ನಾನು ಕೇವಲ ಮಾದಿಗ ಸಮುದಾಯದ ಪ್ರತಿನಿಧಿಯಲ್ಲ: ಕೆ.ಎಚ್.ಮುನಿಯಪ್ಪ

Update: 2019-01-27 14:21 GMT

ಬೆಂಗಳೂರ, ಜ.27: ಕೋಲಾರದ ಎಲ್ಲ ಜಾತಿ, ಧರ್ಮದ ಜನತೆ ನನಗೆ ಮತಹಾಕಿ ಗೆಲ್ಲಿಸಿದ್ದಾರೆ. ಹೀಗಾಗಿ ನಾನು ಕೇವಲ ಮಾದಿಗ ಸಮುದಾಯದ ಪ್ರತಿನಿಧಿಯಾಗಲು ಸಾಧ್ಯವಿಲ್ಲವೆಂದು ಹಿರಿಯ ಸಂಸದ ಕೆ.ಎಚ್.ಮುನಿಯಪ್ಪ ತಿಳಿಸಿದರು.

ರವಿವಾರ ಆದಿ ಜಾಂಬವ ಜಾಗೃತಿ ಪತ್ರಿಕೆ ವತಿಯಿಂದ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಜಾಂಬವನ ಕತೆ-ವ್ಯಥೆ ಕುರಿತ ತಿಂಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ಮಾದಿಗ ಸಮುದಾಯದಲ್ಲಿ ಹುಟ್ಟಿರುವ ಕಾರಣಕ್ಕೆ ಶೇ.10ರಷ್ಟು ಸಮುದಾಯಕ್ಕಾಗಿ ಕೆಲಸ ಮಾಡುತ್ತೇನೆ. ಉಳಿದ ಶೇ.90ರಷ್ಟು ಎಲ್ಲ ಸಮುದಾಯಕ್ಕೆ ಮೀಸಲು ಎಂದು ತಿಳಿಸಿದರು.

 ಮಾದಿಗ ಸಮುದಾಯವನ್ನು ಯಾರು ತುಳಿದಿಲ್ಲ. ನಾವು ನಾಗರಿಕತೆಯಲ್ಲಿ ಹಿಂದುಳಿದ ಕಾರಣದಿಂದ ಇತರೆ ಸಮುದಾಯಗಳಿಗಿಂತ ಹಿಂದುಳಿದಿದ್ದೇವೆ. ಹೀಗಾಗಿ ಹೊಲೆಯರು, ಲಂಬಾಣಿ, ಕೊರಮ, ಕೊರಚ ಸೇರಿದಂತೆ ಇತರೆ ದಲಿತ ಸಮುದಾಯಗಳೊಂದಿಗೆ ಜೊತೆ, ಜೊತೆಯಾಗಿ ಸಾಗುವ ಮೂಲಕ ಎಲ್ಲರು ಪರಸ್ಪರ ಬೆಳೆಯಬೇಕಾಗಿದೆ ಎಂದು ಅವರು ಹೇಳಿದರು.

ಸ್ವಾತಂತ್ರ ಹೋರಾಟದ ಗ್ರಾಮ: ಕೋಲಾರ ಜಿಲ್ಲೆಯ ನಾನು ಹುಟ್ಟಿದ ಊರಿನಲ್ಲಿ ಸುಮಾರು 45ಮನೆಗಳಿದ್ದವು. ಒಕ್ಕಲಿಗ, ಮಾದಿಗ, ಹೊಲೆಯ, ಗೊಲ್ಲರು ಸೇರಿದಂತೆ ಎಲ್ಲ ಜಾತಿ ಸಮುದಾಯಗಳ ಮನೆಗಳಿದ್ದವು. ಎಲ್ಲ ಮನೆಗಳ ಸದಸ್ಯರು ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡು ಜೈಲುವಾಸ ಅನುಭವಿಸಿದ್ದಾರೆ. ನನ್ನ ತಂದೆಯು ಕೆ.ಸಿ.ರೆಡ್ಡಿ ನೇತೃತ್ವದಲ್ಲಿ ನಡೆದ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡು ಜೈಲುವಾಸ ಅನುಭವಿಸಿದ್ದರು ಎಂದು ಅವರು ಸ್ಮರಿಸಿದರು.

 ಒಕ್ಕಲಿಗರೆ ಹೆಚ್ಚಿನ ಸಂಖ್ಯೆಯಲ್ಲಿದ್ದ ನನ್ನೂರಿನಲ್ಲಿ ಜಾತಿ ತಾರತಮ್ಯ ಇರಲಿಲ್ಲ. ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್‌ರವರ ತತ್ವಗಳು ಊರಲ್ಲಿ ಪ್ರವೇಶ ಪಡೆದಿದ್ದವು. ಹೀಗಾಗಿ ಎಲ್ಲರ ಮನೆಗು ಎಲ್ಲರು ಮುಕ್ತವಾಗಿ ಹೋಗಬಹುದಾಗಿತ್ತು. ಇಂತಹ ಪರಿಸರದಲ್ಲಿ ಉತ್ತಮ ವಿದ್ಯಾಭ್ಯಾಸ ಪಡೆಯಲು ಸಾಧ್ಯವಾಯಿತು ಎಂದು ಅವರು ಹೇಳಿದರು.

 ನಾನು ಆದರ್ಶ ಕೃಷಿಕ: ನಮ್ಮದು ಕೃಷಿಕ ಕುಟುಂಬ. ನಮಗೆ ಐದು ಎಕರೆ ಜಮೀನು, ಮೂರು ಜೋಡಿ ಎತ್ತುಗಳಿದ್ದವು. ಯಾರಿಗೂ ಕಮ್ಮಿಯಿಲ್ಲದಂತೆ ಕೃಷಿ ಮಾಡುತ್ತಿದ್ದೆವು. ನಾನು ರಾಜಕಾರಣಕ್ಕೆ ಬರುವುದಕ್ಕೆ ಮೊದಲು ರೇಷ್ಮೆ ಬೆಳೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದೆ. ಹೀಗೆ ನನ್ನ ಕೃಷಿ ಬದುಕು ತುಂಬಾ ಚೆನ್ನಾಗಿತ್ತು. ನಂತರ ಊರಿನ ಹಾಗೂ ಕೋಲಾರದ ಹಿರಿಯರು ನನ್ನನ್ನು ರಾಜಕೀಯಕ್ಕೆ ಪರಿಚಯಿಸಿದರು ಎಂದು ಅವರು ನೆನೆಪು ಮಾಡಿಕೊಂಡರು.

ಜಾಂಬವ ಸಮುದಾಯ ಸಂಸ್ಥಾನದ ಷಡಕ್ಷರಿ ಮುನಿ ಸ್ವಾಮೀಜಿ ಮಾತನಾಡಿ, ಮನುಷ್ಯನಾಗಿ ಹುಟ್ಟಿದ ಮೇಲೆ ತಾನು, ಕುಟುಂಬ ಹಾಗೂ ಸಮುದಾಯದ ಹಿನ್ನೆಲೆಯನ್ನು ತಿಳಿದುಕೊಳ್ಳುವುದು ಅಗತ್ಯ. ನಮ್ಮ ಹಿನ್ನೆಲೆಯನ್ನೆ ತಿಳಿಯದೆ ನಮ್ಮ ಮುಂದಿನ ಭವಿಷ್ಯವನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಮಾದಿಗ ಸಮುದಾಯದಲ್ಲಿ ಹುಟ್ಟಿದ ಪ್ರತಿಯೊಬ್ಬರು ಸಮುದಾಯದ ಪರಂಪರೆಯನ್ನು ಅರಿಯುವುದು ಅಗತ್ಯವೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಎಂ.ರೇವಣ್ಣ, ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ, ಹಿರಿಯ ವಕೀಲ ಭಕ್ತವಚಲ, ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ, ಹಿರಿಯ ವಕೀಲ ಸಿರಾಜಿನ್ ಪಾಷ, ಪ್ರಗತಿಪರ ಚಿಂತಕ ಡಾ.ಎಚ್.ವಿಶ್ವನಾಥ್, ಇತಿಹಾಸ ತಜ್ಞ ಟಿ.ಪಿ.ಪ್ರಸನ್ನಕುಮಾರ್ ಹಾಗೂ ಪ್ರೊ.ಆರ್.ಬಸವರಾಜಪ್ಪ ಮತ್ತಿತರರಿದ್ದರು.

ನಾನು ಮಾಂಸಾಹಾರ ಸೇವಿಸಿ 30ವರ್ಷಗಳಾದವು. ಇನ್ನು ಮದ್ಯಪಾನವಂತೂ ಜೀವನದಲ್ಲಿ ಕುಡಿದಿಲ್ಲ. ಬುದ್ಧ, ಬಸವ, ಅಂಬೇಡ್ಕರ್‌ರವರ ತತ್ವಾದರ್ಶಗಳಲ್ಲಿ ಮುನ್ನಡೆಯುತ್ತಿದ್ದೇನೆ. ಇದರಿಂದ ರಾಜಕೀಯ ಕ್ಷೇತ್ರದಲ್ಲಿ ಎತ್ತರಕ್ಕೆ ಹೋಗಲು ಸಾಧ್ಯವಾಗಿದೆ.

- ಕೆ.ಎಚ್.ಮುನಿಯಪ್ಪ, ಸಂಸದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News