ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಪ್ರಿಯಾಂಕಾ ಗಾಂಧಿ ನೇಮಕ

Update: 2019-01-23 16:08 GMT

ಹೊಸದಿಲ್ಲಿ, ಜ.23: ವರ್ಷಗಳ ಕಾಲ ಕೇಳಿ ಬರುತ್ತಿದ್ದ ವದಂತಿಗಳಿಗೆ ಕೊನೆಗೂ ಅಂತ್ಯ ಹಾಡಿರುವ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ವಿಧ್ಯುಕ್ತ ರಾಜಕೀಯ ಪ್ರವೇಶವನ್ನು ಮಾಡಿದ್ದಾರೆ.

ಸಾರ್ವತ್ರಿಕ ಚುನಾವಣೆಗಳಿಗೆ ಮುನ್ನ ರಾಜ್ಯದಲ್ಲಿ ಪೂರ್ಣ ಸಾಮರ್ಥ್ಯವನ್ನು ಮೈಗೂಡಿಸಿಕೊಳ್ಳುವ ಕಾಂಗ್ರೆಸ್ ಉದ್ದೇಶವನ್ನು ಪ್ರತಿಫಲಿಸಿರುವ ಕ್ರಮವೊಂದರಲ್ಲಿ ಪಕ್ಷಾಧ್ಯಕ್ಷ ರಾಹುಲ್ ಗಾಂಧಿಯವರು ಸೋದರಿ ಪ್ರಿಯಾಂಕಾರನ್ನು ಉತ್ತರ ಪ್ರದೇಶದ ಪೂರ್ವ ವಿಭಾಗಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಳಿಸಿದ್ದಾರೆ.

ಪ್ರಿಯಾಂಕಾ ಫೆಬ್ರವರಿ ಮೊದಲ ವಾರದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಕಾಂಗ್ರೆಸ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಪ್ರಿಯಾಂಕಾರ ನೇಮಕವನ್ನು ಕಳೆದ ಕೆಲವು ವರ್ಷಗಳಿಂದ ಕಾಂಗ್ರೆಸ್ ಬಲ ಕ್ಷೀಣಿಸಿರುವ ಉತ್ತರ ಪ್ರದೇಶದಲ್ಲಿ ಪಕ್ಷದ ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಚಾಣಾಕ್ಷ ನಡೆಯನ್ನಾಗಿ ಪರಿಗಣಿಸಲಾಗಿದೆ. ರಾಜ್ಯದಲ್ಲಿ ಪರಸ್ಪರ ಮೈತ್ರಿಯನ್ನು ರಚಿಸಿಕೊಂಡಿರುವ ಎಸ್‌ಪಿ ಮತ್ತು ಬಿಎಸ್‌ಪಿ ಕಾಂಗ್ರೆಸ್‌ನ್ನು ದೂರವೇ ಇಟ್ಟಿವೆ.

ಜ.12ರಂದು 48ನೇ ವರ್ಷಕ್ಕೆ ಕಾಲಿರಿಸಿರುವ ಪ್ರಿಯಾಂಕಾ ಉತ್ತರ ಪ್ರದೇಶದಲ್ಲಿ ಸೋದರ ರಾಹುಲ್‌ಗೆ ನೆರವಾಗಲಿದ್ದಾರೆ. ಪ್ರಮುಖ ಹಿಂದಿ ಭಾಷಿಕ ರಾಜ್ಯವಾಗಿರುವ ಉತ್ತರ ಪ್ರದೇಶ ದೇಶದಲ್ಲಿಯೇ ಅತ್ಯಂತ ಹೆಚ್ಚು(80) ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ.

ಉತ್ತರ ಪ್ರದೇಶದಲ್ಲಿ ಲೋಕಸಭಾ ಚುನಾವಣೆಗಳಲ್ಲಿ ಪ್ರಿಯಾಂಕಾ ತನಗೆ ನೆರವಾಗಲಿದ್ದಾರೆ. ಅವರು ಅತ್ಯಂತ ಸಮರ್ಥರಾಗಿದ್ದಾರೆ ಎಂದು ಅಮೇಥಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಹೇಳಿದರು.

ಉತ್ತರ ಪ್ರದೇಶ ಪಶ್ಚಿಮ ವಿಭಾಗಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಜ್ಯೋತಿರಾದಿತ್ಯ ಸಿಂದಿಯಾ ಅವರನ್ನು ನೇಮಕಗೊಳಿಸಲಾಗಿದೆ.

ಉತ್ತರ ಪ್ರದೇಶಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಗುಲಾಂ ನಬಿ ಆಝಾದ್ ಅವರಿಗೆ ಈಗ ಪಕ್ಷದಲ್ಲಿ ಗುಂಪುಗಾರಿಕೆ ತಾಂಡವವಾಡುತ್ತಿರುವ ಹರ್ಯಾಣದ ಹೊಣೆಯನ್ನು ವಹಿಸಲಾಗಿದೆ. ಕೆ.ಸಿ.ವೇಣುಗೋಪಾಲ್ ಅವರನ್ನು ಪ್ರಧಾನ ಕಾರ್ಯದರ್ಶಿ(ಸಂಘಟನೆ)ಯನ್ನಾಗಿ ನೇಮಕಗೊಳಿಸಲಾಗಿದೆ. ರಾಜಸ್ಥಾನದ ಮುಖ್ಯಮಂತ್ರಿಯಾಗಿರುವ ಅಶೋಕ ಗೆಹ್ಲೋಟ್ ಅವರು ಈವರೆಗೆ ಈ ಜವಾಬ್ದಾರಿ ನಿರ್ವಹಿಸುತ್ತಿದ್ದರು. ವೇಣುಗೋಪಾಲ್ ಅವರು ಕರ್ನಾಟಕಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿಯೂ ಮುಂದುವರಿಯುತ್ತಾರೆ. ಪ್ರಿಯಾಂಕಾ ಇತ್ತೀಚಿಗೆ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡಗಳಲ್ಲಿ ಕಾಂಗ್ರೆಸ್‌ನ ನೂತನ ಮುಖ್ಯಮಂತ್ರಿಗಳ ಆಯ್ಕೆ ಸೇರಿದಂತೆ ಪಕ್ಷದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ತಾಯಿ ಮತ್ತು ಸೋದರನ ಜೊತೆ ಭಾಗಿಯಾಗಿದ್ದರು. ಪಂಜಾಬ್ ಕಾಂಗ್ರೆಸ್‌ಗೆ ಮನ್‌ಪ್ರೀತ್ ಬಾದಲ್ ಮತ್ತು ನವಜೋತ ಸಿಂಗ್ ಸಿಧು ಅವರ ಸೇರ್ಪಡೆಯಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಇಬ್ಬರು ಮಕ್ಕಳ ತಾಯಿಯಾಗಿರುವ ಪ್ರಿಯಾಂಕಾರ ಪತಿ ರಾಬರ್ಟ್ ವಾದ್ರಾ ಹರ್ಯಾಣ ಮತ್ತು ರಾಜಸ್ಥಾನಗಳಲ್ಲಿ ಭೂವಿವಾದಗಳಲ್ಲಿ ಸಿಲುಕಿದ್ದು, ಜಾರಿ ನಿರ್ದೇಶನಾಲಯದಿಂದ ತನಿಖೆಗಳನ್ನು ಎದುರಿಸುತ್ತಿದ್ದಾರೆ.

ಸಕ್ರಿಯ ರಾಜಕಾರಣವನ್ನು ಪ್ರವೇಶಿಸಿರುವ ಗಾಂಧಿ ಕುಟುಂಬದ ಇನ್ನೊಂದು ಕುಡಿಯಾಗಿರುವ ಪ್ರಿಯಾಂಕಾ ಹಾಲಿ ಸೋನಿಯಾ ಗಾಂಧಿಯವರು ಪ್ರತಿನಿಧಿಸುತ್ತಿರುವ ರಾಯಬರೇಲಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಬಹುದು ಎಂಬ ಊಹಾಪೋಹಗಳು ಪಕ್ಷದ ಕಾರ್ಯಕರ್ತರಲ್ಲಿ ಗರಿಗೆದರಿವೆ.

ಉತ್ತರ ಪ್ರದೇಶದ ರಾಜಕಾರಣವನ್ನು ಬದಲಿಸಲಿದೆ: ರಾಹುಲ್

ಪ್ರಿಯಾಂಕಾ ಗಾಂಧಿ ಮತ್ತು ಜ್ಯೋತಿರಾದಿತ್ಯ ಸಿಂದಿಯಾ ಪ್ರಭಾವಿ ನಾಯಕರಾಗಿದ್ದಾರೆ. ಉತ್ತರ ಪ್ರದೇಶದ ರಾಜಕೀಯದಲ್ಲಿ ಬದಲಾವಣೆಗಳನ್ನು ತರಲು ಯುವ ನಾಯಕರನ್ನು ಪಕ್ಷವು ಬಯಸಿದೆ ಎಂದು ರಾಹುಲ್ ಹೇಳಿದರು. ಈ ನೇಮಕಗಳು ಬಿಜೆಪಿಯಲ್ಲಿ ಆತಂಕವನ್ನು ಹುಟ್ಟಿಸಿವೆ ಎಂದರು.

ಪ್ರಿಯಾಂಕಾರ ನೇಮಕದಿಂದ ರಾಹುಲ್ ವೈಫಲ್ಯ ಒಪ್ಪಿಕೊಂಡ ಕಾಂಗ್ರೆಸ್: ಬಿಜೆಪಿ ಟೀಕೆ

ಪ್ರಿಯಾಂಕಾ ಗಾಂಧಿಯವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸುವ ಮೂಲಕ ನಾಯಕತ್ವ ಒದಗಿಸುವಲ್ಲಿ ರಾಹುಲ್ ಗಾಂಧಿ ವಿಫಲಗೊಂಡಿರುವುದನ್ನು ಕಾಂಗ್ರೆಸ್ ಒಪ್ಪಿಕೊಂಡಿದೆ ಎಂದು ಹೇಳಿರುವ ಬಿಜೆಪಿ ಇದು ‘ಕುಟುಂಬ ಕೂಟ’ವಾಗಿದೆ ಎಂದು ಟೀಕಿಸಿದೆ.

 ರಾಹುಲ್ ವಿಫಲರಾಗಿದ್ದಾರೆ ಮತ್ತು ಅವರಿಗೆ ಕುಟುಂಬದ ಊರುಗೋಲು ಅಗತ್ಯವಿದೆ ಎನ್ನುವುದನ್ನು ಕಾಂಗ್ರೆಸ್ ಬಹಿರಂಗವಾಗಿ ಪ್ರಕಟಿಸಿದೆ. ಮಹಾಮೈತ್ರಿಯ ಪಕ್ಷಗಳು ರಾಹುಲ್‌ರನ್ನು ತಿರಸ್ಕರಿಸಿರುವುದರಿಂದ ಅವರು ಕುಟುಂಬದ ಮೈತ್ರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಹೇಳಿದರು.

ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು,ಅದು ಗಾಂಧಿ ಕುಟುಂಬದ ಯಾರಿಗಾದರೂ ಪಟ್ಟಾಭಿಷೇಕ ಮಾಡುವುದು ಸಹಜವೇ ಆಗಿದೆ ಎಂದರು. ಜವಾಹರಲಾಲ್ ನೆಹರು ಅವರಿಂದ ಹಿಡಿದು ರಾಹುಲ್‌ವರೆಗೆ ನೆಹರು-ಗಾಂಧಿ ಕುಟುಂಬದ ಐವರು ನಾಯಕರನ್ನು ಪ್ರಸ್ತಾಪಿಸಿದ ಪಾತ್ರಾ ಕಾಂಗ್ರೆಸ್ ಪಕ್ಷದ ಮುಂದಿನ ನಾಯಕ ಯಾರೆಂದು ನವ ಭಾರತವು ಪ್ರಶ್ನಿಸುತ್ತಿದೆ. ಎಲ್ಲ ನೇಮಕಗಳೂ ಒಂದೇ ಕುಟುಂಬದಲ್ಲಿ ಆಗುತ್ತಿವೆ. ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಮೂಲಭೂತ ವ್ಯತ್ಯಾಸವಾಗಿದೆ. ಕಾಂಗ್ರೆಸ್‌ನಲ್ಲಿ ಕುಟುಂಬವೇ ಪಕ್ಷವಾಗಿದ್ದರೆ,ಬಿಜೆಪಿಯಲ್ಲಿ ಪಕ್ಷವೇ ಕುಟುಂಬವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News