ನಾನು ಹೆಮ್ಮೆಯ ಭಾರತೀಯಳು: ಅನಂತ್ ಹೆಗಡೆಗೆ ತಿರುಗೇಟು ನೀಡಿದ ಟಬು ರಾವ್

Update: 2019-01-28 15:43 GMT

ಬೆಂಗಳೂರು, ಜ.28: ಕೆಪಿಸಿಸಿ ಅಧ್ಯಕ್ಷರೂ ಆಗಿರುವ ನನ್ನ ಪತಿಯ ವಿರುದ್ಧ ರಾಜಕೀಯವಾಗಿ ಹೋರಾಡುವುದಕ್ಕೆ ಸಾಧ್ಯವಿಲ್ಲದ ಕೆಲವು ಬಿಜೆಪಿ ನಾಯಕರು ನನ್ನನ್ನು ಗುರಿಯಾಗಿಸಿದ್ದಾರೆ. ಸಂಸದರಾದ ಪ್ರತಾಪ್ ಸಿಂಹ, ಶೋಭಾ ಕರಂದ್ಲಾಜೆ ಅವರ ನಂತರ ಇದೀಗ ಅನಂತಕುಮಾರ್ ಹೆಗಡೆ ಅವರು ನನ್ನನ್ನು ರಾಜಕೀಯಕ್ಕೆ ಎಳೆದು ತಂದಿದ್ದಾರೆ ಎಂದು ದಿನೇಶ್‌ ಗುಂಡೂರಾವ್ ಪತ್ನಿ ತಬುರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ತಮ್ಮ ಅನಿಸಿಕೆಗಳನ್ನು ಬರೆದಿರುವ ಅವರು, ಈ ವಿಷಯದಲ್ಲಿ ನನ್ನನ್ನು ಎಳೆದು ತರುವ ಅಗತ್ಯವೇ ಇರಲಿಲ್ಲ. ನಾನು ಒಬ್ಬ ಖಾಸಗಿ ವ್ಯಕ್ತಿ, ಇಬ್ಬರು ಹೆಣ್ಣು ಮಕ್ಕಳ ತಾಯಿ, ಒಬ್ಬ ಜವಾಬ್ದಾರಿಯುತ ಗೃಹಿಣಿ ಅಷ್ಟೇ. ನನಗೆ ಯಾವುದೇ ರಾಜಕೀಯ ಹುದ್ದೆ, ಜವಾಬ್ದಾರಿ ಇಲ್ಲ ಎಂದು ತಿಳಿಸಿದ್ದಾರೆ.

ನಾನು ಮುಸ್ಲಿಂ ಆಗಿ ಹುಟ್ಟಿದ್ದು ಸತ್ಯ. ಅದಕ್ಕಿಂತ ಮೊದಲು ನಾನೊಬ್ಬ ಹೆಮ್ಮೆಯ ಭಾರತೀಯಳು. ಭಾರತದ ಸಂವಿಧಾನದ ಮೂಲಭೂತ ತತ್ವ, ಜಾತ್ಯತೀತತೆ. ಅದು ಎಲ್ಲರಿಗೂ ವೈಚಾರಿಕ ಸ್ವಾತಂತ್ರ, ಅಭಿವ್ಯಕ್ತಿ ಸ್ವಾತಂತ್ರ, ನಂಬಿಕೆ, ಪೂಜಿಸುವ ಸ್ವಾತಂತ್ರವನ್ನು ನೀಡಿದೆ ಎಂದು ಅವರು ಹೇಳಿದ್ದಾರೆ

ನಾನು ಯಾವುದೇ ಬಿಜೆಪಿ ಮುಖಂಡರನ್ನು ವೈಯಕ್ತಿಕವಾಗಿ ನಿಂದಿಸಿಲ್ಲ. ಆದರೆ, ಅವರು ನನ್ನನ್ನು ತಮ್ಮ ಕೀಳುಮಟ್ಟದ ರಾಜಕೀಯಕ್ಕೆ ದಾಳವನ್ನಾಗಿ ಬಳಸಿಕೊಳ್ಳುವುದನ್ನು ನಾನು ಒಪ್ಪುವುದಿಲ್ಲ. ಅವರಿಗೆ ತಾಕತ್ತಿದ್ದರೆ ನನ್ನ ಪತಿಯನ್ನು ರಾಜಕೀಯವಾಗಿ ಎದುರಿಸಲಿ, ಸವಾಲು ಹಾಕಲಿ ಎಂದು ತಬು ರಾವ್ ಹೇಳಿದ್ದಾರೆ.

ಅದನ್ನು ಬಿಟ್ಟು ಒಬ್ಬ ಗೃಹಿಣಿಯ ಸೀರೆ ಹಿಂದೆ ಅಡಗಿ, ಕಲ್ಲೆಸೆಯುವುದು ಯಾವ ಪುರುಷಾರ್ಥ? ಇಂತಹ ಅವಾಚ್ಯ ಶಬ್ದಗಳು ಮತ್ತು ಪ್ರಚೋದನಾಕಾರಿ ಹೇಳಿಕೆಗಳು ಒಬ್ಬ ಕೇಂದ್ರ ಸಚಿವರಿಗೆ ತಕ್ಕುದಲ್ಲ. ನಾನು ಹೆಗಡೆ ಅವರಿಗೆ ಟ್ವಿಟರ್‌ನಲ್ಲೆ ಉತ್ತರಿಸಲು ಹೋದೆ. ಆದರೆ, ಅವರು ನನ್ನನ್ನು ಟ್ವಿಟರ್‌ನಲ್ಲಿ ಬ್ಲಾಕ್ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಕರ್ನಾಟಕದ ರಾಜಕೀಯ ಇಲ್ಲಿನ ಪ್ರಬುದ್ಧ ಮತ್ತು ಘನವೆತ್ತ ರಾಜಕೀಯ ಮುಖಂಡರಿಂದ ಖ್ಯಾತಿಗಳಿಸಿದೆ. ನಾನು ಹೆಗಡೆ ಮತ್ತು ಅವರ ಸಹೋದ್ಯೋಗಿಗಳಲ್ಲಿ ಒಂದು ವಿನಂತಿ ಮಾಡಿಕೊಳ್ಳುತ್ತೇನೆ. ದಯವಿಟ್ಟು ಮಹಿಳೆಯರ ವಿರುದ್ಧ ನೀವು ಅಪ್ರಬುದ್ಧ ಹೇಳಿಕೆಗಳಿಂದ ರಾಜ್ಯದ ಮಾನ ಕಳೆಯಬೇಡಿ ಎಂದು ತಬು ರಾವ್ ಮನವಿ ಮಾಡಿದ್ದಾರೆ.

ಅನಂತ್-ದಿನೇಶ್ ವಾಕ್ಸಮರ

‘ಹಿಂದು ಯುವತಿಯರನ್ನು ಮುಟ್ಟಿದರೆ ಅಂತಹವರ ಕೈ ಅಸ್ತಿತ್ವದಲ್ಲಿರಬಾರದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಯನ್ನು ತರಾಟೆಗೆ ತೆಗೆದುಕೊಂಡಿದ್ದ ದಿನೇಶ್ ಗುಂಡೂರಾವ್, ಕೇವಲ ವಿವಾದಾತ್ಮಕ ಹೇಳಿಕೆ ನೀಡುವುದನ್ನು ಬಿಟ್ಟರೆ, ರಾಜ್ಯದ ಬೆಳವಣಿಗೆಯಲ್ಲಿ ನಿಮ್ಮ ಕೊಡುಗೆ ಏನು ಪ್ರಶ್ನಿಸಿದ್ದರು.

ಈ ಸಂಬಂಧ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದ ಅನಂತಕುಮಾರ್, ನನ್ನ ಸಾಧನೆಯನ್ನು ನಾನು ಖಂಡಿತವಾಗಿಯೂ ಹೇಳುತ್ತೇನೆ. ಆದರೆ, ಅದಕ್ಕೂ ಮೊದಲು ನೀವು ನಿಮ್ಮ ಸಾಧನೆಯ ಬಗ್ಗೆ ಹೇಳಿ, ನೀವು ಮುಸ್ಲಿಂ ಮಹಿಳೆಯ ಹಿಂದೆ ಓಡಿಹೋಗಿದ್ದು ಬಿಟ್ಟರೆ, ನಿಮ್ಮ ಸಾಧನೆ ಏನು ಎಂದು ಪ್ರಶ್ನಿಸಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News