ಭ್ರಷ್ಟ ಅಧಿಕಾರಿಗಳಿಂದ ಪ್ರಾಥಮಿಕ ಶಿಕ್ಷಣ ವ್ಯವಸ್ಥೆ ದುರ್ಬಲ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

Update: 2019-01-25 16:33 GMT

ಬೆಂಗಳೂರು, ಜ.25: ಶಿಕ್ಷಣ ಇಲಾಖೆಯಲ್ಲಿರುವ ಭ್ರಷ್ಟ ಅಧಿಕಾರಿಗಳಿಂದಲೇ ಪ್ರಾಥಮಿಕ ಶಿಕ್ಷಣವಿಂದು ದುರ್ಬಲವಾಗಲು ಕಾರಣ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಆಪಾದಿಸಿದ್ದಾರೆ.

ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಕ್ಷನ್ ಎಯ್ಡ್ ಸಂಸ್ಥೆ ಆಯೋಜಿಸಿದ್ದ ಎಲ್ಲರಿಗೂ ಗುಣಮಟ್ಟದ ಹಾಗೂ ಸಮಾನ ಶಿಕ್ಷಣಕ್ಕಾಗಿ ಆಂದೋಲನ ಕುರಿತು ದುಂಡು ಮೇಜಿನ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶಿಕ್ಷಣ ಇಲಾಖೆಯಲ್ಲಿನ ಬಿಇಒ, ಡಿಡಿಪಿಐ ಸೇರಿದಂತೆ ಶೇ.90 ಕ್ಕೂ ಅಧಿಕ ಅಧಿಕಾರಿಗಳು ಭ್ರಷ್ಟರಾಗಿದ್ದಾರೆ. ಇವರು ನಿಯಮಗಳನ್ನು ಉಲ್ಲಂಘಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಉತ್ತೇಜಿಸುತ್ತಿದ್ದಾರೆ. ಖಾಸಗಿ ಶಾಲೆಗಳಿಗೆ ಅನುಮತಿ ನೀಡುವ ಸಂದರ್ಭದಲ್ಲಿ ತೋರುವ ಕಾಳಜಿಯನ್ನು, ಅಲ್ಲಿ ಸಮಸ್ಯೆ ಎದುರಾದಾಗ ತೋರುವುದಿಲ್ಲ ಎಂದ ಅವರು, ಭ್ರಷ್ಟರಿಗೆ ಕೆಲವು ರಾಜಕಾರಣಿಗಳೂ ಬೆಂಬಲ ನೀಡುತ್ತಿದ್ದಾರೆ ಎಂದು ದೂರಿದರು.

ಪರಿಸರ ಭಾಷೆ(ಮಾತೃಭಾಷೆ)ಯ ಮೂಲಕ ಶಿಕ್ಷಣ ನೀಡುತ್ತಾ ಎಷ್ಟು ಭಾಷೆಗಳನ್ನು ಬೇಕಾದರೂ ಕಲಿಸಲು ಅವಕಾಶವಿದೆ. ಆದರೆ, ಇಂದು ಭಾಷೆಯನ್ನು ಸರಕಾಗಿಸಿಕೊಂಡಿರುವ ಶಿಕ್ಷಣ ಸಂಸ್ಥೆಗಳು ಶಿಕ್ಷಣವನ್ನು ವ್ಯಾಪಾರದ ದಂಧೆಯನ್ನಾಗಿ ಮಾಡಿಕೊಂಡಿವೆ. ಖಾಸಗಿ ಶಾಲೆಗಳ ನಡುವೆ ಸರಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಕುಸಿಯಲು ಸರಕಾರ ಪ್ರಾಥಮಿಕ ಶಿಕ್ಷಣ ನಿರ್ಲಕ್ಷಿಸಿದ್ದೇ ಕಾರಣವಾಗಿದೆ ಎಂದರು.

ಸರಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಸರಕಾರಕ್ಕೆ ವರದಿಯೊಂದನ್ನು ಸಲ್ಲಿಸಿದ್ದೆವು. ಆದರೆ, ಇದುವರೆಗೂ ಜಾರಿಯಾಗಿಲ್ಲ ಎಂದ ಅವರು, ಸರಕಾರದ ಮಟ್ಟದ ಅಧಿಕಾರಿಗಳಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಬಲಿಷ್ಠ ಮಾಡಲು ಆಸಕ್ತಿಯಿಲ್ಲ. 2015 ರಲ್ಲಿ ರಾಜ್ಯದ ಎಲ್ಲ ಖಾಸಗಿ ಶಾಲೆಗಳಲ್ಲಿ ಕನ್ನಡ ಒಂದು ಭಾಷೆಯಾಗಿ ಕಲಿಸಬೇಕು ಎಂದು ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, 2017 ರವರೆಗೂ ಅದನ್ನು ಜಾರಿ ಮಾಡಲು ಆಸಕ್ತಿ ತೋರಿಸಿಲ್ಲ. ಅಂದರೆ ಉನ್ನತ ಅಧಿಕಾರಿಗಳ ಮನಸ್ಥಿತಿಯನ್ನು ಇದು ತೋರಿಸುತ್ತದೆ ಎಂದು ಹೇಳಿದರು.

ಬೆಂಗಳೂರು ನಗರದಲ್ಲಿ ಶೇ.25 ಖಾಸಗಿ ಶಾಲೆಗಳು ಕನ್ನಡ ಮಾತಾಡಿದರೆ ದಂಡ ಹಾಕುತ್ತಾರೆ. ಅಂದರೆ ನಾವು ಯಾವ ವ್ಯವಸ್ಥೆಯಲ್ಲಿದ್ದೇವೆ. ಸರಕಾರದ ಆದೇಶ ಉಲ್ಲಂಘನೆ ಮಾಡುವ ಖಾಸಗಿ ಶಾಲೆಗಳ ಮೇಲೆ ಕ್ರಮಕ್ಕೆ ಯಾಕೆ ಯಾರು ಮುಂದಾಗುತ್ತಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಖಾಸಗಿ ಶಿಕ್ಷಣ ವ್ಯವಸ್ಥೆಯನ್ನು ಪ್ರೋತ್ಸಾಹಿಸುತ್ತಿವೆ. ಅದರ ಭಾಗವಾಗಿ ಸರಕಾರಗಳು ಭಾಷಾ ಪರವಾಗಿರುವ ಯಾವುದೇ ನೀತಿಗಳನ್ನು ಜಾರಿಗೆ ಹಿಂದೇಟು ಹಾಕುತ್ತಿದೆ. ಕಳೆದ 30 ವರ್ಷಗಳ ಹಿಂದಿನ ಸರೋಜಿನಿ ಮಹಿಷಿ ವರದಿ ಜಾರಿಮಾಡದೇ ನಿರ್ಲಕ್ಷಿಸಿರುವುದು ಇದಕ್ಕೆ ನಿದರ್ಶನ ಎಂದು ಹೇಳಿದರು.

ಆಕ್ಷನ್ ಎಯ್ಡ್ ಸಂಸ್ಥೆಯ ಮುಖ್ಯಸ್ಥೆ ನಂದಿನಿ ಮಾತನಾಡಿ, 18 ವರ್ಷದ ಎಲ್ಲರನ್ನೂ ಮಕ್ಕಳು ಎಂದು ಘೋಷಿಸಿದ್ದೇವೆ. ಆದರೆ, ಶಿಕ್ಷಣದಲ್ಲಿ 14 ವರ್ಷಕ್ಕಷ್ಟೇ ಸೀಮಿತಗೊಳಿಸಿರುವುದು ಸರಿಯಲ್ಲ. ಇದನ್ನು 18 ವರ್ಷದವರೆಗೆ ವಿಸ್ತರಿಸಬೇಕು. ಈ ಸಂಬಂಧ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ತಿದ್ದುಪಡಿ ಅಗತ್ಯವಿದೆ ಎಂದು ಆಗ್ರಹಿಸಿದರು.

ಕೇಂದ್ರೀಯ ಶಾಲೆಗಳಲ್ಲಿ ವಿಶಾಲವಾದ ವಾತಾವರಣ, ಗುಣಮಟ್ಟ ಶಿಕ್ಷಣ, ಅಗತ್ಯ ಶಿಕ್ಷಕರು ಎಲ್ಲವೂ ಸಿಗುತ್ತದೆ. ಅದೇ ರೀತಿ ಸರಕಾರಿ ಶಾಲೆಗಳನ್ನು ಕೇಂದ್ರೀಯ ಮಾದರಿಯಲ್ಲಿ ಮೇಲ್ದರ್ಜೆಗೇರಿಸಬೇಕು. ಅಲ್ಲದೆ, ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಸಂಬಂಧಿಸಿದ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಸಲ್ಲಿಸಿರುವ ವರದಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಶಿಕ್ಷಣ ನೀಡುವುದು ಸರಕಾರಗಳ ಜವಾಬ್ದಾರಿಯಾಗಬೇಕು ಹಾಗೂ ಖಾಸಗಿ ಶಾಲೆಗಳನ್ನು ರಾಷ್ಟ್ರೀಕರಣಕ್ಕೆ ಒಳಪಡಿಸಬೇಕು. ಶಿಕ್ಷಣದ ಮಾಧ್ಯಮ ಪೋಷಕರ ಆಯ್ಕೆ ಎಂಬ ಸುಪ್ರೀಂಕೋರ್ಟ್‌ನ ತೀರ್ಪು ಭಾಷಾವಾರು ಪ್ರಾಂತ್ಯದ ಉದ್ದೇಶವನ್ನು ತಲೆಕೆಳಗಾಗಿಸಿದೆ.

-ಎಸ್.ಜಿ.ಸಿದ್ದರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News