ಮತ್ತೆ ಬ್ಯಾಲೆಟ್ ಪೇಪರ್ ಬಳಕೆಯ ಪ್ರಶ್ನೆಯೇ ಇಲ್ಲ: ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ

Update: 2019-01-24 08:43 GMT

ಹೊಸದಿಲ್ಲಿ, ಜ.24: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇವಿಎಂಗಳ ಬದಲು ಮತಪತ್ರಗಳನ್ನು ಉಪಯೋಗಿಸಬೇಕೆಂಬ ಆಗ್ರಹ ಹೆಚ್ಚಾಗುತ್ತಿರುವ ನಡುವೆಯೇ ಸ್ಪಷ್ಟನೆ ನೀಡಿರುವ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ,  ಮತ್ತೆ ಬ್ಯಾಲೆಟ್ ಪೇಪರ್ (ಮತಪತ್ರ) ಯುಗಕ್ಕೆ ವಾಪಸಾಗುವುದಿಲ್ಲ ಎಂದು ಹೇಳಿದ್ದಾರೆ.

``ದೇಶ ಮತ್ತೆ ಬ್ಯಾಲೆಟ್ ಪೇಪರ್ ಯುಗಕ್ಕೆ ಹೋಗುವುದಿಲ್ಲ ಎಂದು ನಾನು ಸ್ಪಷ್ಟ ಪಡಿಸಲು ಇಚ್ಛಿಸುತ್ತೇನೆ'' ಎಂದು ಸಮಾರಂಭವೊಂದರಲ್ಲಿ ಮಾತನಾಡುತ್ತಾ ಅರೋರಾ ಹೇಳಿದರು.

``2014ರ ಲೋಕಸಭಾ ಚುನಾವಣೆಯಲ್ಲಿ ಒಂದು ಫಲಿತಾಂಶ ಬಂದಿದ್ದರೆ, ನಾಲ್ಕು ತಿಂಗಳುಗಳ ನಂತರ ದಿಲ್ಲಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಂಪೂರ್ಣ ಭಿನ್ನ ಫಲಿತಾಂಶ ಬಂದಿತ್ತು. ನಾವು ಗುಜರಾತ್, ಹಿಮಾಚಲ ಪ್ರದೇಶ, ತೆಲಂಗಾಣ, ಮಧ್ಯ ಪ್ರದೇಶ, ಛತ್ತೀಸಗಢ ಸಹಿತ ಹಲವು ರಾಜ್ಯಗಳಲ್ಲಿ ಚುನಾವಣೆ ನಡೆಸಿದ್ದು ಪ್ರತಿ ಬಾರಿ ಭಿನ್ನ ಫಲಿತಾಂಶ ಬಂದಿದೆ'' ಎಂದು ಅವರು ಹೇಳಿದರು.

``ನಾವು ಇವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳನ್ನು ಬಳಸುವುದನ್ನು ಮುಂದುವರಿಸಲಿದ್ದೇವೆ. ರಾಜಕೀಯ ಪಕ್ಷಗಳೂ ಸೇರಿದಂತೆ ಸಂಬಂಧಿತ ಯಾರ ಟೀಕೆಗೂ ಚುನಾವಣಾ ಆಯೋಗ ತೆರೆದ ಮನಸ್ಸು ಹೊಂದಿದೆ, ಅದೇ ಸಮಯ ನಾವು ಯಾರಿಂದಲೂ ಒತ್ತಡಕ್ಕೊಳಗಾಗುವುದಿಲ್ಲ ಅಥವಾ ಬೆದರಿಕೆಗೊಳಗಾಗುವುದಿಲ್ಲ ಹಾಗೂ ಈ ವಿಧಾನವನ್ನು ತ್ಯಜಿಸಿ ಮತಪತ್ರಗಳಿಗೆ ಮೊರೆ ಹೋಗುವುದಿಲ್ಲ'' ಎಂದು ಅವರು ಸ್ಪಷ್ಟ ಪಡಿಸಿದರು.

ಇವಿಎಂಗಳನ್ನು ಹ್ಯಾಕ್ ಮಾಡಬಹುದೆಂಬ ಸಂಶಯಗಳನ್ನು ಅಲ್ಲಗಳೆದ ಅವರು ``ದೇಶದ ರಕ್ಷಣಾ ಇಲಾಖೆಗೆ ಸಾಕಷ್ಟು ಶ್ರಮಿಸಿರುವ ಎರಡು ಸಾರ್ವಜನಿಕ ರಂಗದ ಸಂಸ್ಥೆಗಳು ಅತ್ಯಂತ ಭದ್ರತೆಯಲ್ಲಿ ಇವಿಎಂಗಳನ್ನು ತಯಾರಿಸುತ್ತಿವೆ,'' ಎಂದು ಅವರು ಹೇಳಿದರು.

ಇವಿಎಂಗಳನ್ನು ಹ್ಯಾಕ್ ಮಾಡಬಹುದು ಹಾಗೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಇವಿಎಂ ಹ್ಯಾಕ್ ಮಾಡಿ ಗೆದ್ದಿತ್ತು ಎಂದು ಸ್ವಘೋಷಿತ ಸೈಬರ್ ತಜ್ಞನೊಬ್ಬ ಲಂಡನ್ ಹ್ಯಾಕಥಾನ್ ನಲ್ಲಿ ಹೇಳಿರುವ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತರ ಈ ಹೇಳಿಕೆ ಮಹತ್ವ ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News