ಮೇಲ್ಜಾತಿಗೆ ಶೇ.10 ಮೀಸಲಾತಿ: ಜನಾಭಿಪ್ರಾಯವಿಲ್ಲದೇ ಮಸೂದೆ ಜಾರಿ ಸರಿಯಲ್ಲ- ಪ್ರೊ.ರವಿವರ್ಮ ಕುಮಾರ್

Update: 2019-01-25 14:55 GMT

ಬೆಂಗಳೂರು, ಜ.25: ಮೇಲ್ಜಾತಿ ಬಡವರಿಗೆ ಶೇ.10 ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಜನಾಭಿಪ್ರಾಯ ಸಂಗ್ರಹಿಸದೇ ಜಾರಿ ಮಾಡಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ ಎಂದು ಹಿರಿಯ ವಕೀಲ ಹಾಗೂ ಸಂವಿಧಾನ ತಜ್ಞ ಪ್ರೊ.ರವಿವರ್ಮ ಕುಮಾರ್ ಹೇಳಿದ್ದಾರೆ.

ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ಜೈಭೀಮ್ ಭವನದಲ್ಲಿ ಆಯೋಜಿಸಿದ್ದ ಮೇಲ್ಜಾತಿಗಳಿಗೆ ಶೇ.10 ಮೀಸಲಾತಿ ಸಂಬಂಧಿತ ಸಂವಿಧಾನದ 103ನೇ ತಿದ್ದುಪಡಿ ಕಾಯ್ದೆ ಕುರಿತು ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶದ ಮತ್ತು ರಾಜ್ಯದ ಆಡಳಿತ ಒಂದು ಜಾತಿಯ ಕಪಿಮುಷ್ಟಿಯಲ್ಲಿದೆ. ಮೇಲ್ಜಾತಿಯವರಿಗೆ ಮೀಸಲಾತಿ ಕಲ್ಪಿಸಲು ಮಸೂದೆಗೆ ತಿದ್ದುಪಡಿ ಮಾಡುವ ಸಂದರ್ಭದಲ್ಲಿ ಜನಾಭಿಪ್ರಾಯ ಸಂಗ್ರಹಿಸದೇ ಏಕಾಏಕಿ ಜಾರಿ ಮುಂದಾಗಿರುವುದು ಸರಿಯಲ್ಲ. ಅಲ್ಲದೆ, ಸಂಸತ್‌ನಲ್ಲಿ ಈ ಬಗ್ಗೆ ಸಮಗ್ರವಾಗಿಯೂ ಚರ್ಚೆಯಾಗಲಿಲ್ಲ ಎಂದು ತಿಳಿಸಿದರು.

ಬಡತನ, ನಿರುದ್ಯೋಗ ನಿವಾರಣೆಗಾಗಿ ಸಂವಿಧಾನದ 103ನೇ ಕಾಯ್ದೆಯನ್ನು ತಿದ್ದುಪಡಿ ಮಾಡಿಲ್ಲ. ಮೇಲ್ಜಾತಿಗಳಿಗೆ ಪ್ರಾತಿನಿಧ್ಯ ನೀಡುವ ಸಲುವಾಗಿ ತಿದ್ದುಪಡಿ ಮಾಡಲಾಗಿದೆ. ತಿದ್ದುಪಡಿ ಮಸೂದೆಗೆ ಎರಡೇ ದಿನದಲ್ಲಿ ಹಿಂದುಳಿದವರ ಪರ ಹೋರಾಡಿದ ರಾಜಕೀಯ ನಾಯಕರೂ ಸಹಮತ ವ್ಯಕ್ತಪಡಿಸಿದರು. ಇದೊಂದು ರಾಜಕೀಯ ಕುತಂತ್ರ. ಸಂವಿಧಾನವನ್ನೇ ಬುಡಮೇಲು ಮಾಡುವಂತಹ ನಿರ್ಧಾರ ಎಂದು ನುಡಿದರು. 103 ನೆ ತಿದ್ದುಪಡಿ ಸಂವಿಧಾನಕ್ಕೆ ಮಾಡಿರುವ ಅಪಚಾರ. ಮೇಲ್ವರ್ಗದವರಿಗೆ ಮೀಸಲಾತಿ ತರುವ ಸಂಬಂಧ ಪಿ.ವಿ.ನರಸಿಂಹರಾವ್ ಚಿಂತನೆ ನಡೆಸಿದ್ದರು. ಆದರೆ, ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಅದಕ್ಕೆ ಅನುಮೋದನೆ ನೀಡಿದ್ದಾರೆ. ಇದು ಹೀಗೆ ಬಿಟ್ಟರೆ ಮುಂದಿನ ದಿನಗಳಲ್ಲಿ ಶೇ.10 ರಷ್ಟು ಶೇ.20ಕ್ಕೆ ಏರಿಕೆಯಾಗುತ್ತದೆ. ಅಲ್ಲದೆ, ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿಯೂ ಮೀಸಲಾತಿ ಕೇಳುತ್ತಾರೆ. ಹೀಗಾಗಿ, ಎಚ್ಚರಿಕೆಯಿಂದಿರಬೇಕು ಎಂದರು.

ಕೇಂದ್ರ ಸರಕಾರ ಜಾರಿಗೆ ಮುಂದಾಗಿರುವ ಈ ತಿದ್ಧುಪಡಿ ಕಾಯ್ದೆಯನ್ನು ಎಲ್ಲರೂ ವಿರೋಧಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದ ಅವರು, ಮೀಸಲಾತಿ ಪಾಲುದಾರರಾಗಿರುವ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿಯೂ ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿ ಧ್ವನಿ ಎತ್ತದಿರುವುದು ವಿಪರ್ಯಾಸ ಎಂದು ಹೇಳಿದರು.

ಜಾಟ್, ಮರಾಠ ಸೇರಿದಂತೆ ಇನ್ನಿತರೆ ಮೇಲ್ಜಾತಿಗಳು ಮೀಸಲಾತಿ ನೀಡಬೇಕು ಎಂದು ಕೇಳುತ್ತಿವೆ. ಅದನ್ನು ಪುಷ್ಟೀಕರಿಸುವ ಸಲುವಾಗಿ ಕೇಂದ್ರ ಸರಕಾರ ಈ ನಿರ್ಣಯ ಕೈಗೊಂಡಿದೆ. ಪ್ರಧಾನಿ ಮೋದಿಗೆ ಇದು ಕೊನೆಯ ಅವಕಾಶ. ಹೀಗಾಗಿ, ಅವರು ಸಿಕ್ಕಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುತ್ತಾ ಮೇಲ್ವರ್ಗದ ಜನರ ಮನವೊಲಿಕೆಗೆ ಮುಂದಾಗಿದ್ದಾರೆ ಎಂದು ಆಪಾದಿಸಿದರು.

ಕೇಂದ್ರ ಸರಕಾರದ ಕಾರ್ಯದರ್ಶಿ ಸೇರಿದಂತೆ ಉನ್ನತ ಹುದ್ದೆಗಳಲ್ಲಿ ಸಾಮಾಜಿಕ ಪ್ರಾತಿನಿಧ್ಯವಿಲ್ಲ. ಎಲ್ಲವನ್ನೂ ಮೇಲ್ವರ್ಗದವರು ಕಬಳಿಸಿಕೊಂಡಿದ್ದಾರೆ. ಹೀಗಾಗಿ, ಅಲ್ಲಿಯೂ ಎಲ್ಲರಿಗೂ ಸಮಾನವಾಗಿ ಅವಕಾಶ ಸಿಗುವಂತಾಗಬೇಕು. ಅದಕ್ಕಾಗಿ ಅಲ್ಲಿ ಮೀಸಲಾತಿ ಜಾರಿ ಮಾಡುವ ಮೂಲಕ ಸಾಮಾಜಿಕ ನ್ಯಾಯ ಕಾಪಾಡಲು ಸಾಧ್ಯ ಎಂದು ಅವರು ತಿಳಿಸಿದರು.

ಸಂವಿಧಾನ ಬರುವುದಕ್ಕಿಂತ ಮೊದಲಿದ್ದ ವ್ಯವಸ್ಥೆಯತ್ತ ಮತ್ತೆ ಕೊಂಡೊಯ್ಯುತ್ತಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಯಾವುದೇ ಮೀಸಲಾತಿ ನೀಡದಿದ್ದರೆ ಅವರು ಮತ್ತೆ ಹಿಂದುಳಿಯುತ್ತಾರೆ. ಅವರಿಗೆ ಪ್ರಾತಿನಿಧ್ಯ ನೀಡಬೇಕು ಎಂದ ಅವರು, ಈ ತಿದ್ದುಪಡಿ ನೆಗಡಿ ಮತ್ತು ಕೆಮ್ಮು ಬಂದಿರುವ ರೋಗಿಯನ್ನು ಹೆರಿಗೆ ಆಸ್ಪತ್ರೆಗೆ ದಾಖಲು ಮಾಡಿಸಿದಂತಾಗಿದೆ. ಮೀಸಲಾತಿ ನೀಡಬೇಕಿದ್ದು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ. ಆದರೆ, ಆರ್ಥಿಕವಾಗಿ ಹಿಂದುಳಿದಿರುವವರಿಗೆ ನೀಡಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News