ಬಿಜೆಪಿಯವರು ಒತ್ತಡ ಹೇರಿದ್ದರೆ ಶ್ರೀಗಳಿಗೆ 'ಭಾರತ ರತ್ನ' ಸಿಗುತ್ತಿತ್ತು: ಪ್ರಿಯಾಂಕ್ ಖರ್ಗೆ

Update: 2019-01-26 12:56 GMT

ಕಲಬುರಗಿ, ಜ. 26: ಸಿದ್ದಗಂಗಾ ಶ್ರೀಗಳಿಗೆ ನಾನು ಅಗೌರವ ಸೂಚಿಸಿದ್ದೇನೆ ಎಂದು ಬಿಜೆಪಿಯವರು ನನ್ನ ವಿರುದ್ಧ ಹೋರಾಟ ನಡೆಸಿದರು. ಆದರೆ, ಇದರ ಅರ್ಧದಷ್ಟು ಒತ್ತಡವನ್ನು ಕೇಂದ್ರದ ಮೇಲೆ ಹೇರಿದ್ದರೆ ಶಿವಕುಮಾರ ಶ್ರೀಗಳಿಗೆ ‘ಭಾರತ ರತ್ನ’ ಸಿಗುತ್ತಿತ್ತು ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ಶ್ರೀಗಳಿಗೆ ಭಾರತ ರತ್ನ ನೀಡಬೇಕೆಂದು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿತ್ತು ಎಂದು ಅವರು ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಲ್ಲಿ ಅನಧಿಕೃತವಾಗಿ ವಾಸ್ತವ್ಯ ಮಾಡಿದ್ದ 24 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ವ್ಯವಸ್ಥೆ ಸರಿಪಡಿಸಲು ಇಂತಹ ಕ್ರಮ ಕೈಗೊಳ್ಳುವುದು ಅನಿವಾರ್ಯ. ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳನ್ನು ಸುಧಾರಿಸಲಾಗುವುದು ಎಂದರು.

ಚಿಂಚೋಳಿ ಶಾಸಕ ಉಮೇಶ ಜಾಧವ್ ಅವರನ್ನು ಪಕ್ಷದಿಂದ ಹೊರಹಾಕುವ ಪ್ರಶ್ನೆಯೇ ಇಲ್ಲ. ಅವರೊಬ್ಬ ಜವಾಬ್ದಾರಿಯುತ ಶಾಸಕ, ಹಿರಿಯರು. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲವೆಂದು ಹೇಳಿದ್ದಾರೆ. ಅದನ್ನು ಪಕ್ಷದ ವರಿಷ್ಠರು ನೋಡಿಕೊಳ್ಳುತ್ತಾರೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News