ಸಿದ್ಧಗಂಗಾ ಶ್ರೀಗೆ ಭಾರತ ರತ್ನ ನೀಡದೆ ಪ್ರಶಸ್ತಿಯನ್ನು ಅಪಮೌಲ್ಯಕ್ಕೀಡು ಮಾಡಿದ ಕೇಂದ್ರ ಸರ್ಕಾರ: ಎಂ.ಬಿ.ಪಾಟೀಲ್

Update: 2019-01-26 11:47 GMT

ಬೆಂಗಳೂರು, ಜ.26: ‘ಸೇವೆ’ ಎಂಬ ಪದಕ್ಕೆ ಹೊಸ ಅರ್ಥ ನೀಡಿರುವ ಸಿದ್ಧಗಂಗಾ ಮಠದ ಪೀಠಾಧಿಪತಿಯಾಗಿದ್ದ ಡಾ.ಶಿವಕುಮಾರಸ್ವಾಮಿಯವರಿಗೆ ಪ್ರಸಕ್ತ ಸಾಲಿನ ದೇಶದ ಅತ್ಯುನ್ನತ ಭಾರತ ರತ್ನ ನೀಡದೆ ಕೇಂದ್ರ ಸರಕಾರ ಪ್ರಶಸ್ತಿಯನ್ನು ಅಪಮೌಲ್ಯಕ್ಕೆ ಈಡು ಮಾಡಿದೆ ಎಂದು ರಾಜ್ಯ ಗೃಹ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.

ಈ ಬಗ್ಗೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು, ಕರ್ನಾಟಕದ ಪ್ರತಿಷ್ಠಿತ ಮಠಗಳಲ್ಲಿ ಶ್ರೇಷ್ಠ ಸ್ಥಾನದಲ್ಲಿರುವ ತುಮಕೂರಿನ ಸಿದ್ಧಗಂಗಾ ಮಠ ತನ್ನ ಸೇವೆಯಿಂದ ವಿಶ್ವದೆಲ್ಲೆಡೆ ಮನ್ನಣೆ ಪಡೆದಿದೆ. ಶ್ರೀ ಮಠದ ಪಿಠಾಧೀಪತಿಯಾಗಿದ್ದ ತ್ರಿವಿಧ ದಾಸೋಹಿ, ಕರ್ನಾಟಕ ರತ್ನ ಡಾ.ಶಿವಕುಮಾರ ಮಹಾಸ್ವಾಮಿ, ಇಂದಿನ ಕಾಲದಲ್ಲಿ ಪವಾಡ ಎನ್ನುವಂತೆ 111 ವರ್ಷಗಳ ಕಾಲ ಬದುಕಿ ಈ ನಾಡಿನ ಅಮೂಲ್ಯ ಸೇವೆ ಮಾಡಿ, 4 ದಿನಗಳ ಹಿಂದಷ್ಟೇ ನಿಧನರಾಗಿದ್ದಾರೆ.

ಡಾ.ಶಿವಕುಮಾರಸ್ವಾಮಿ ಸಿದ್ಧಗಂಗಾ ಮಠದ ಪೀಠಾಧಿಪತಿಗಳಾಗಿ, ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದಲ್ಲದೇ, ಬಡ ಮಕ್ಕಳಿಗಾಗಿ ಉಚಿತ ಪ್ರಸಾದ ನಿಲಯ ಆರಂಭಿಸಿ, ಹಳ್ಳಿ-ಹಳ್ಳಿಗೆ ಸಂಚರಿಸಿ ಭಿಕ್ಷೆಯೆತ್ತಿ ಸುಮಾರು 90ವರ್ಷಗಳ ಕಾಲ ನಿರಂತರವಾಗಿ ಲಕ್ಷಾಂತರ ಶಾಲಾ ಮಕ್ಕಳಿಗೆ ಅಕ್ಷರ, ಅನ್ನ, ಆಶ್ರಯ ನೀಡಿದ್ದು, ಈ ಮೂಲಕ ಇವರು ‘ಸೇವೆ’ ಎಂಬ ಅಕ್ಷರಗಳಿಗೆ ಹೊಸ ಅರ್ಥ ತಂದಿದ್ದಾರೆ.

ಕೇಂದ್ರ ಸರ್ಕಾರದಿಂದ ಪದ್ಮವಿಭೂಷಣ, ಕರ್ನಾಟಕ ಸರ್ಕಾರದಿಂದ ಕರ್ನಾಟಕ ರತ್ನ ಪ್ರಶಸ್ತಿಗೆ ಭಾಜನಾಗಿರುವ ಇವರಿಗೆ, ತಮ್ಮ ಜೀವಮಾನ ಸೇವಾ ಕಾರ್ಯಕ್ಕೆ ಕೇಂದ್ರ ಸರ್ಕಾರವೇ ಸ್ವಯಂ ಪ್ರೇರಿತವಾಗಿ ಭಾರತ ರತ್ನ ಪ್ರಶಸ್ತಿಯನ್ನು ನೀಡಬೇಕಾಗಿತ್ತು. 

ಕರ್ನಾಟಕ ರಾಜ್ಯದಿಂದ ಈ ಕುರಿತ ಪ್ರಸ್ತಾವವನ್ನು ಸಲ್ಲಿಸಿದ್ದಾಗಿಯೂ ಹಾಗೂ ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ಹಾಗೂ ರಾಷ್ಟ್ರದ ಹಲವಾರು ಗಣ್ಯರು, ಸ್ವಾಮೀಜಿಯವರು, ವಿವಿಧ ಕ್ಷೇತ್ರದ ಪ್ರಮುಖರು ಸಿದ್ಧಗಂಗಾ ಡಾ.ಶಿವಕುಮಾರ ಸ್ವಾಮೀಜಿಯವರಿಗೆ ದೇಶದ ಅತ್ಯುನ್ನತ ಭಾರತ ರತ್ನ ಪ್ರಶಸ್ತಿಯನ್ನು ನೀಡಬೇಕೆಂದು ಕಾಲ-ಕಾಲಕ್ಕೆ ವಿವಿಧ ವೇದಿಕೆಗಳಲ್ಲಿ ವಿನಂತಿಸಿಕೊಂಡಾಗಲೂ ಸಹ ಇದೀಗ ಪ್ರಕಟಿಸಿದ ಭಾರತ ರತ್ನ ಪ್ರಶಸ್ತಿಯಲ್ಲಿ ಶ್ರೀಗಳ ಹೆಸರಿಲ್ಲದಿರುವುದು ಇಡೀ ನಾಡಿಗೆ ದಿಗಿಲು ಬಡಿದಂತಾಗಿದೆ.

ತಮ್ಮ ಸೇವಾ ಕಾರ್ಯಗಳ ಮೂಲಕವೇ ಕೊಟ್ಯಾಂತರ ಜನರ ಹೃದಯಲ್ಲಿ ಶಾಶ್ವತವಾಗಿ ಸ್ಥಾನ ಪಡೆದುಕೊಂಡಿರುವ ಸಿದ್ಧಗಂಗಾ ಶ್ರೀಗಳಿಗೆ ಮರಣೋತ್ತರವಾಗಿಯಾದರೂ ಭಾರತ ರತ್ನ ಪ್ರಶಸ್ತಿ ನೀಡಿಯೇ ನೀಡುತ್ತಾರೆ ಎಂದು ನಾವೆಲ್ಲ ಭಾವಿಸಿದ್ದೇವು. ಈ ಕುರಿತು ಜ್ಯಾತ್ಯಾತೀತವಾಗಿ, ಪಕ್ಷಾತೀತವಾಗಿ ಸರ್ವರೂ ವಿನಂತಿ ಮಾಡಿಕೊಂಡಿದ್ದರು ನರೇಂದ್ರ ಮೋದಿಯ ನೇತೃತ್ವದ ಕೇಂದ್ರ ಸರ್ಕಾರ ಸಿದ್ಧಗಂಗಾ ಡಾ.ಶಿವಕುಮಾರ ಮಹಾಸ್ವಾಮಿಗಳವರೆಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡದೇ ಇರುವ ಮೂಲಕ ಕರ್ನಾಟಕದ ಕುರಿತು ತನ್ನ ಅಸಡ್ಡೆಯನ್ನು ಮುಂದುವರಿಸಿದೆ. 

ಸ್ವಾತಂತ್ರ್ಯಪೂರ್ವದಿಂದಲೂ ಸರ್ಕಾರ ಮಾಡಲಾರದ ಕೆಲಸವನ್ನು ತಮ್ಮ ಸೇವಾ ಸಂಸ್ಥೆಗಳ ಮೂಲಕ ಈ ಭಾಗದಲ್ಲಿ ಅಕ್ಷರದ ಜಾಗೃತಿಯನ್ನು ಮೂಡಿಸಿದ, ಲಕ್ಷಾಂತರ ಬಡ ಶಾಲಾ ಮಕ್ಕಳಿಗೆ ಆಶ್ರಯ ನೀಡಿದ ತನ್ಮೂಲಕ ಈ ಭಾಗವನ್ನು ಬೆಳಗಿದ ಸ್ವಾಮೀಜಿಯ ಸೇವೆಯನ್ನು ಅಪಮಾನಿಸುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. 

ಈ ಮೂಲಕ ಸರ್ಕಾರ ಈ ದೇಶದ ಅತ್ಯುನ್ನತ ಭಾರತ ರತ್ನ ಪ್ರಶಸ್ತಿಯನ್ನು ಅಪಮೌಲ್ಯಕ್ಕೆ ಈಡು ಮಾಡಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಪ್ರಕಟನೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News