈವರೆಗೆ ಧ್ವನಿಯೆತ್ತದೇ ಇರುವುದು ಆತಂಕಕಾರಿಯಾಗಿದೆ.ವೇಮುಲಾರನ್ನು ಒಂಟಿಯಾಗಿಸಿದಂತೆಯೇ ಇದೀಗ ತೇಲ್ತುಂಬ್ಡೆಯನ್ನೂ ದಲಿತ ಸಂಘಟನೆಗಳು ಒಂಟಿಯಾಗಿಸಲು ಹೊರಟಿದೆ. ತೇಲ್ತುಂಬ್ಡೆ ದಲಿತರ ಪರವಾಗಿ ಮಾತ್ರವಲ್ಲ, ಮೋದಿ ನೇತೃತ್ವದ ಸರಕಾರದ ಸರ್ವಾಧಿಕಾರಿ ಆಡಳಿತದ ವಿರುದ್ಧವೂ ಬರೆದಿದ್ದಾರೆ ಮತ್ತು ಮಾತನಾಡಿದ್ದಾರೆ. ಈ ಕಾರಣದಿಂದಲಾದರೂ ಎಲ್ಲ ಪಕ್ಷ, ಪಂಥ, ಸಂಘಟನೆಗಳು ಭೇದಗಳನ್ನು ಬದಿಗಿಟ್ಟು ತೇಲ್ತುಂಬ್ಡೆಯ ಬೆನ್ನಿಗೆ ನಿಲ್ಲಬೇಕಾಗಿದೆ. ದೊಡ್ಡ ದನಿಯಲ್ಲಿ ದೇಶ ಆನಂದ್ ತೇಲ್ತುಂಬ್ಡೆಯ ಪರವಾಗಿ ಮಾತನಾಡತೊಡಗಿದರೆ, ಮುಂದೆಂದೂ ಅಭಿವ್ಯಕ್ತಿ ಸ್ವಾತಂತ್ರವನ್ನು ದಮನಿಸುವ ಸಾಹಸಕ್ಕೆ ವ್ಯವಸ್ಥೆ ಇಳಿಯಲಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News