‘ಪಡಿತರ ಬದಲು ನಗದು’ ರಾಜ್ಯ ಸರಕಾರಗಳ ವಿವೇಚನೆಗೆ: ಕೇಂದ್ರ ಸಚಿವ ರಾಮ್‌ ವಿಲಾಸ್ ಪಾಸ್ವಾನ್

Update: 2019-01-28 13:48 GMT

ಬೆಂಗಳೂರು, ಜ.28: ಪಡಿತರ ಬದಲು ಫಲಾನುಭವಿಗಳಿಗೆ ನಗದು ನೀಡುವ ಯೋಜನೆ ಅನುಷ್ಠಾನಗೊಳಿಸುವುದು ಆಯಾ ರಾಜ್ಯ ಸರಕಾರಗಳ ವಿವೇಚನೆಗೆ ಬಿಡಲಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಾಮ್‌ವಿಲಾಸ್ ಪಾಸ್ವಾನ್ ಹೇಳಿದರು.

ಸೋಮವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಡಿತರ ಬದಲು ನಗದು ನೀಡುವ ಯೋಜನೆಯನ್ನು ಪ್ರಾಯೋಗಿಕವಾಗಿ ಪಾಂಡಿಚೇರಿ, ಚಂಡೀಗಡ ಹಾಗೂ ದಾದರ್‌ನಗರದಲ್ಲಿ ಜಾರಿಗೆ ತರಲಾಗಿದ್ದು, ಯಶಸ್ವಿಯಾಗಿ ನಡೆಯುತ್ತಿದೆ. ಆದರೆ, ಪಾಂಡಿಚೇರಿಯಲ್ಲಿ ಮಾತ್ರ ಹಳೆಯ ಪದ್ಧತಿಯಂತೆ ಪಡಿತರವನ್ನೆ ನೀಡುವಂತೆ ಮನವಿ ಬಂದಿದೆ ಎಂದರು.

ನಗರ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೌಲಭ್ಯ ಸುಲಭವಾಗಿ ಜನರಿಗೆ ಸಿಗುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಈ ಸಂಬಂಧ ಇರುವ ಅಡೆತಡೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ರಾಮ್‌ವಿಲಾಸ್ ಪಾಸ್ವಾನ್ ಹೇಳಿದರು.

2013ರಲ್ಲಿ ಜಾರಿಗೆ ತಂದ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ದೇಶದ 81 ಕೋಟಿ ಜನರಿಗೆ ಪಡಿತರವನ್ನು ವಿತರಿಸಲಾಗುತ್ತಿದೆ. ದೇಶದ ಶೇ.75ರಷ್ಟು ಗ್ರಾಮೀಣ ಜನರು ಹಾಗೂ ನಗರ ಪ್ರದೇಶದ ಶೇ.50ರಷ್ಟು ಜನರಿಗೆ ಇದರ ಪ್ರಯೋಜನ ಸಿಗುತ್ತಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ 6.11 ಕೋಟಿ ಜನಸಂಖ್ಯೆಯಿದೆ. ಈ ಪೈಕಿ 4.33 ಕೋಟಿ ಜನ (ಶೇ.74) ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ಬರುತ್ತಾರೆ. ಕರ್ನಾಟಕಕ್ಕೆ 26 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ನಾವು ಪೂರೈಸಿದ್ದೇವೆ ಎಂದು ಅವರು ಹೇಳಿದರು.

ಬಾಕಿ ಪಾವತಿ: ಪಡಿತರ ಸಬ್ಸಿಡಿ ಸೇರಿದಂತೆ ರಾಜ್ಯಕ್ಕೆ 2015-16ರಿಂದ 1200 ಕೋಟಿ ರೂ.ಗಳನ್ನು ಪಾವತಿಸುವುದು ಬಾಕಿಯಿತ್ತು. ಈಗಾಗಲೆ 350 ರಿಂದ 400 ಕೋಟಿ ರೂ.ಗಳನ್ನು ನೀಡಿದ್ದೇವೆ. ಇನ್ನುಳಿದ 795 ಕೋಟಿ ರೂ.ಗಳನ್ನು ಬಿಡುಗಡೆ ಮಾಡುತ್ತೇವೆ. ರಾಜ್ಯ ಸರಕಾರದ ಪ್ರಸ್ತಾವನೆಗಳು ವಿಳಂಬವಾಗಿ ಬಂದ ಹಿನ್ನೆಲೆಯಲ್ಲಿ ಹಣ ಪಾವತಿಯಾಗಿರಲಿಲ್ಲ ಎಂದು ಅವರು ಹೇಳಿದರು.

ಭಾರತೀಯ ಆಹಾರ ನಿಗಮ(ಎಫ್‌ಸಿಐ)ವು 18 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ‘ಸ್ಟೀಲ್ ಸಿಲೋಸ್’ಗಳನ್ನು ನಿರ್ಮಿಸುವ ಸಂಬಂಧ 2016-17ರಲ್ಲಿ ಕಾರ್ಯ ಯೋಜನೆ ಸಿದ್ಧಪಡಿಸಿತ್ತು. ದೇಶದ ಆರು ಕಡೆ 2.5 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ಸಿಲೋಸ್‌ಗಳನ್ನು ನಿರ್ಮಾಣ ಕಾರ್ಯ ಪೂರ್ಣಗೊಳಿಸಿದ್ದೇವೆ ಎಂದು ರಾಮ್‌ವಿಲಾಸ್ ಪಾಸ್ವಾನ್ ಹೇಳಿದರು.

ಗ್ರಾಹಕರ ಸಹಾಯವಾಣಿಗಳನ್ನು 14 ರಿಂದ 60ಕ್ಕೆ ಹೆಚ್ಚಿಸಲಾಗಿದೆ. ಗ್ರಾಹಕರ ಹಕ್ಕುಗಳನ್ನು ಸಂರಕ್ಷಿಸುವ ಸಂಬಂಧ ಜಾರಿಗೆ ತರಲು ಉದ್ದೇಶಿಸಿರುವ ನೂತನ ಕಾಯ್ದೆಯು ಲೋಕಸಭೆಯಲ್ಲಿ ಅನುಮೋದನೆ ಪಡೆದುಕೊಂಡಿದೆ. ಆದರೆ, ರಾಜ್ಯಸಭೆಯಲ್ಲಿ ಎರಡು ವರ್ಷಗಳಿಂದ ಬಾಕಿಯಿದೆ ಎಂದು ಅವರು ತಿಳಿಸಿದರು.

ಗ್ರಾಹಕರ ನ್ಯಾಯಾಲಯಗಳು ಜಿಲ್ಲಾ ಮಟ್ಟದಲ್ಲಿ ಮೊದಲು 20 ಲಕ್ಷ ರೂ.ಗಳವರೆಗಿನ ಪ್ರಕರಣಗಳ ಬಗ್ಗೆ ಮಾತ್ರ ವಿಚಾರಣೆ ನಡೆಸುತ್ತಿದ್ದವು. ಈಗ ಆ ಮಿತಿಯನ್ನು 1 ಕೋಟಿ ರೂ.ಗಳಿಗೆ ವಿಸ್ತರಿಸಲಾಗಿದೆ. ಅದೇ ರೀತಿ ರಾಜ್ಯಮಟ್ಟದ ನ್ಯಾಯಾಲಯವು 1 ರಿಂದ 10 ಕೋಟಿ ರೂ., ರಾಷ್ಟ್ರಮಟ್ಟದ ನ್ಯಾಯಾಲಯ 10 ಕೋಟಿ ರೂ.ಗಳಿಗೆ ಮೇಲ್ಪಟ್ಟ ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸಲಿದೆ ಎಂದು ಅವರು ಹೇಳಿದರು.

ಪಡಿತರ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗಿದೆ. ದೇಶದಲ್ಲಿ 23.10 ಕೋಟಿ ಪಡಿತರ ಚೀಟಿಗಳಿವೆ. ಶೇ.84.80 ಜನ ಆಧಾರ್ ಕಾರ್ಡ್ ಪಡೆದಿದ್ದಾರೆ. ಶೇ.85.55 ಪಡಿತರ ಚೀಟಿಗಳನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಿಸಲಾಗಿದೆ. ಇದರಿಂದಾಗಿ, 2.62 ಕೋಟಿ ನಕಲಿ ಕಾರ್ಡುಗಳನ್ನು ಪತ್ತೆ ಹಚ್ಚಲಾಗಿದೆ. ಇದರಿಂದ, ಸರಕಾರಕ್ಕೆ 18 ಸಾವಿರ ಕೋಟಿ ರೂ.ಉಳಿತಾಯವಾಗುತ್ತಿದೆ ಎಂದು ರಾಮ್‌ವಿಲಾಸ್ ಪಾಸ್ವಾನ್ ತಿಳಿಸಿದರು.

ದೇಶದಲ್ಲಿ 5,33,165 ನ್ಯಾಯಬೆಲೆ ಅಂಗಡಿಗಳಿವೆ. 3.77 ಲಕ್ಷ ನ್ಯಾಯ ಬೆಲೆ ಅಂಗಡಿಗಳಿಗೆ ಪಿಓಎಸ್ ಯಂತ್ರಗಳನ್ನು ಅಳವಡಿಸಲಾಗಿದೆ. 2019ನೆ ಸಾಲಿನ ಅಂತ್ಯದ ವೇಳೆಗೆ ಎಲ್ಲ ನ್ಯಾಯ ಬೆಲೆ ಅಂಗಡಿಗಳಲ್ಲಿ ಪಿಓಎಸ್ ಯಂತ್ರಗಳನ್ನು ಅಳವಡಿಸಲಾಗುವುದು ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಲೋಕಸಭಾ ಸದಸ್ಯರಾದ ರಾಜೇಶ್‌ ಕುಮಾರ್ ದಿವಾಕರ್, ರಮೇಶ್ ಚಂದ್ರ ಕೌಶಿಕ್, ರಾಜ್ಯ ಸಭಾ ಸದಸ್ಯ ಬಲ್ವಿಂದರ್ ಸಿಂಗ್ ಭುಂದೇರ್, ಗ್ರಾಹಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಅವಿನಾಶ್ ಕೆ.ಶ್ರೀವಾಸ್ತವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News