42 ದಿನಗಳ ನಂತರ ಮೇಘಾಲಯ ಗಣಿಯಿಂದ ಒಬ್ಬ ಕಾರ್ಮಿಕನ ಮೃತದೇಹ ಹೊರಕ್ಕೆ

Update: 2019-01-24 14:16 GMT

ಶಿಲ್ಲಾಂಗ್,ಜ.24: ಮೇಘಾಲಯದ ಕಲ್ಲಿದ್ದಲು ಗಣಿಯಲ್ಲಿ ನಡೆದ ದುರಂತದಲ್ಲಿ ನಾಪತ್ತೆಯಾಗಿದ್ದ ಹದಿನೈದು ಮಂದಿ ಕಾರ್ಮಿಕರ ಪೈಕಿ ಮೊದಲ ಮೃತದೇಹವನ್ನು ಘಟನೆ ನಡೆದು ಒಂದು ತಿಂಗಳ ನಂತರ ರಕ್ಷಣಾ ತಂಡ ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ ಎಂದು ಆಂಗ್ಲ ಮಾಧ್ಯಮ ವರದಿ ಮಾಡಿದೆ.

ಮೇಘಾಲಯದ ಪೂರ್ವ ಜೈಂಟಿಯಾ ಜಿಲ್ಲೆಯಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ ಡಿಸೆಂಬರ್ 13ರಂದು ನೆರೆ ನೀರು ಪ್ರವೇಶಿಸಿದ ಕಾರಣ ಹದಿನೈದು ಕಾರ್ಮಿಕರು ಗಣಿಯೊಳಗೆ ಸಿಕ್ಕಿಹಾಕಿಕೊಂಡಿದ್ದರು. ಸಾಕಷ್ಟು ಹುಡುಕಾಟದ ನಂತರವೂ ನಾಪತ್ತೆಯಾಗಿದ್ದ ಕಾರ್ಮಿಕರನ್ನು ಪತ್ತೆ ಮಾಡಲು ರಕ್ಷಣಾ ತಂಡ ವಿಫಲವಾಗಿತ್ತು. ಅಂತಿಮವಾಗಿ ಓರ್ವ ಕಾರ್ಮಿಕನ ಕೊಳೆತ ಮೃತದೇಹ ಪತ್ತೆಯಾಗಿತ್ತು. ತಮ್ಮವರ ಮೃತದೇಹಗಳನ್ನು ಗಣಿಯಿಂದ ಹೊರತೆಗೆಯುವಂತೆ ಮೃತ ಕಾರ್ಮಿಕರ ಸಂಬಂಧಿಕರು ಆಗ್ರಹಿಸಿದ ಕಾರಣ ಸಿಕ್ಕಿ ಒಂದು ಮೃತದೇಹವನ್ನು ಹೊರತೆಗೆಯುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಮಂಗಳವಾರ ಭಾರತೀಯ ನೌಕಾಪಡೆಯ ಅಧಿಕಾರಿಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಮೃತದೇಹವನ್ನು ಮೇಲಕ್ಕೆತ್ತಲು ಪ್ರಯತ್ನಿಸಿದರೂ ದೇಹ ಛಿದ್ರಗೊಂಡ ಕಾರಣ ಕಾರ್ಯಾಚರಣೆ ಕೈಬಿಡಲಾಗಿತ್ತು.

ಗುರುವಾರ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆಯ ಇಬ್ಬರು ಅಧಿಕಾರಿಗಳು, ಮೂವರು ನೌಕಾಪಡೆಯ ಸಿಬ್ಬಂದಿ ಮತ್ತು ಓರ್ವ ಸ್ಥಳೀಯ ಆಸ್ಪತ್ರೆಯ ಉದ್ಯೋಗಿ ಎರಡು ತಂಡಗಳಲ್ಲಿ ಗಣಿಯ ಒಳಪ್ರವೇಶಿಸಿ 170 ಅಡಿ ಆಳದಿಂದ ಮೃತದೇಹವನ್ನು ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News