ಸಹಸ್ರಾರು ದೇಶಪ್ರೇಮಿಗಳ ಕೊಂದ ವಿಕ್ಟೋರಿಯಾ ರಾಣಿಗೆ ಜೈ ಎಂದವರು!

Update: 2019-01-26 05:10 GMT

ಮೊನ್ನೆ ಜನವರಿ 23ರಂದು ದೇಶವಿಡೀ ನೇತಾಜಿ ಸುಭಾಶ್ಚಚಂದ್ರ ಬೋಸ್‌ರನ್ನು ನೆನೆಯುತ್ತಿರುವ ಸಂದರ್ಭ, ಹೊಸದಿಲ್ಲಿಯ ಜಂತರ್ ಮಂತರ್‌ನಲ್ಲಿ ಸಂಘಪರಿವಾರದ ಭಾಗವಾಗಿರುವ ಹಿಂದೂ ಸೇನಾ ಸಂಘಟನೆಯೊಂದು ಬ್ರಿಟಿಷ್ ರಾಣಿ ವಿಕ್ಟೋರಿಯಾ ಅವರನ್ನು ಸ್ಮರಿಸಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಸುಮಾರು 300 ವರ್ಷಗಳಿಗೂ ಹೆಚ್ಚು ಕಾಲ ಈ ದೇಶವನ್ನು ಆಳಿ, ಈ ದೇಶದ ಅಪಾರ ಸಂಪತ್ತನ್ನು ಬ್ರಿಟನ್‌ಗೆ ಹೊತ್ತೊಯ್ಯಲು ಕಾರಣವಾದ ವಿಕ್ಟೋರಿಯಾ ಸಂಘಪರಿವಾರಕ್ಕೆ ‘ಪ್ರಾತಃಸ್ಮರಣೀಯ’ವಾದುದು ಹೇಗೆ ಎನ್ನುವ ಪ್ರಶ್ನೆ ಹಲವರನ್ನು ಕಾಡಿತು. ಹಿಂದೂ ಸೇನಾ ಸಂಘಟನೆಯ ಪ್ರಕಾರ ಮೊಗಲರ ಕೈಯಿಂದ ಈ ದೇಶವನ್ನು ರಕ್ಷಿಸಿದ್ದು ರಾಣಿ ವಿಕ್ಟೋರಿಯಾಳಂತೆ. ವಿವಿಧ ರಾಜರ ಕೈಯಲ್ಲಿ ಹಂಚಿ ಹೋಗಿದ್ದ ಈ ದೇಶವನ್ನು ಮತ್ತೆ ಒಂದುಗೂಡಿಸಿದ್ದು ರಾಣಿ ವಿಕ್ಟೋರಿಯ ಆಗಿರುವುದರಿಂದ ಅವರ 118ನೇ ಪುಣ್ಯ ತಿಥಿಯನ್ನು ಹಿಂದೂ ಸೇನಾ ಸಂಘಟನೆ ಆಚರಿಸಿತು.

್ಢಒಂದು ದಿಕ್ಕಿನಲ್ಲಿ ಹಿಂದೂ ಸೇನಾ ಸಂಘಟನೆಯ ಆಚರಣೆಯನ್ನು ನಾವು ಸಮರ್ಥಿಸಬಹುದು. ವಿಚ್ಛಿದ್ರವಾಗಿದ್ದ ಈ ಭಾರತವನ್ನು ಒಂದು ಗೂಡಿಸಲು ಬ್ರಿಟಿಷರಲ್ಲದೆ ಇನ್ಯಾವ ಶಕ್ತಿಗೂ ಅಸಾಧ್ಯವಾಗಿತ್ತು. ಇನ್ನಷ್ಟು ವಿಮರ್ಶಾ ದೃಷ್ಟಿ ಕೋನದಿಂದ ಅಂದಿನ ಭಾರತವನ್ನು ಕಲ್ಪಿಸಿಕೊಳ್ಳುವುದೇ ಆಗಿದ್ದರೆ, ಮೊಗಲರು ಮತ್ತು ಬ್ರಿಟಿಷರು ಈ ದೇಶಕ್ಕೆ ಕಾಲಿಡುವ ಮೊದಲೇ ಈ ದೇಶದ ಶೇ. 70ರಷ್ಟು ಜನರು ಗುಲಾಮರಾಗಿಯೇ ಬದುಕುತ್ತಿದ್ದರು. ತಮ್ಮ ದೇಶದಲ್ಲಿ ತಮ್ಮದೇ ಜನರಿಂದ ಅವರು ಶೋಷಣೆಗೊಳಗಾಗುತ್ತಿದ್ದರು. ಕೆರೆಯ ನೀರನ್ನು ಮುಟ್ಟುವ ಹಕ್ಕು, ಶಿಕ್ಷಣದ ಹಕ್ಕು, ಸಾರ್ವಜನಿಕ ರಸ್ತೆಯಲ್ಲಿ ಮುಕ್ತವಾಗಿ ಓಡಾಡುವ ಹಕ್ಕು ಈ ಬಹುಸಂಖ್ಯೆಯ ಜನರಿಗಿರಲಿಲ್ಲ. ಬ್ರಿಟಿಷರಿಂದಾಗಿ ಈ ದೇಶದಲ್ಲಿ ಇಂಗ್ಲಿಷ್ ಶಿಕ್ಷಣ ಜಾರಿಗೊಂಡಿತು. ದಲಿತರೂ ಶಿಕ್ಷಣವನ್ನು ಪಡೆಯುವಂತಾಯಿತು. ಸತಿಸಹಗಮನ, ಬಾಲ್ಯವಿವಾಹ ಮೊದಲಾದ ಅನಿಷ್ಟಗಳು ಈ ದೇಶದಿಂದ ತೊಲಗಲು ಮೊಗಲರು ಮತ್ತು ಬ್ರಿಟಿಷರೇ ಕಾರಣ. ಆದರೆ ಇದೇ ಸಂದರ್ಭದಲ್ಲಿ ಈ ದೇಶದ ಸಂಪನ್ಮೂಲಗಳನ್ನು ಬ್ರಿಟಿಷರು ಯಥೇಚ್ಛವಾಗಿ ದೋಚಿ ತಮ್ಮ ನಾಡಿಗೆ ಕೊಂಡೊಯ್ದರು. ಮೊಗಲರು ಈ ದೇಶದ ಮೇಲೆ ದಾಳಿ ನಡೆಸಿದರಾದರೂ ಅವರು ಬಳಿಕ ಈ ದೇಶವಾಸಿಯಾಗಿ ಇಲ್ಲಿಯೇ ಉಳಿದರು. ರಜಪೂತ, ಠಾಕೂರ್ ಮೊದಲಾದ ಮೇಲ್ಜಾತಿಯ ಪಾಳೆಗಾರರಿಂದ ಈ ದೇಶವನ್ನು ರಕ್ಷಿಸಿದ್ದು ಮೊಗಲರು.

ಈ ದೇಶದಿಂದ ಪಡೆದುದನ್ನು ಅವರು ಈ ದೇಶಕ್ಕೇ ಅರ್ಪಿಸಿದರು. ಅದನ್ನೆಂದಿಗೂ ಅವರು ಪರದೇಶಕ್ಕೆ ಸಾಗಿಸಲಿಲ್ಲ. ಕಲೆ, ಸಂಗೀತ, ಆಹಾರ, ಶಿಕ್ಷಣ ಎಲ್ಲ ವಿಭಾಗಗಳಲ್ಲೂ ಅವರು ನೀಡಿದ ಕೊಡುಗೆ ಈ ದೇಶವನ್ನು ವಿಶ್ವ ಗಮನಿಸುವಂತೆ ಮಾಡಿತು. ವಿಕ್ಟೋರಿಯಾ ರಾಣಿ ಇಂಗ್ಲೆಂಡ್ ವಾಸಿ. ಆಕೆಗೆ ಭಾರತೀಯರು ತೊತ್ತಿನ ಗುಲಾಮರು. ಇಂದು ಭಾರತ ಬ್ರಿಟಿಷರಿಂದ ಮುಕ್ತಿ ಹೊಂದಿ ಪ್ರಜಾಸತ್ತಾತ್ಮಕ ದೇಶವಾಗಲು ಲಕ್ಷಾಂತರ ಭಾರತೀಯರು ಪ್ರಾಣ ಅರ್ಪಿಸಿದ್ದಾರೆ. ಈ ದೇಶವನ್ನು ಬ್ರಿಟಿಷರು ಗೆದ್ದುದು ತಮ್ಮ ಸ್ವಾರ್ಥಕ್ಕಾಗಿ. ವಿಕ್ಟೋರಿಯಾ ರಾಣಿ ಎಂದಿಗೂ ಈ ದೇಶಕ್ಕೆ ಸ್ವಾತಂತ್ರವನ್ನು ಕೊಡಲು ಸಿದ್ಧಳಾಗಿರಲಿಲ್ಲ. ಭಾರತೀಯರ ಕುರಿತಂತೆ ಆಕೆಗೆ ಅನುಕಂಪವೂ ಇರಲಿಲ್ಲ. ಭಾರತೀಯರು ಒಂದಾಗಿ ಸ್ವತಂತ್ರ ದೇಶಕ್ಕಾಗಿ ಹೋರಾಡದೇ ಇದ್ದಿದ್ದರೆ ನಮಗೆ ಸ್ವಾತಂತ್ರ ಸಿಗುತ್ತಲೂ ಇರಲಿಲ್ಲ. ಆದರೆ ದುರದೃಷ್ಟವಶಾತ್ ಈ ದೇಶದ ಸ್ವಾತಂತ್ರ ಹೋರಾಟದಲ್ಲಿ ಹಿಂದೂ ಮಹಾ ಸಭಾ ಭಾಗವಹಿಸಲಿಲ್ಲ. ಬದಲಿಗೆ ಅದು ನೇರವಾಗಿ ಬ್ರಿಟಿಷರ ಜೊತೆಗೆ ಕೈ ಜೋಡಿಸಿತು. ವಿನಾಯಕ ದಾಮೋದರ ಸಾವರ್ಕರ್‌ರಂತಹ ಹಿಂದುತ್ವವಾದಿ ನಾಯಕರು ಬ್ರಿಟಿಷರೊಂದಿಗೆ ಕ್ಷಮೆಯಾಚಿಸಿ, ಜೀವಮಾನದುದ್ದಕ್ಕೂ ಬ್ರಿಟಿಷರ ಸೇವೆ ಮಾಡುವುದಾಗಿ ಬರೆದು ಕೊಟ್ಟರು. ಸುಭಾಶ್ಚಂದ್ರ ಬೋಸ್ ಬ್ರಿಟಿಷರ ವಿರುದ್ಧ ಸೇನೆಯನ್ನು ಕಟ್ಟಿದಾಗ, ಹಿಂದೂ ಮಹಾಸಭಾ ಸುಭಾಶ್ಚಂದ್ರ ಬೋಸರ ಜೊತೆಗೆ ನಿಲ್ಲದೆ ಬ್ರಿಟಿಷರ ಜೊತೆಗೆ ನಿಂತಿತು. ಸಾವರ್ಕರ್ ತಾವು ಮಾಡಿದ ಹಲವು ಭಾಷಣಗಳಲ್ಲಿ ‘‘ಹಿಂದೂಗಳು ಬ್ರಿಟಿಷ್ ಸೇನೆಗೆ ಹೆಚ್ಚು ಹೆಚ್ಚು ಸೇರಬೇಕು’’ ಎಂದು ಪದೇ ಪದೇ ಕರೆಕೊಡುತ್ತಿದ್ದರು. ಸುಭಾಶ್ಚಂದ್ರ ಬೋಸರಿಗೆ ಹಿಂದೂ ಮಹಾಸಭಾ ದ್ರೋಹ ಎಸಗಿತು. ಹೀಗಿರುವಾಗ, ಸಂಘಪರಿವಾರ ವಿಕ್ಟೋರಿಯಾ ರಾಣಿಯನ್ನು ಸ್ಮರಿಸುವುದು ಸಹಜವೇ ಆಗಿದೆ.

ಆದರೆ ಸಂಘಪರಿವಾರದ ಮುಖಂಡರು ಒಂದನ್ನು ನೆನಪಿಟ್ಟುಕೊಳ್ಳಬೇಕು. ವಿಕ್ಟೋರಿಯಾ ರಾಣಿಯ ಸೇನೆಯ ವಿರುದ್ಧ ಹೋರಾಡಿದವರು ಯಾರು? ಕಿತ್ತೂರು ಚೆನ್ನಮ್ಮ, ಟಿಪ್ಪುಸುಲ್ತಾನ್, ಝಾನ್ಸಿ ರಾಣಿ, ನಾನಾ ಸಾಹೇಬ್, ತಾಂತ್ಯಾಟೋಪೆ ಇವರೆಲ್ಲರನ್ನೂ ಕೊಂದಿರುವುದು ವಿಕ್ಟೋರಿಯಾ ರಾಣಿಯ ಸೇನೆ. ಅಷ್ಟೇ ಏಕೆ? ಜಲಿಯನ್ ವಾಲಾಬಾಗ್‌ನಲ್ಲಿ ಸಹಸ್ರಾರು ಭಾರತೀಯರನ್ನು ಕೊಂದಿರುವುದು, ಭಗತ್‌ಸಿಂಗ್‌ರಂತಹ ದೇಶಪ್ರೇಮಿಗಳನ್ನು ಗಲ್ಲಿಗೇರಿಸಿರುವುದು, ಲಾಲಾಲಜಪತ ರಾಯ್‌ರನ್ನು ಲಾಠಿಯಿಂದ ಥಳಿಸಿ ಹತ್ಯೆಗೈದಿರುವುದು ವಿಕ್ಟೋರಿಯಾ ರಾಣಿಯ ಆಡಳಿತ ಎನ್ನುವುದು ಸಂಘಪರಿವಾರಕ್ಕೆ ಗೊತ್ತಿಲ್ಲದ ಸಂಗತಿಯೇನೂ ಅಲ್ಲ. ಗಾಂಧೀಜಿಯನ್ನು ಕೊಂದ ಗೋಡ್ಸೆಯನ್ನು ಗೌರವಿಸುವ ಈ ಜನರು ಈ ದೇಶದ ಲಕ್ಷಾಂತರ ದೇಶಪ್ರೇಮಿಗಳನ್ನು ಕೊಂದು ಹಾಕಿದ ವಿಕ್ಟೋರಿಯಾರ ಕುರಿತಂತೆ ಆಳದಲ್ಲಿ ಪ್ರೀತಿ ಹೊಂದಿರುವುದು ಸಹಜವೇ ಆಗಿದೆ. ಆದರೆ ಬಹಿರಂಗವಾಗಿ ಅದನ್ನು ತೋರ್ಪಡಿಸುವ ಧೈರ್ಯ ಅವರಿಗಿರಲಿಲ್ಲ.

ಇದೀಗ ಜಂತರ್ ಮಂತರ್‌ನಲ್ಲಿ ವಿಕ್ಟೋರಿಯಾ ರಾಣಿಯನ್ನು ಸ್ಮರಿಸುವ ಮೂಲಕ ಬಹಿರಂಗವಾಗಿಯೇ ತನ್ನ ಪ್ರಾತಃಸ್ಮರಣೀಯರು ಯಾರು ಎನ್ನುವುದನ್ನು ಘೋಷಿಸಿದೆ. ಇದರಿಂದ ವಿಕ್ಟೋರಿಯಾ ರಾಣಿಗೆ ಗೌರವ ಸಿಕ್ಕಿತೋ, ಬಿಟ್ಟಿತೋ ಆದರೆ ಕಿತ್ತೂರು ಚೆನ್ನಮ್ಮರಿಂದ ಹಿಡಿದು ಭಗತ್ ಸಿಂಗ್‌ವರೆಗಿನ ಲಕ್ಷಾಂತರ ಮಂದಿ ದೇಶಪ್ರೇಮಿಗಳನ್ನು ಸಂಘಪರಿವಾರ ಅವಮಾನಿಸಿದೆೆ. ಇದು ದೇಶದ್ರೋಹಕ್ಕೆ ಸಮವಾಗಿದೆ. ‘ದೇಶ ವಿರೋಧಿ’ ಘೋಷಣೆಗಳನ್ನು ಕೂಗಿದರೆಂದು ಇತ್ತೀಚೆಗೆ ಕನ್ಹಯ್ಯೆ ಮತ್ತು ಅವರ ಗೆಳೆಯರ ಮೇಲೆ ಸರಕಾರ ದೇಶದ್ರೋಹಿ ಪ್ರಕರಣವನ್ನು ದಾಖಲಿಸಿತು. ಆದರೆ ಸುಭಾಶ್ಚಂದ್ರ ಬೋಸ್ ಅವರ ಜಯಂತಿಯ ಹಿಂದಿನ ದಿನ ಬಹಿರಂಗವಾಗಿಯೇ ವಿಕ್ಟೋರಿಯಾ ರಾಣಿಯ ಪರವಾಗಿ ಘೋಷಣೆಗಳನ್ನು ಕೂಗಿ ಈ ದೇಶದ ಮಹಾನ್ ವೀರರಿಗೆ ಅವಮಾನ ಮಾಡಿದ ಸಂಘಪರಿವಾರದ ಕಾರ್ಯಕರ್ತರ ಮೇಲೆ ಯಾವ ಮೊಕದ್ದಮೆಯೂ ದಾಖಲಾಗಿಲ್ಲ. ಬ್ರಿಟಿಷರ ಪರವಾಗಿ ನಿಂತು ಸ್ವಾತಂತ್ರ ಹೋರಾಟಗಾರರ ಬೆನ್ನಿಗೆ ಇರಿದ ಸಂಘಟನೆಯೊಂದು ನಿಯಂತ್ರಿಸುತ್ತಿರುವ ಸರಕಾರದಿಂದ ಸೂಕ್ತ ಕ್ರಮವನ್ನು ನಿರೀಕ್ಷಿಸುವುದೂ ಅಸಾಧ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News