ಪ್ರಜೆಗಳ ಪ್ರಾಣ ಹಿಂಡುವ ಪ್ರಭುತ್ವ

Update: 2019-01-27 18:38 GMT

ಡಾ.ಅಂಬೇಡ್ಕರ್ ಅವರು ಹೇಳಿದ ಗಂಡಾಂತರ ಈಗ ಎದುರಾಗಿದೆ. ಭಾರತದ ಪ್ರಜಾಪ್ರಭುತ್ವ ಈಗ ಅಪಾಯದಲ್ಲಿದೆ. ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯನ್ನು ಮುಂದುವರಿಸಿಕೊಂಡು ಹೋಗುವ ಆಳುವ ವರ್ಗದ ಸಿದ್ಧಾಂತ ಜನತಂತ್ರಕ್ಕೆ ಅಪಾಯವನ್ನು ತಂದೊಡ್ಡಿದೆ. ಸಮಾನತೆಯನ್ನು ನಿರಾಕರಿಸಿ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಹಿಂದುತ್ವದ ಹೆಸರಿನಲ್ಲಿ ಹೇರಲು ಹೊರಟಿರುವ ಪ್ರಭುತ್ವ ಈ ಬಿಕ್ಕಟ್ಟಿನಿಂದ ಪಾರಾಗಲು ಸಮಾನತೆಯ ದನಿಗಳನ್ನು ಹತ್ತಿಕ್ಕಲು ಹೊರಟಿದೆ.


1949ರ ನವೆಂಬರ್ 26ರಂದು ಸಂವಿಧಾನ ಸಮರ್ಪಣಾ ಸಭೆಯಲ್ಲಿ ಮಾತನಾಡಿದ ಡಾ. ಬಿ.ಆರ್.ಅಂಬೇಡ್ಕರ್, 1950 ಜನವರಿ 26ರಂದು ನಾವು ವೈರುಧ್ಯದಿಂದ ಕೂಡಿದ ಬದುಕಿಗೆ ಪ್ರವೇಶಿಸುತ್ತಿದ್ದೇವೆ. ರಾಜಕೀಯದಲ್ಲಿ ನಾವು ಸಮಾನತೆ ಪಡೆದಿರುತ್ತೇವೆ. ಆದರೆ, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಅಸಮಾನತೆ ಮುಂದುವರಿದಿರುತ್ತದೆ. ಈ ವೈರುಧ್ಯದಿಂದ ಕೂಡಿದ ಬದುಕನ್ನು ಎಷ್ಟು ಕಾಲ ಮುಂದುವರಿಸಲು ಸಾಧ್ಯ. ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಸಮಾನತೆಯನ್ನು ಎಷ್ಟು ಕಾಲ ನಿರಾಕರಿಸಲು ಸಾಧ್ಯ? ಈ ನಿರಾಕರಣೆಯನ್ನು ಮುಂದುವರಿಸುತ್ತ ಹೋದರೆ, ನಮ್ಮ ರಾಜಕೀಯ ಪ್ರಜಾಪ್ರಭುತ್ವಕ್ಕೆ ಗಂಡಾಂತರ ಎದುರಾಗುತ್ತದೆ ಎಂದು ಹೇಳಿದ್ದರು.

 ಡಾ. ಅಂಬೇಡ್ಕರ್ ಅವರು ಹೇಳಿದ ಗಂಡಾಂತರ ಈಗ ಎದುರಾಗಿದೆ. ಭಾರತದ ಪ್ರಜಾಪ್ರಭುತ್ವ ಈಗ ಅಪಾಯದಲ್ಲಿದೆ. ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯನ್ನು ಮುಂದುವರಿಸಿಕೊಂಡು ಹೋಗುವ ಆಳುವ ವರ್ಗದ ಸಿದ್ಧಾಂತ ಜನತಂತ್ರಕ್ಕೆ ಅಪಾಯವನ್ನು ತಂದೊಡ್ಡಿದೆ. ಸಮಾನತೆಯನ್ನು ನಿರಾಕರಿಸಿ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಹಿಂದುತ್ವದ ಹೆಸರಿನಲ್ಲಿ ಹೇರಲು ಹೊರಟಿರುವ ಪ್ರಭುತ್ವ ಈ ಬಿಕ್ಕಟ್ಟಿನಿಂದ ಪಾರಾಗಲು ಸಮಾನತೆಯ ದನಿಗಳನ್ನು ಹತ್ತಿಕ್ಕಲು ಹೊರಟಿದೆ. ತನ್ನ ನಿಲುವನ್ನು ವಿರೋಧಿಸುವವರನ್ನೆಲ್ಲ ರಾಷ್ಟ್ರದ್ರೋಹಿಗಳೆಂದು ಕರೆದು ಜೈಲಿಗೆ ತಳ್ಳಲು ಮುಂದಾಗಿದೆ. ಅಂತರ್‌ರಾಷ್ಟ್ರೀಯ ಮಟ್ಟದ ವಿದ್ವಾಂಸ ಆನಂದ ತೇಲ್ತುಂಬ್ಡೆ ಈಗಾಗಲೇ ಬಂಧನದ ಭೀತಿ ಎದುರಿಸುತ್ತಿದ್ದಾರೆ.

ಕವಿ ವರವರ ರಾವ್, ನ್ಯಾಯವಾದಿ ಸುಧಾ ಭಾರದ್ವಾಜ್, ಹಿರಿಯ ಪತ್ರಕರ್ತ ಗೌತಮ್ ನವ್ಲಾಖಾ ಮುಂತಾದವರು ಈಗಾಗಲೇ ಸೆರೆಮನೆ ಸೇರಿದ್ದಾರೆ. ಕೇಂದ್ರದ ನರೇಂದ್ರ ಮೋದಿ ಸರಕಾರ ತನ್ನನ್ನು ವಿರೋಧಿಸುವವರನ್ನೆಲ್ಲ ಹತ್ತಿಕ್ಕಲು ಬ್ರಿಟಿಷ್ ಕಾಲದ ರಾಜದ್ರೋಹದ ಕಾನೂನು ಬಳಸಿಕೊಳ್ಳುತ್ತಿದೆ. ಸ್ವಾತಂತ್ರ ಚಳವಳಿಯನ್ನು ಹತ್ತಿಕ್ಕಲು ಬ್ರಿಟಿಷರು ತಂದಿದ್ದ ಈ ಕಾನೂನನ್ನು ಆಳುವ ವರ್ಗ ದೇಶದ ಸ್ವಾತಂತ್ರ್ಯ ನಂತರವೂ ಮುಂದುವರಿಸಿದೆ. ಮಣಿಪುರದಲ್ಲಿ ಮುಖ್ಯಮಂತ್ರಿಯನ್ನು ಟೀಕಿಸಿದ್ದಕ್ಕಾಗಿ ಹಿರಿಯ ಪತ್ರಕರ್ತ ಕಿಶೋರಚಂದ್ರ ವಾಂಗ್ ಖೇಮ್ ಅವರನ್ನು ರಾಷ್ಟ್ರದ್ರೋಹ ಆರೋಪದಡಿ ಬಂಧಿಸಲಾಗಿದೆ. ನ್ಯಾಯಾಲಯ ಆತನನ್ನು ಬಿಡುಗಡೆ ಮಾಡಿದ್ದರೂ ಕೂಡ ಮತ್ತೆ ಅವರನ್ನು ಬಂಧನಕ್ಕೆ ಗುರಿಪಡಿಸಲಾಗಿದೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಬಿಜೆಪಿ ಸಚಿವ ವಿನೋದ ತಾವ್ಡೆ ಅವರು ಭಾಷಣ ಮಾಡುತ್ತಿದ್ದಾಗ, ವಿದ್ಯಾರ್ಥಿಯೊಬ್ಬ ತನ್ನ ಟೇಪ್‌ರಿಕಾರ್ಡ್ ಆನ್ ಮಾಡಿ ಇಟ್ಟುಕೊಂಡು ಪ್ರಶ್ನೆ ಕೇಳಿದ. ಸಚಿವರು ಟೇಪ್ ರಿಕಾರ್ಡರ್ ಬಂದ್ ಮಾಡಲು ಹೇಳಿದರು. ವಿದ್ಯಾರ್ಥಿ ಯಾಕೆ ಎಂದು ಕೇಳಿದ. ಆಗ, ಕೋಪೋದ್ರಿಕ್ತರಾದ ಮಂತ್ರಿಗಳು ಭದ್ರತಾ ಸಿಬ್ಬಂದಿಗೆ ಹೇಳಿ ಆ ವಿದ್ಯಾರ್ಥಿಯನ್ನು ಬಂಧನಕ್ಕೆ ಗುರಿಪಡಿಸಿದರು. ಇಂಥ ನೂರಾರು ಉದಾಹರಣೆಗಳನ್ನು ಕೊಡಬಹುದು.

ಆರೆಸ್ಸೆಸ್ ನಿಯಂತ್ರಿತ ಮೋದಿ ಸರಕಾರದಲ್ಲಿ ಸಂವಿಧಾನವನ್ನು ಹೆಸರಿಗೆ ಇಟ್ಟುಕೊಂಡೇ ಅದರ ರಕ್ಕೆಪುಕ್ಕ ಕತ್ತರಿಸುವ ಕಾರ್ಯ ನಿರಾತಂಕವಾಗಿ ನಡೆದಿದೆ. ಸಂವಿಧಾನದ ಸ್ವಾಯತ್ತ ಸಂಸ್ಥೆಗಳಾದ ಚುನಾವಣಾ ಆಯೋಗ, ನ್ಯಾಯಾಂಗ, ರಿಸರ್ವ್ ಬ್ಯಾಂಕ್ ಇವುಗಳನ್ನೆಲ್ಲ ವ್ಯವಸ್ಥಿತವಾಗಿ ಮೂಲೆಗುಂಪು ಮಾಡಲಾಗುತ್ತಿದೆ. ಪ್ರಜಾಪ್ರಭುತ್ವವನ್ನು ನಾಶ ಮಾಡುವ ಕಾರ್ಯ ಹಂತಹಂತವಾಗಿ ನಡೆದಿದೆ. ಇಂದಿರಾ ಗಾಂಧಿಯವರು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದಾಗ, ಅವರನ್ನು ಟೀಕಿಸಿದ ಎಲ್ಲರೂ ಜೈಲಿಗೆ ಹೋಗಿರಲಿಲ್ಲ. ಕೆಲ ಹಿರಿಯ ನಾಯಕರು ಮಾತ್ರ ಬಂಧಿಸಲ್ಪಟ್ಟಿದ್ದರು. ಎಲ್ಲರ ಮೇಲೆಯೂ ರಾಜದ್ರೋಹದ ಆರೋಪ ಮಾಡಿರಲಿಲ್ಲ. ಆದರೆ, ಈಗ ಪರಿಸ್ಥಿತಿ ಹಾಗಿಲ್ಲ. ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವ ಯಾರೂ ಸುರಕ್ಷಿತವಾಗಿ ಇರಲು ಸಾಧ್ಯವಿಲ್ಲ. ಅದರಲ್ಲೂ ಸಾಹಿತಿಗಳು, ಚಿಂತಕರು, ಕಲಾವಿದರು, ಬುದ್ಧಿಜೀವಿಗಳನ್ನು ಕಂಡರೆ ಈ ಸರಕಾರಕ್ಕೆ ಆಗುವುದಿಲ್ಲ.

ಎಲ್ಲಕ್ಕಿಂತ ಹೆಚ್ಚಾಗಿ ಪ್ರಭುತ್ವವನ್ನು ವಿರೋಧಿಸುವ ವಿದ್ಯಾರ್ಥಿ ನಾಯಕರನ್ನು ಕಂಡರೆ ಮೋದಿಗೆ ನಿದ್ದೆ ಬರುವುದಿಲ್ಲ. ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಹಿಂದಿನ ಅಧ್ಯಕ್ಷ ಕನ್ನಯ್ಯಾ ಕುಮಾರ್ ಅವರನ್ನು ಮುಗಿಸಲು ಅವರ ಮೇಲೆ ರಾಜದ್ರೋಹದ ಆರೋಪ ಹೊರಿಸಲಾಯಿತು. ಜೆಎನ್‌ಯು ಆವರಣದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದರೆಂದು ಅವರನ್ನು ಮಾತ್ರವಲ್ಲದೇ ಉಮರ್ ಖಾಲಿದ್, ಶೆಹ್ಲಾ ರಶೀದ್ ಮೇಲೆ ಪ್ರಕರಣ ದಾಖಲಿಸಲಾಯಿತು. ನಂತರ ಮ್ಯಾಜಿಸ್ಟ್ರೇಟ್ ಕೋರ್ಟ್ ಈ ಬಗ್ಗೆ ತನಿಖೆ ನಡೆಸಿದಾಗ, ಈ ಆರೋಪ ಸುಳ್ಳು ಎಂದು ಸಾಬೀತಾಯಿತು. ಪಾಕ್ ಪರ ಘೋಷಣೆ ಕೂಗಿದವರು ಎಬಿವಿಪಿಗೆ ಸೇರಿದ ವಿದ್ಯಾರ್ಥಿಗಳು ಎಂಬುದು ಬಯಲಿಗೆ ಬಂತು. ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಇದಕ್ಕೆ ಸಂಬಂಧಿಸಿದ ಧ್ವನಿಮುದ್ರಿಕೆಯನ್ನು ಸಿದ್ಧಪಡಿಸಿದ್ದು ಬೆಳಕಿಗೆ ಬಂತು. ಆ ನಂತರ, ಕನ್ಹಯ್ಯಿಕುಮಾರ್ ಬಿಡುಗಡೆಯಾಯಿತು.

ಇದೆಲ್ಲ ನಡೆದು ಎರಡು ವರ್ಷಗಳ ನಂತರ ಲೋಕಸಭೆ ಚುನಾವಣೆಗೆ ನಾಲ್ಕು ತಿಂಗಳು ಇರುವಾಗ ದಿಲ್ಲಿ ಪೊಲೀಸರು ಕನ್ಹಯಾಕುಮಾರ್ ಮೇಲೆ ಮತ್ತೆ ರಾಜದ್ರೋಹದ ಆರೋಪ ಮಾಡಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿದರು. ಆಗ ದಿಲ್ಲಿ ಹೈಕೋರ್ಟ್ ಪೊಲೀಸರನ್ನು ತರಾಟೆಗೆ ತೆಗೆದುಕೊಂಡು ಈ ಆರೋಪಪಟ್ಟಿ ಸಲ್ಲಿಸುವ ಮುನ್ನ ಕೇಂದ್ರದ ಗೃಹಖಾತೆಯ ಅನುಮತಿ ಪಡೆದಿದ್ದೀರಾ ಎಂದು ಪ್ರಶ್ನಿಸಿ ಆರೋಪಪಟ್ಟಿಯನ್ನು ತಳ್ಳಿ ಹಾಕಿತು.

ಅಸ್ಸಾಂನಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿದ ಸಾಹಿತಿ ಹೆಲೆನ್ ಗೋಯಿನ್ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಅನಿಲ್ ಗೊಗೊಯ್ ಅವರನ್ನು ಇದೇ ರಾಜದ್ರೋಹದ ಆರೋಪದ ಮೇಲೆ ಬಂಧಿಸಲಾಗಿದೆ. ಒಟ್ಟಾರೆ, ದೇಶದಲ್ಲಿ ಪ್ರಭುತ್ವದ ವಿರುದ್ಧ ಎಲ್ಲೇ ಪ್ರತಿಭಟನೆಯ ಧ್ವನಿ ಕೇಳಿ ಬಂದರೂ ಅಲ್ಲಿ ಈ ರಾಜದ್ರೋಹದ ಅಸ್ತ್ರ ಬಳಸಿ ಬಾಯಿ ಮುಚ್ಚಿಸುವ ಕೆಲಸ ವ್ಯವಸ್ಥಿತವಾಗಿ ನಡೆದಿದೆ. ಇದಕ್ಕೆ ಪೂರಕವಾಗಿ ಆರೆಸ್ಸೆಸ್ ನಾಯಕರಾದ ಮೋಹನ್ ಭಾಗವತ್ ಮತ್ತು ರಾಮ ಮಾಧವ್ ಅವರು ಬುದ್ಧಿಜೀವಿಗಳು ಮತ್ತು ಸಾಹಿತಿಗಳಿಂದ ದೇಶಕ್ಕೆ ಗಂಡಾಂತರ ಎದುರಾಗಿದೆ ಎಂದು ಹೇಳುತ್ತಿದ್ದಾರೆ. ಜರ್ಮನಿಯಲ್ಲಿ 40ರ ದಶಕದಲ್ಲಿ ಹಿಟ್ಲರ್ ಇದೇ ರೀತಿ ತನಗೆ ಎದುರಾಗಿ ನಿಲ್ಲುವ ಚಿಂತಕರನ್ನು ರಾಷ್ಟ್ರದ್ರೋಹಿಗಳೆಂದು ಹತ್ತಿಕ್ಕುತ್ತಿದ್ದ. ಈಗ ಭಾರತದಲ್ಲೂ ಚಿಂತಕರನ್ನು ಮೋದಿ ಸರಕಾರಇದೇ ಅಸ್ತ್ರ ಪ್ರಯೋಗಿಸಿ ಬಾಯಿ ಮುಚ್ಚಿಸಲು ಯತ್ನಿಸುತ್ತಿದೆ. ಇದರ ವಿರುದ್ಧ ಪ್ರಬಲ ಜನಾಂದೋಲನ ನಡೆಯಬೇಕಿದೆ. ಇದರ ಜೊತೆಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರಕಾರವನ್ನು ಮನೆಗೆ ಕಳುಹಿಸುವ ಸಂಕಲ್ಪವನ್ನು ಜನರು ಮಾಡಬೇಕಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News