ವಿಶ್ವವಿದ್ಯಾಲಯಗಳು ಗ್ರಾಮೀಣ ಪ್ರದೇಶಕ್ಕೆ ವಿಸ್ತರಿಸಬೇಕು: ಸಚಿವ ಜಿ.ಟಿ.ದೇವೇಗೌಡ

Update: 2019-01-28 15:37 GMT

ಬೆಂಗಳೂರು, ಜ.28: ವಿಶ್ವವಿದ್ಯಾಲಯಗಳು ಗ್ರಾಮೀಣ ಪ್ರದೇಶಗಳ ಕಡೆಗೆ ಧಾವಿಸಬೇಕು. ಈ ನಿಟ್ಟಿಯಲ್ಲಿ ಪ್ರತಿ ವಿಶ್ವವಿದ್ಯಾಲಯವು ತಮ್ಮ ವ್ಯಾಪ್ತಿಯಲ್ಲಿ ಕನಿಷ್ಠ ಗ್ರಾಮಗಳನ್ನು ದತ್ತು ಪಡೆಯಬೇಕು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯಶಾಸ ವಿಭಾಗದ ಸುವರ್ಣ ಮಹೋತ್ಸವದ ಅಂಗವಾಗಿ ಭಾರತೀಯ ವ್ಯವಹಾರಿಕ ಶೈಕ್ಷಣಿಕ ಪರಿಷತ್ ಹಾಗೂ ಮಲೇಷಿಯಾದ ಲಿಂಕನ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ‘ಜಾಗತಿಕ ಉದ್ಯಮಶೀಲತೆಯಲ್ಲಿ ಹೆಚ್ಚುತ್ತಿರುವ ಅವಕಾಶಗಳು ಮತ್ತು ಸವಾಲುಗಳು’ ಎಂಬ ಎರಡು ದಿನಗಳ ಅಂತರ್‌ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಹಾಗೂ ದೇಶದಲ್ಲಿರುವ ಎಲ್ಲ ವಿವಿಗಳು ಹಳ್ಳಿಗಳಿಗೂ ವಿಸ್ತರಣೆಯಾಗುವ ಮೂಲಕ ಅಲ್ಲಿನ ಶಿಕ್ಷಣ, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ಸ್ವಚ್ಛತೆ, ನೈರ್ಮಲ್ಯ ಪಾಲನೆ, ಕೃಷಿ, ತೋಟಗಾರಿಕೆ ಇತ್ಯಾದಿ ವಿಷಯಗಳ ಬಗ್ಗೆ ಗ್ರಾಮೀಣ ಜನರಿಗೆ ಅರಿವು ಮೂಡಿಸಿ, ಅವರ ಬದುಕು ಹಸನಾಗಲು ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.

ಉದ್ಯೋಗ ನೇಮಕಾತಿ ಘಟಕ: ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ಅಗತ್ಯ ಉದ್ಯೋಗಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರತಿ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ‘ಉದ್ಯೋಗ ನೇಮಕಾತಿ ಘಟಕ’ಗಳನ್ನು ತೆರೆಯಬೇಕು. ಈ ಸಂಬಂಧ ಈಗಾಗಲೇ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳೊಂದಿಗೆ ಮಾತನಾಡಿದ್ದೇನೆ. ಹಾಗಾಗಿ, ಪ್ರತಿ ವಿಶ್ವವಿದ್ಯಾಲಯದಲ್ಲಿ ವಾರ್ಷಿಕ ಪದವಿ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಇದರಲ್ಲಿ ಎಷ್ಟು ಮಂದಿ ಉದ್ಯೋಗ ಪಡೆಯುತ್ತಾರೆ ಎಂಬ ಮಾಹಿತಿಗಳನ್ನು ಸಂಪೂರ್ಣವಾಗಿ ಕಲೆ ಹಾಕಬೇಕು ಎಂದು ಸೂಚಿಸಿದರು.

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ನಿರುದ್ಯೋಗದ ಸಮಸ್ಯೆ ಅಧಿಕವಾಗುತ್ತಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಉದ್ಯೋಗಾವಕಾಶಗಳನ್ನು ದೊರಕಿಸಿಕೊಡಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಎಂಜಿನಿಯರಿಂಗ್ ಪದವಿಗೆ ಸೇರುವವರ ಸಂಖ್ಯೆ ಇತ್ತೀಚಿಗೆ ಕಡಿಮೆಯಾಗಿದ್ದು, ವಾಣಿಜ್ಯ ಕೋರ್ಸ್‌ಗಳು ಕ್ರಾಂತಿಯನ್ನುಂಟು ಮಾಡುತ್ತಿವೆ. ಆದುದರಿಂದ ವಾಣಿಜ್ಯ ಕೋರ್ಸ್‌ಗಳನ್ನು ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಅಗತ್ಯ ಕೌಶಲ್ಯಗಳನ್ನು ಕಲಿಸಿಕೊಡುವ ಮೂಲಕ ಉದ್ಯಮಶೀಲರನ್ನಾಗಿಸಲು ಈ ಸಮ್ಮೇಳನ ನೆರವಾಗಲಿದೆ ಎಂದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಎನ್.ಆರ್.ಶೆಟ್ಟಿ ಮಾತನಾಡಿ, ಜಾಗತೀಕರಣದ ಸಂದರ್ಭದಲ್ಲಿ ಜಾಗತಿಕ ಉದ್ಯಮಗಳನ್ನು ಕಟ್ಟುವುದು ಕೇವಲ ಕೆಲವೇ ಮಂದಿಗೆ ಸೀಮಿತವಲ್ಲ. ಉದ್ಯಮ ಸ್ಥಾಪನೆಗೆ ಎಲ್ಲರಿಗೂ ಮುಕ್ತ ಅವಕಾಶಗಳಿವೆ. ಹಾಗಾಗಿ, ಪ್ರಸ್ತುತ ವಿಜ್ಞಾನ, ತಂತ್ರಜ್ಞಾನದ ಬೆಳವಣಿಗೆಗೆ ತಕ್ಕಂತೆ ಶಾಲಾ ಕಾಲೇಜುಗಳಲ್ಲಿ ಪಠ್ಯಗಳನ್ನು ಬದಲಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಡಿ. ಕೆಂಪರಾಜು, ಬೆಂಗಳೂರು ವಿವಿ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್, ಐಸಿಬಿಇ ಮುಖ್ಯಸ್ಥ ಡಾ.ಬಿ.ಸಿ.ಸಂಜೀವಯ್ಯ, ಎಸ್‌ಇಎ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ.ಟಿ.ಶ್ರೀನಿವಾಸ ಸೇರಿದಂತೆ ಮತ್ತಿತರಿದ್ದರು.

ರಾಜ್ಯದಲ್ಲಿರುವ ವಿಶ್ವವಿದ್ಯಾನಿಲಯಗಳು ವಿದೇಶಿ ವಿವಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಪರಸ್ಪರ ಶಿಕ್ಷಣ ವ್ಯವಸ್ಥೆಯ ಅಧ್ಯಯನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು. ಈ ಒಡಂಬಡಿಕೆಯಿಂದ ವಿದೇಶಗಳಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ನಮ್ಮ ವಿದ್ಯಾರ್ಥಿಗಳು ಅರಿತುಕೊಳ್ಳಬಹುದು ಹಾಗೂ ವಿದೇಶಿ ವಿದ್ಯಾರ್ಥಿಗಳು ನಮ್ಮ ಶಿಕ್ಷಣ ಪದ್ಧತಿಯನ್ನು ಅರಿತುಕೊಳ್ಳುವ ಮೂಲಕ ಪರಸ್ಪರ ಶಿಕ್ಷಣ ವ್ಯವಸ್ಥೆಯಲ್ಲಿನ ಕೊರತೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ.

- ಜಿ.ಟಿ.ದೇವೇಗೌಡ, ಉನ್ನತ ಶಿಕ್ಷಣ ಸಚಿವ

ಭಾರತೀಯರು ಅದ್ಭುತ ಕನಸುಗಾರರಾಗಿದ್ದು, ಇಲ್ಲಿ ಉದ್ಯಮಗಳ ಸ್ಥಾಪನೆಗೆ ಅಪಾರವಾದ ಅವಕಾಶಗಳಿವೆ. ಆದರೆ, ಉದ್ಯಮ ಸ್ಥಾಪನೆಗೆ ಮುಂದಾಗುವವರ ಸಂಖ್ಯೆ ಬಹಳಷ್ಟು ಕಡಿಮೆಯಿದೆ. ಕಷ್ಟವಿಲ್ಲದೆ ಸಾಧನೆ ಅಸಾಧ್ಯ. ಹೀಗಾಗಿ, ಕಷ್ಟಪಡುವ ಮೂಲಕ ವಿದ್ಯಾರ್ಥಿಗಳು ದೊಡ್ಡ ಉದ್ದಿಮೆದಾರರಾಗಲು ಯತ್ನಿಸಬೇಕು.

-ಡಾ.ಅಮಿಯಾ ಭೌಮಿಕ್, ಮಲೇಶಿಯಾದ ಲಿಂಕನ್ ವಿವಿ ಕುಲಪತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News