97ರ ಪ್ರಾಯದ ಕೇರಳದ ವಿದ್ಯಾರ್ಥಿನಿ ಕಾಮನ್‌ವೆಲ್ತ್ ಸದ್ಬಾವನಾ ರಾಯಭಾರಿ!

Update: 2019-01-23 08:21 GMT

ಹೊಸದಿಲ್ಲಿ, ಜ.23: ಕಳೆದ ವರ್ಷ ಕೇರಳ ಸರಕಾರ ನಡೆಸಿದ್ದ ಅಕ್ಷರಲಕ್ಷಂ ಸಾಕ್ಷರತೆ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಪಡೆದಿರುವ 97ರ ಹರೆಯದ ಕಾರ್ತಿಯಾನಿ ಅಮ್ಮಾ ಅವರನ್ನು ಕಾಮನ್‌ವೆಲ್ತ್ ಆಫ್ ಲರ್ನಿಂಗ್ ಗೌರವಿಸಿದೆ. ಕಾಮನ್‌ವೆಲ್ತ್ ದೇಶಗಳಲ್ಲಿ ಶಿಕ್ಷಣದ ಅಭಿವೃದ್ದಿಗೆ ಶ್ರಮಿಸುತ್ತಿರುವ ಕೆನಡಾ ಮೂಲದ ಈ ಸಂಘಟನೆಯು ಕಾರ್ತಿಯಾನಿ ಅವರನ್ನು ತನ್ನ ಸದ್ಬಾವನಾ ರಾಯಭಾರಿ ಎಂದು ಘೋಷಿಸಿದೆ.

 ಕಾಮನ್‌ವೆಲ್ತ್ ಆಫ್ ಲರ್ನಿಂಗ್ ಗುಡ್‌ವಿಲ್ ಉಪಾಧ್ಯಕ್ಷ ಬಾಲಸುಬ್ರಹ್ಮಣ್ಯಂ ಅವರು ಕಾರ್ತಿಯಾನಿ ಅಮ್ಮ ಅವರನ್ನು ಖುದ್ದಾಗಿ ಭೇಟಿಯಾಗಿ ಪ್ರಶಸ್ತಿಯನ್ನು ಹಸ್ತಾಂತರಿಸಿದರು.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪದವಿ ಶಿಕ್ಷಣ ಪಡೆಯುತ್ತೀರಾ ಎಂದು ಕಾರ್ತಿಯಾನಿ ಅವರಲ್ಲಿ ಕೇಳಿದಾಗ, ನನ್ನ ಮಕ್ಕಳು ನನಗೆ ಮತ್ತಷ್ಟು ಕಲಿಸಲು ಒಪ್ಪಿದರೆ, ನಾನು ಅದನ್ನು ಇಷ್ಟಪಡುತ್ತೇನೆ ಎಂದರು.

  ಕೇರಳದ ಅಲಪ್ಪುಳದಲ್ಲಿ ತನ್ನ ಮಗಳು ಹಾಗೂ ಮೊಮ್ಮಕ್ಕಳೊಂದಿಗೆ ವಾಸಿಸುತ್ತಿರುವ ಕಾರ್ತಿಯಾನಿ ದೇವಸ್ಥಾನಗಳಲ್ಲಿ ಸ್ವಚ್ಛತೆ ಕೆಲಸ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಎಳೆಯ ಪ್ರಾಯದಲ್ಲಿ ಶಾಲೆಯ ಮೆಟ್ಟಿಲು ಹತ್ತಿರಲಿಲ್ಲ.

ರಾಜ್ಯದಲ್ಲಿ ಶೇ.100ರಷ್ಟು ಸಾಕ್ಷರತೆ ಸಾಧಿಸುವ ಉದ್ದೇಶದಿಂದ ಕೇರಳ ಸರಕಾರ 2018ರ ಜನವರಿ 26ರಂದು ಅಕ್ಷರಲಕ್ಷಂ ಕಾರ್ಯಕ್ರಮ ಆರಂಭಿಸಿತ್ತು. ಕಾರ್ತಿಯಾನಿ ಅಕ್ಷರಲಕ್ಷಂ ಪರೀಕ್ಷೆಯಲ್ಲಿ 100ರಲ್ಲಿ 98 ಅಂಕ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News